Greater Bengaluru News9 : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ನೀತಿ ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಮೇ 11ರಿಂದ ಅಧಿಕೃತವಾಗಿ ಜಾರಿಯಾದ ಈ ಹೊಸ ನೀತಿಯಲ್ಲಿ ದಶಕಗಳ ಹಿಂದಿನ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆಯನ್ನು ಸರ್ಕಾರ ಅಳವಡಿಸಿಕೊಂಡಿದೆ. ಈ ಮಾದರಿಯ ಅಬಕಾರಿ ನೀತಿ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಹೊಸ ನೀತಿಯ ಪರಿಣಾಮವಾಗಿ ಸಾಮಾನ್ಯ ಜನರು ಹೆಚ್ಚು ಬಳಸುವ ಕಡಿಮೆ ಬೆಲೆಯ ಮದ್ಯಗಳ ದರ ಏರಿಕೆಯಾಗುವ ಸಾಧ್ಯತೆ ಇದೆ. ವಿಸ್ಕಿ, ರಮ್, ಬ್ರಾಂಡಿ ಹಾಗೂ ವೋಡ್ಕಾ ಸೇರಿದಂತೆ ಹಲವು ಮದ್ಯಗಳ 180 ಮಿ.ಲೀ ಕ್ವಾರ್ಟರ್ ಬಾಟಲ್ ಮತ್ತು ಟೆಟ್ರಾ ಪ್ಯಾಕ್ಗಳ ಬೆಲೆ ಶೇ.20ರಿಂದ 30ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ (KBDA) ಪ್ರಕಾರ, ಮೊದಲ ಐದು ಸ್ಲ್ಯಾಬ್ಗಳ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಸರ್ಕಾರ ಶೇ.20ರಿಂದ 30ರಷ್ಟು ಹೆಚ್ಚಿಸಿದೆ. ಕಳೆದ ವರ್ಷ 63 ರೂಪಾಯಿಗೆ ಲಭ್ಯವಿದ್ದ ಕ್ವಾರ್ಟರ್ ಬೆಲೆ ಈಗಾಗಲೇ 80 ರೂಪಾಯಿಗೆ ಏರಿಕೆಯಾಗಿದ್ದು, ಹೊಸ ನೀತಿಯ ಬಳಿಕ ಅದು 105 ರೂಪಾಯಿಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ, ವಿದೇಶಿ ಹಾಗೂ ಪ್ರೀಮಿಯಂ ಬ್ರಾಂಡ್ಗಳ ಮದ್ಯದ ಬೆಲೆಯಲ್ಲಿ ಇಳಿಕೆ ಕಾಣಬಹುದು ಎನ್ನಲಾಗಿದೆ. ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್ ಹಾಗೂ ಯುನೈಟೆಡ್ ಸ್ಪಿರಿಟ್ಸ್ ಕಂಪನಿಗಳ ಕೆಲವು ಬ್ರಾಂಡ್ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.10ರಿಂದ 15ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಆ ಮದ್ಯಗಳ ದರ ಶೇ.16ರಿಂದ 20ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಸರ್ಕಾರದ ಈ ಕ್ರಮದಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗಲಿದ್ದು, ಸ್ಥಳೀಯ ಮದ್ಯ ತಯಾರಿಕಾ ಘಟಕಗಳಿಗೆ ಸಂಕಷ್ಟ ಎದುರಾಗಬಹುದು ಎಂದು ಕೆಬಿಡಿಎ ಆತಂಕ ವ್ಯಕ್ತಪಡಿಸಿದೆ. ದೊಡ್ಡ ಕಂಪನಿಗಳು ಬೆಲೆ ಬದಲಾವಣೆಯನ್ನು ಸಮತೋಲನಗೊಳಿಸಬಲ್ಲವು. ಆದರೆ ಕಡಿಮೆ ಬೆಲೆಯ ಮದ್ಯವನ್ನೇ ಅವಲಂಬಿಸಿರುವ ಸಣ್ಣ ಪ್ರಾದೇಶಿಕ ಕಂಪನಿಗಳು ವ್ಯವಹಾರ ಕುಸಿತದ ಭೀತಿಯನ್ನು ಎದುರಿಸುತ್ತಿವೆ ಎಂದು ಸಂಘದ ಸದಸ್ಯರು ಹೇಳಿದ್ದಾರೆ.
ರಾಜ್ಯದ ಅಬಕಾರಿ ಆದಾಯದಲ್ಲಿ ಶೇ.70ರಿಂದ 75ರಷ್ಟು ಕೊಡುಗೆ ನೀಡುವ ಸಾಮಾನ್ಯ ಮದ್ಯಗಳ ಮೇಲೆಯೇ ಹೆಚ್ಚುವರಿ ತೆರಿಗೆ ಹೊರೆ ಬಿದ್ದಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


