Greater Bengaluru News9 : ರಾಜ್ಯದಲ್ಲಿ ಸೆಪ್ಟಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ಆರಂಭವಾಗಲಿದೆ. 16 ದಿನಗಳ ಕಾಲ ನಡೆಯಲಿರುವ ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. ಈ ಬಾರಿ ಕ್ಷಿಪ್ರ ಸಮಯದಲ್ಲಿ ಜಾತಿ ಗಣತಿ ನಡೆಸಲು ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಸಮೀಕ್ಷೆಯ ಕಾರ್ಯವಿಧಾನ ಹೇಗಿರಲಿದೆ ಎಂಬ ಸಮಗ್ರ ವರದಿ ಇಲ್ಲಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ಮತ್ತೆ ಜಾತಿ ಗಣತಿ ನಡೆಯುತ್ತಿದೆ. ಸುಮಾರು 1.75 ಲಕ್ಷ ಗಣತಿದಾರರ ಮೂಲಕ, ತಂತ್ರಜ್ಞಾನ ಬಳಸಿಕೊಂಡು ಕರಾರುವಾಕ್ ಹಾಗೂ ಜಾಗ್ರತೆಯಿಂದ ಸಮೀಕ್ಷೆ ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ. 16 ದಿನಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ, ಡಿಸೆಂಬರ್ ವೇಳೆಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.
60 ವಿವಿಧ ಪ್ರಶ್ನೆಗಳ ಮೂಲಕ ಗಣತಿದಾರರು ಸಮೀಕ್ಷೆ ನಡೆಸಲಿದ್ದಾರೆ. ಮೊಬೈಲ್ ಆ್ಯಪ್ ಬಳಸಿ, ಗಣತಿದಾರರು ಮಾಹಿತಿ ಎಂಟ್ರಿ ಮಾಡಲಿದ್ದಾರೆ. ಮನೆ, ಮನೆಗಳ ಸಮೀಕ್ಷೆ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ.
ಸಮೀಕ್ಷೆಗೆ ಮನೆ ಗುರುತಿಸುವ ವಿಧಾನ ಹೇಗೆ? ಸಮೀಕ್ಷೆ ನಡೆಸಲು ಸಮೀಕ್ಷಾ ಬ್ಲಾಕಿನ ಭೌಗೋಳಿಕ ವ್ಯಾಪ್ತಿಯನ್ನು ನಿರ್ಧರಿಸಬೇಕಾಗಿದೆ. ಈ ಬಾರಿ ಸಮೀಕ್ಷೆಯಲ್ಲಿ ಮನೆಗಳಿಗೆ ಎಸ್ಕಾಂಗಳು ಒದಗಿಸಿರುವ ವಿದ್ಯುತ್ ಸಂಪರ್ಕದ ಆರ್.ಆರ್. ಮೀಟರ್ಗಳ ಆಧಾರದ ಮೇಲೆ ಸಮೀಕ್ಷಾ ಬ್ಲಾಕಿನ ವ್ಯಾಪ್ತಿಯನ್ನು ನಿರ್ಧರಿಸಲಾಗುತ್ತದೆ. ಸಮೀಕ್ಷಾ ಸಮಯದಲ್ಲಿ ಎಲ್ಲಾ ಮನೆಗಳು, ಕುಟುಂಬಗಳು ಮತ್ತು ವ್ಯಕ್ತಿಗಳನ್ನು ಸಮೀಕ್ಷೆಯಲ್ಲಿ ಒಳಪಡಿಸಲು ಸಮೀಕ್ಷಾ ಬ್ಲಾಕಿನಲ್ಲಿರುವ ಪ್ರತಿಯೊಂದು ಮನೆ ಗುರುತಿಸುವುದರ ಜೊತೆಗೆ, ವಸತಿ ರಹಿತ ಕುಟುಂಬಗಳು, ವ್ಯಕ್ತಿಗಳು ವಾಸಿಸುತ್ತಿರುವ ಸ್ಥಳ, ಪ್ರದೇಶಗಳನ್ನು ಗುರುತಿಸುವುದು ಅಗತ್ಯವಾಗಿದೆ.
2014-15ರಲ್ಲಿ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಮನೆಗಳನ್ನು ಗುರುತಿಸುವುದಕ್ಕಾಗಿ 2011ರ ಜನಗಣತಿ ಬ್ಲಾಕ್‌ಗಳನ್ನು ಸಮೀಕ್ಷಾ ಘಟಕವಾಗಿ ಪರಿಗಣಿಸಲಾಗಿತ್ತು. ಜನಗಣತಿ ಪ್ರಕ್ರಿಯೆಯಲ್ಲಿ ತಯಾರಿಸಿದ ಬ್ಲಾಕ್ ಲೇಔಟ್ ನಕ್ಷೆ ಹಾಗೂ ಸಂಕ್ಷಿಪ್ತ ಮನೆಪಟ್ಟಿಗಳ ಆಧಾರದ ಮೇಲೆ ಸಮೀಕ್ಷಕರು ಮನೆ-ಮನೆಗೆ ಭೇಟಿ ನೀಡಿ, ರಾಜ್ಯದ ಎಲ್ಲಾ ಕುಟುಂಬಗಳ/ಜನರ ಸಮೀಕ್ಷೆಯನ್ನು ನಿರ್ವಹಿಸಿದ್ದರು. ಆದರೆ 2011ರಲ್ಲಿ ತಯಾರಿಸಲಾದ ನಕ್ಷೆ ಮತ್ತು ಮನೆಪಟ್ಟಿಗಳು ಬಹಳ ಹಳೆಯದಾಗಿದ್ದು, ಅವು ಇಂದಿನ ವಾಸ್ತವಿಕ ಚಿತ್ರಣವನ್ನು ಪ್ರತಿಬಿಂಬಿಸದಿರುವ ಕಾರಣ ಪ್ರಸ್ತುತ ಸಮೀಕ್ಷೆಗಾಗಿ ಒಂದು ವಿನೂತನ ಪದ್ಧತಿಯನ್ನು ಅನ್ವೇಷಿಸಲಾಗಿದೆ.
ಇಂಧನ ಇಲಾಖೆ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಸರಬರಾಜು ಸಂಸ್ಥೆ (ESCOM) ಗಳ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕ ನೀಡಲಾಗಿರುವ ವಿದ್ಯುತ್ ಮೀಟರ್ (R.R.No.) ಗಳ ಆಧಾರದ ಮೇಲೆ ರಾಜ್ಯದಲ್ಲಿರುವ ಎಲ್ಲಾ ಮನೆಗಳ ಪಟ್ಟಿಯನ್ನು (ವಿಳಾಸದೊಂದಿಗೆ) ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ ಒಬ್ಬ ಮೀಟರ್ ರೀಡರ್ ಕಾರ್ಯಕ್ಷೇತ್ರದಲ್ಲಿ ಸುಮಾರು 3,000 ಮೀಟರ್‌ಗಳು (ವಿದ್ಯುತ್ ಸಂಪರ್ಕಗಳು) ಬರುತ್ತವೆ. ಅಂದರೆ ಸುಮಾರು 3,000 ಮನೆಗಳು ಅಲ್ಲಿ ಇರುತ್ತವೆ. ಒಬ್ಬ ಸಮೀಕ್ಷಾದಾರರಿಗೆ ಸುಮಾರು 150 ಮನೆಗಳ ಸಮೀಕ್ಷಾ ಕಾರ್ಯವನ್ನು ವಹಿಸಿದಲ್ಲಿ ಒಬ್ಬ ಮೀಟರ್ ರೀಡರ್ ಕಾರ್ಯವ್ಯಾಪ್ತಿಯಲ್ಲಿ 20 ಗಣತಿ ಬ್ಲಾಕ್‌ಗಳನ್ನು ರಚಿಸಲಾಗುತ್ತದೆ.
ಮನೆಪಟ್ಟಿ ತಯಾರಿಕೆ ಹೇಗೆ? ಪ್ರತಿ ಮನೆಯನ್ನು ‘ಜಿಯೋಟ್ಯಾಗ್’ ಮಾಡಿ ಗಣತಿ ಬ್ಲಾಕಿನ ವ್ಯಾಪ್ತಿಯಲ್ಲಿ ಒಳಪಡಿಸಲಾಗುವುದು. ಸಮೀಕ್ಷಾದಾರರಿಗೆ ಮನೆಗಳನ್ನು ಸುಲಭವಾಗಿ ಗುರುತಿಸಿ ಮನೆ ಭೇಟಿ ನೀಡಲು ಅನುಕೂಲವಾಗುವಂತೆ ಸುಮಾರು 150 ಮನೆಗಳಿರುವ ಪ್ರದೇಶವನ್ನು ಒಂದು ಸಮೀಕ್ಷಾ ಬ್ಲಾಕ್ (Enumeration Block) ಆಗಿ ವೈಜ್ಞಾನಿಕವಾಗಿ ಸೃಜಿಸಲಾಗಿದೆ.
ಸಮೀಕ್ಷಾ ಬ್ಲಾಕಿನಲ್ಲಿರುವ ಪ್ರತಿಯೊಂದು ಮನೆಗೆ (ಕುಟುಂಬಕ್ಕೆ) ಒಂದು ವಿಶಿಷ್ಟ ಮನೆ ಸಂಖ್ಯೆ UHID (Unique Household Identity) ಹೊಂದಿರುವ ಮನೆಪಟ್ಟಿಯನ್ನು ಒದಗಿಸಲಾಗುತ್ತಿದೆ. ಇದರಿಂದ ಯಾವುದೇ ಮನೆ ತಪ್ಪಿ ಹೋಗದಂತೆ, ಮನೆಗಳ ಸಮೀಕ್ಷೆ ಒಂದಕ್ಕಿಂತ ಹೆಚ್ಚು ಬಾರಿ ಆಗದಂತೆ (without duplication) ಪೂರ್ಣ ವ್ಯಾಪ್ತಿಯೊಂದಿಗೆ, ನಿಖರವಾಗಿ ಸಮೀಕ್ಷೆ ನಿರ್ವಹಿಸಲು ಸಾಧ್ಯವಾಗುತ್ತದೆ.
ಸಮೀಕ್ಷಕರು ಮನೆಯ ಸಮೀಕ್ಷೆ ಮಾಡಲು ಹೋದೊಡನೆ ಮಾಡಬೇಕಾದ ಮೊದಲ ಕರ್ತವ್ಯವೆಂದರೆ ಮನೆಗೆ ಈಗಾಗಲೇ ಅಂಟಿಸಲಾದ ‘ಸ್ಟಿಕರ್’ನ್ನು ಪರಿಶೀಲಿಸಿ ಅದರಲ್ಲಿ ಬರೆಯಲಾದ UHID ಸಂಖ್ಯೆಯನ್ನು ಗಮನಿಸಿ ಅವರು ತಲುಪಿರುವ ಮನೆ, ಸಮೀಕ್ಷೆ ಮಾಡಲು ನಿಗದಿಪಡಿಸಿರುವ ಮನೆಯೇ ಹೇಗೆಂಬುದನ್ನು ಸ್ಥಾನಿಕವಾಗಿ ಜಿಯೋ ಕೋ ಅರ್ಡಿನೇಟ್ಸ್ (Geo co-ordinates) ಆಧಾರದ ಮೇಲೆ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು.
ರಾಜ್ಯದಲ್ಲಿರುವ ಪ್ರತಿಯೊಂದು ವಿದ್ಯುಚ್ಛಕ್ತಿ ಸಂಪರ್ಕ ಮೀಟರಿಗೆ ಒಂದು ವಿಶಿಷ್ಟ ಆರ್ಆರ್ ಸಂಖ್ಯೆ (R.R No.) ಯನ್ನು ESCOMಗಳು (ವಿದ್ಯುತ್ ಸರಬರಾಜು ಸಂಸ್ಥೆ) ನೀಡಿರುತ್ತವೆ. ಇವುಗಳನ್ನು ಆಧರಿಸಿಯೇ ಪರಿಶೀಲನೆ ನಡೆಸಿ, ಮೀಟರ್ ರೀಡರ್‌ಗಳು ಸಮೀಕ್ಷೆಗೆ ಒಳಪಡಿಸಬೇಕಾಗಿರುವ R.R linked ಮನೆಗಳನ್ನು ಪಟ್ಟಿ ಮಾಡಿದ್ದಾರೆ.
ರಾಜ್ಯದಲ್ಲಿ ಅತಿದೂರದಲ್ಲಿರುವ ಗುಡ್ಡಗಾಡು, ಅರಣ್ಯ ಹಾಗೂ ಅಂತಹ ಕೆಲವು ದುರ್ಗಮ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವ ಮನೆಗಳು ಇರುವ ಸಾಧ್ಯತೆಗಳಿವೆ. ಇದಲ್ಲದೆ, ನಗರ ಪ್ರದೇಶಗಳ ನಿಬಿಡ ಜನವಸತಿ ಇರುವ ಅಥವಾ ಸ್ಲಮ್ (slum) ಪ್ರದೇಶಗಳಲ್ಲಿ ಮನೆಗಳು ಇಕ್ಕಟ್ಟಾಗಿದ್ದು, ಪ್ರತ್ಯೇಕ ಆರ್.ಆರ್. ಸಂಖ್ಯೆ ಇಲ್ಲದೇ ಇರುವ ಸನ್ನಿವೇಶಗಳು ಇರಬಹುದು. ಅಂತಹ ಪ್ರಕರಣಗಳಲ್ಲಿ-ಅಂತಹ ಮನೆಗಳನ್ನು ಸಮೀಕ್ಷೆಯಲ್ಲಿ ಒಳಪಡಿಸುವ ಅವಕಾಶವನ್ನು ಆ್ಯಪ್‌ನಲ್ಲಿ ಕಲ್ಪಿಸಲಾಗಿರುತ್ತದೆ. ಅಂತಹ ಮನೆಗಳನ್ನು ಸಮೀಕ್ಷಕರು ‘ಜಿಯೋಟ್ಯಾಗ್’ (Geo tag) ಮಾಡಿ, ಪರಿಶೀಲನೆಗಾಗಿ ಸಮೀಕ್ಷಾ ಮೇಲ್ವಿಚಾರಕರಿಗೆ ನೀಡಬೇಕು.
ಸಮೀಕ್ಷೆ ಕಾರ್ಯವಿಧಾನ ಹೇಗಿರಲಿದೆ?
ಹಂತ-1: ಮೀಟರ್ ರೀಡರ್‌ಗಳು, ಗ್ರಾಮ ಆಡಳಿತಾಧಿಕಾರಿ ಹಾಗೂ ಇತರ ನಾಮ ನಿರ್ದೇಶಿಸಿದ ಪ್ರಾದೇಶಿಕ ಸಿಬ್ಬಂದಿಯು ವಹಿಸಿಕೊಟ್ಟಿರುವ ಗ್ರಾಮ/ವಾರ್ಡ್ನಲ್ಲಿರುವ ಪ್ರತಿಯೊಂದು ಮನೆಗೆ ಭೇಟಿ ನೀಡಿ, GPS Co-ordinatesಗಳನ್ನು ಸೆರೆಹಿಡಿಯುತ್ತಾರೆ. ಇಡಿಸಿಎಸ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಆ್ಯಪ್ Unique Household (UHID) ನ್ನು ತಾನಾಗಿಯೇ (Automatic) ಜನರೇಟ್ ಮಾಡುತ್ತದೆ. ಕುಟುಂಬದ ಮುಖ್ಯಸ್ಥ, ವಿಳಾಸ ಹಾಗೂ ವಿದ್ಯುತ್ ಸಂಪರ್ಕದ ಕೆಟಗರಿ ಇತ್ಯಾದಿಗಳನ್ನು ದಾಖಲಿಸುತ್ತದೆ.
ಹಂತ-2: UHID ಸಂಖ್ಯೆಯನ್ನು ಬರೆಯಲು ಅವಕಾಶವಿರುವ ಸ್ಟಿಕ್ಕರ್ನ್ನು ಪ್ರತಿ ಮನೆಯ ಮುಂಬಾಗಿಲಿಗೆ ಅಂಟಿಸುವುದು. ಸಮೀಕ್ಷಕರಿಗೆ/ಮೇಲ್ವಿಚಾರಕರಿಗೆ ಮನೆಯನ್ನು ಗುರುತಿಸಲು ಈ ಸ್ಟಿಕ್ಕರ್ ಸಹಾಯಕವಾಗುತ್ತದೆ. ಅಪಾರ್ಟ್ಮೆಂಟ್ ಹಾಗೂ ಇತರ ಬಹು ಮನೆ ಸಮುಚ್ಚಯಗಳಲ್ಲಿ ಕಟ್ಟಡದ ಮುಂಭಾಗದಲ್ಲಿ ಒಂದು GPS ಪಾಯಿಂಟ್ನ್ನು ಕ್ಯಾಪ್ಚರ್ ಮಾಡಿರುತ್ತಾರೆ. ಆದಾಗ್ಯೂ ಪ್ರತಿಯೊಂದು ವಸತಿ ಘಟಕಕ್ಕೂ ಪ್ರತ್ಯೇಕ ಸ್ಟಿಕ್ಕರ್ ಹಾಗೂ UHID ಇರಲಿದೆ.
ಹಂತ-3: GPS tagged ಮನೆಗಳು ಮತ್ತು UHIDಗಳನ್ನು ಸಂಯೋಜಿಸಲಾಗುವುದು. ಪೂರಕ ದತ್ತಾಂಶ (Supplementary Databases) ಗಳೊಂದಿಗೆ ನಿರಂತರವಾಗಿ ವ್ಯಾಲಿಡೇಟ್ ಮಾಡಲಾಗುವುದು. ಯಾವುದೇ ಅಂತರಗಳು ಹಾಗೂ ಹೊಂದಾಣಿಕೆಯಾಗದ ಅಂಶಗಳನ್ನು ಕ್ಷೇತ್ರ ಪರಿಶೀಲನೆ ಮುಖಾಂತರ ಪರಿಹರಿಸಲಾಗುತ್ತದೆ.
ಹಂತ-4: ಒಂದು ಪ್ರದೇಶದಲ್ಲಿರುವ ಮನೆಗಳನ್ನು ಗುರುತಿಸಿದ ನಂತರ, ಭೌಗೋಳಿಕವಾಗಿ ನಿಕಟವಾಗಿರುವ 100ರಿಂದ 150 ಮನೆಗಳ ಗುಂಪನ್ನು (cluster) ರಚಿಸಲಾಗುವುದು. ಪ್ರತಿಯೊಂದು ಕ್ಲಸ್ಟನ್ನು ಒಂದು ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯಲ್ಲಿರುವಂತೆ ರೂಪಿಸಲಾಗುವುದು. ಪ್ರತಿ ಸಮೀಕ್ಷಾ ಬ್ಲಾಕ್ (EB) ಗೆ (ಪ್ರತ್ಯೇಕ ಸಂಕೇತ ಸಂಖ್ಯೆ (code) ನೀಡುವುದರ ಮೂಲಕ ಇದು ಸಮೀಕ್ಷೆಯ ಮೂಲ ಘಟಕವಾಗಿರುತ್ತದೆ.
ಹಂತ-5: ಸಮೀಕ್ಷಾ ಬ್ಲಾಕಿನ (EB) ಸರಹದ್ದು ತೋರಿಸುವ ನಕ್ಷೆ (ಆ್ಯಪ್‌ನಲ್ಲಿ ಡಿಜಿಟೆಲ್ ರೂಪದಲ್ಲಿರುತ್ತದೆ) ಅಗತ್ಯವಿದ್ದಲ್ಲಿ ಮುದ್ರಿತ ಕಾಪಿಯನ್ನು ನೀಡಲಾಗುವುದು. UHID ಹೊಂದಿರುವ ಮನೆಪಟ್ಟಿ (ವಹಿಸಿಕೊಡಲಾದ ಸಮೀಕ್ಷಾ ಬಾಕಿಗೆ ಸಂಬಂಧಿಸಿದಂತೆ) ಪ್ರತಿ ಮನೆಗೆ ಸಂಬಂಧಿಸಿದಂತೆ GPS ಪಾಯಿಂಟ್, ಸಮೀಕ್ಷಾದಾರರ ಕಾರ್ಯವ್ಯಾಪ್ತಿ EBಗೆ ಸೀಮಿತವಾಗಿರುವುದರಿಂದ ಹಾಗೂ ಅದರಲ್ಲಿನ ಮನೆಗಳು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡುವ ಹೊಣೆಗಾರಿಕೆ ಸಮೀಕ್ಷಕರ ಮೇಲೆ ಇರಲಿದೆ.
ಹಂತ-6: ಪ್ರಶ್ನಾವಳಿಗೆ ಅನುಗುಣವಾಗಿ ಸಮೀಕ್ಷೆ ಮಾಡುವುದಕ್ಕೆ ಮೊದಲು ಸಮೀಕ್ಷಾದಾರರು ಬ್ಲಾಕಿನಲ್ಲಿರುವ ಪ್ರತಿಯೊಂದು ಮನೆಗೆ ಭೇಟಿ ನೀಡಿ, ಅಲ್ಲಿ ಅಂಟಿಸಿರುವ ಸ್ಟಿಕ್ಕರ್ನ್ನು ಪರಿಶೀಲಿಸಿ, ಅನಂತರ ಮನೆಯ UHIDಯನ್ನು ಆ್ಯಪ್‌ನಲ್ಲಿ ಎಂಟ್ರಿ ಮಾಡಬೇಕು. ಒದಗಿಸಲಾಗಿರುವ ಮನೆಪಟ್ಟಿಯಲ್ಲಿ ವಾಸ್ತವಿಕವಾಗಿ ವಾಸವಿರುವ ಮನೆ ತಪ್ಪಿಹೋಗಿದ್ದಲ್ಲಿ ಸಮೀಕ್ಷಕರು ಆ ಮನೆಯನ್ನು ಆ್ಯಪ್‌ನಲ್ಲಿ ಸೇರಿಸಿಕೊಳ್ಳಬೇಕು. ಆ್ಯಪ್ನಲ್ಲಿರುವ ತಂತ್ರಾಂಶವು ಹೊಸ UHID ಹಾಗೂ ಸಮೀಕ್ಷಾ ಐಡಿಯನ್ನು ಜನರೇಟ್ ಮಾಡಿ, ಸಮೀಕ್ಷೆ ಮಾಡಲು ಅವಕಾಶ ನೀಡುತ್ತದೆ. ಅದೇ ರೀತಿಯಲ್ಲಿ ಕೆಲವು ವಾಸದ ಮನೆಗಳು ಖಾಲಿ ಇದ್ದರೆ, ಅಂತಹ ಸನ್ನಿವೇಶಗಳನ್ನು ಮೇಲ್ವಿಚಾರಕರಿಗೆ ತಿಳಿಸಬೇಕು. ಮನೆ ಖಾಲಿ ಇರುವ ಬಗ್ಗೆ ಮೇಲ್ವಿಚಾರಕರು ಖಚಿತಪಡಿಸಿಕೊಳ್ಳಬೇಕು.
ಹಂತ-7: ಅಂತಿಮ ದೃಢೀಕರಣ ಹಾಗೂ ಸ್ಟಿಕ್ಕರ್ ಅಪ್ಡೇಟ್ ಪ್ರಶ್ನಾವಳಿಯನ್ನಾಧರಿಸಿದ ಮನೆಯ ಸಮೀಕ್ಷೆ ಮುಗಿದೊಡನೆ, ಪ್ರತಿಯೊಂದು ಮನೆಯ ಮುಂಬಾಗಿಲ ಮೇಲೆ ಅಂಟಿಸಿರುವ ಸ್ಟಿಕ್ಕರ್ನಲ್ಲಿ ಮನೆಪಟ್ಟಿಯಲ್ಲಿರುವ UHID, ಸಮೀಕ್ಷಾ ಐಡಿ ಪ್ರದರ್ಶಿತವಾಗಿರಬೇಕು.
ಸಮೀಕ್ಷೆಯಲ್ಲಿ ಎದುರಾಗುವ ಗೊಂದಲಕ್ಕೆ ಸ್ಪಷ್ಟನೆ ಇಲ್ಲಿದೆ:
ಹೊರ ರಾಜ್ಯದಿಂದ ಮದುವೆಯಾಗಿ ಬಂದಿರುವ ಹೆಣ್ಣುಮಕ್ಕಳ ಆಧಾರ್ ಕಾರ್ಡ್ನಲ್ಲಿರುವವರನ್ನು ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡುವ ವಿಚಾರದಲ್ಲಿ, ಕರ್ನಾಟಕ ರಾಜ್ಯದಲ್ಲಿ ನೋಂದಣಿಯಾಗಿರುವ ಆಧಾರ್ ವಿವರಗಳನ್ನು ಮಾತ್ರ ಉಪಯೋಗಿಸಲು ಅವಕಾಶವಿರುತ್ತದೆ.
ಒಂದು ಕುಟುಂಬದ ಸಮೀಕ್ಷೆಯು ಪೂರ್ಣಗೊಂಡ ನಂತರವೇ ಮುಂದಿನ ಕುಟುಂಬದ ಸಮೀಕ್ಷೆಯನ್ನು ಕೈಗೊಳ್ಳಲು ಅವಕಾಶವಿರುತ್ತದೆ. ಆದರೆ, ಕೆಲವು ಕುಟುಂಬಗಳ ಮಾಹಿತಿ ಸಂಗ್ರಹಣೆ ಅಪೂರ್ಣವಾದಲ್ಲಿ 3 ಕುಟುಂಬಗಳವರೆಗೆ ಡ್ರಾಫ್ಟ್ (Draft) ನಲ್ಲಿ ಮಾಹಿತಿ ಇಡಲು ಅವಕಾಶವಿದೆ.
ಬಿಪಿಎಲ್/ಆಧಾರ್ ಕಾರ್ಡ್/ಜಾತಿ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರು ಒಂದನ್ನು ಒದಗಿಸುವುದು ಕಡ್ಡಾಯವಾಗಿದೆ.
ಕುಟುಂಬದ ಮುಖ್ಯಸ್ಥರು ಮಹಿಳಾ/ವಿಧವೆ ಇದ್ದಲ್ಲಿ ಅವರನ್ನು ಕುಟುಂಬದ ಮುಖ್ಯಸ್ಥೆ ಎಂದು ಪರಿಗಣಿಸಲಾಗುತ್ತದೆ.
ಮಕ್ಕಳ ಜಾತಿ ತಂದೆಯ ಜಾತಿಯನ್ನು ಅವಲಂಬಿಸಿ ನಿರ್ಧರಿತವಾಗುತ್ತದೆ. ಹೀಗಾಗಿ, ಪತ್ನಿಯ ಜಾತಿಯ ಆಧಾರದ ಮೇಲೆ ಮಕ್ಕಳ ಜಾತಿಯನ್ನು ಪರಿಗಣಿಸಲು ಅವಕಾಶ ಇಲ್ಲ.
ಗಣತಿ ಸಮಯದಲ್ಲಿ ಮಾಹಿತಿ ನಮೂದಿಸಿ ಸಬ್ಮಿಟ್ ಮಾಡಿದ ನಂತರ ಕುಟುಂಬದ ಮುಖ್ಯಸ್ಥರು ಮಾಹಿತಿಯನ್ನು ಬದಲಾಯಿಸಲು ಅವಕಾಶ ಇಲ್ಲ. ಸಬ್ಮಿಟ್ ಪೂರ್ವದಲ್ಲಿ ಬದಲಾವಣೆಗೆ ಅವಕಾಶ ಇರಲಿದೆ. ಹೆಣ್ಣು ಮಗಳು ಇತ್ತೀಚೆಗೆ ಮದುವೆಯಾಗಿ ಗಂಡನ ಮನೆಗೆ ಬಂದಿದ್ದರೆ, ಅವರ ಬಗ್ಗೆ ಗಂಡನ ಮನೆಯಲ್ಲಿ ನಡೆಯುವ ಸಮೀಕ್ಷೆಯಲ್ಲಿಯೇ ಎಲ್ಲಾ ಮಾಹಿತಿ ಪಡೆಯಲಾಗುತ್ತದೆ.
ಒಂದು ಕುಟುಂಬದ ಸದಸ್ಯರು ಒಂದೇ ಪಡಿತರ ಚೀಟಿ ಹೊಂದಿದ್ದು, ಆ ಕುಟುಂಬದ ಸದಸ್ಯರು ಬೇರೆ ಬೇರೆ ಕಡೆ ವಾಸವಿದ್ದರೆ, ಒಂದೇ ಕಡೆ ಮಾಹಿತಿ ನಮೂದಿಸಲಾಗುತ್ತದೆ. ಸಮೀಕ್ಷೆದಾರರು ಮಾಹಿತಿದಾರನಿಂದ ಜಾತಿಯ ಬಗ್ಗೆ ದಾಖಲಾತಿ ಪತ್ರವನ್ನು ಕಡ್ಡಾಯವಾಗಿ ಪಡೆಯುವ ಅಗತ್ಯವಿಲ್ಲ.
ಕುಟುಂಬದಲ್ಲಿ ತಂದೆ ನಿಧನ ಹೊಂದಿದ್ದು, ತಾಯಿ ಹಾಗೂ ಮಗ ಮಾತ್ರ ಇದ್ದಲ್ಲಿ ಕುಟುಂಬ ಮುಖ್ಯಸ್ಥರಾಗಿ ತಾಯಿಯನ್ನೇ ಪರಿಗಣಿಸಲಾಗುವುದು.
ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿದ್ದಲ್ಲಿ ಅಂತಹ ಕುಟುಂಬದ ಸದಸ್ಯರನ್ನು ಸಮೀಕ್ಷೆ ನಡೆಸುವ ವೇಳೆ ಪಡಿತರ ಚೀಟಿವಾರು ಪ್ರತ್ಯೇಕ ಕುಟುಂಬಗಳೆಂದು ಪರಿಗಣಿಸಲಾಗುವುದು.
ಹೊರ ರಾಜ್ಯದವರು ಇಲ್ಲಿ ನೆಲೆಸಿ, ಇಲ್ಲಿನ ಪಡಿತರ ಚೀಟಿ/ಆಧಾರ್ ಕಾರ್ಡ್ ಹೊಂದಿದ್ದರೆ ಆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ನೋಂದಣಿಯಾಗಿರುವ ಆಧಾರ್ ವಿವರಗಳನ್ನು ಮಾತ್ರ ಉಪಯೋಗಿಸಲು ಅವಕಾಶ ಇರಲಿದೆ.
ಇನ್ನೊಂದು ಧರ್ಮಕ್ಕೆ ಮತಾಂತರವಾಗಿದ್ದರೂ ಮೂಲ ಧರ್ಮದ ಜಾತಿಯೊಂದಿಗೆ ಹೆಸರು (ಉದಾ: ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್) ಉಲ್ಲೇಖವಿದ್ದರೆ, ಅವರನ್ನು ಮತಾಂತರಗೊಂಡ ಧರ್ಮದಲ್ಲೇ ನಮೂದು ಮಾಡಲಾಗುತ್ತದೆ.


