Greater Bengaluru News9 : ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಆಡಳಿತವು ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇ-ಖಾತಾ ಪಡೆಯದೇ ಸಂಕಷ್ಟ ಅನುಭವಿಸುತ್ತಿರುವ ಸಾರ್ವಜನಿಕರಿಗಾಗಿ ಮೇ 16ರಿಂದ ಬೃಹತ್ ಇ-ಖಾತಾ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸುಮಾರು 50 ಸ್ಥಳಗಳಲ್ಲಿ ಈ ಮೇಳ ನಡೆಯಲಿದ್ದು, ಸುಮಾರು 25 ಲಕ್ಷ ಆಸ್ತಿಗಳನ್ನು ಇ-ಖಾತಾ ವ್ಯಾಪ್ತಿಗೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಸುಮಾರು 10 ಲಕ್ಷ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೇ 16ರ ನಂತರ ಪ್ರತಿ ಶನಿವಾರ ಇ-ಖಾತಾ ಮೇಳ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ.
ಇ-ಖಾತಾ ಮೇಳದಲ್ಲಿ ಯಾವುದೇ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಜೊತೆಗೆ ಲಂಚಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಮೂಲಕವೇ ಸೇವೆ ಪಡೆಯಬಹುದಾಗಿದೆ.
ಇ-ಖಾತಾಗೆ ಅಗತ್ಯವಿರುವ ದಾಖಲೆಗಳು ಹೀಗಿವೆ:
- ಸೇಲ್ ಡೀಡ್ / ಟೈಟಲ್ ಡೀಡ್
- ಪ್ರಾಪರ್ಟಿ ಟ್ಯಾಕ್ಸ್ ರಸೀದಿ
- ಎಸ್ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಐಡಿ
- ಆಧಾರ್ ಕಾರ್ಡ್ ಹಾಗೂ ಇ-ಕೆವೈಸಿ
- ಇಸಿ (Encumbrance Certificate)
- ಬೆಸ್ಕಾಂ ಬಿಲ್
ಆಸ್ತಿಯ ಜಿಪಿಎಸ್ ಲೊಕೇಶನ್
ನಗರದ ಜನರಿಗೆ ಇ-ಖಾತಾ ಸೇವೆಯನ್ನು ಮತ್ತಷ್ಟು ಸರಳ ಹಾಗೂ ಪಾರದರ್ಶಕಗೊಳಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


