BBMP
Loading ...

Pitru Paksha

ಸೆಪ್ಟೆಂಬರ್​ 7 ಖಗೋಳ ಪ್ರೇಮಿಗಳಿಗೆ ಕುತೂಹಲ ತಣಿಸುವ ದಿನವೆಂದು ಹೇಳಬಹುದಾಗಿದೆ. ಅಂದಿನ ರಾತ್ರಿ ಆಗಸದಲ್ಲಿ ಅಪರೂಪದ ವಿದ್ಯಾಮಾನ ಜರುಗಲಿದೆ. ಅಂದರೆ, ಚಂದ್ರ ಗ್ರಹಣ ಇರಲಿದೆ. ಅದು ಕೂಡ ಸಂಪೂರ್ಣ ಚಂದ್ರಗ್ರಹಣ. ಚಂದ್ರನು ಭೂಮಿಯ ನೆರಳಿನಲ್ಲಿ ಜಾರಿದಾಗ, ಗಾಢ ಕೆಂಪು ಬಣ್ಣದಲ್ಲಿ ಹೊಳೆಯುತ್ತಾನೆ. ಇದನ್ನು ಸಾಮಾನ್ಯವಾಗಿ “ರಕ್ತ ಚಂದ್ರ” ಎಂದು ಕರೆಯಲಾಗುತ್ತದೆ. ಈ ಒಂದು ಕ್ಷಣವನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಖಗೋಳ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.

ಖಗೋಳ ವೀಕ್ಷಕರಿಗೆ ಈ ಅಪರೂಪದ ವಿದ್ಯಾಮಾನ, ಒಂದು ಅದ್ಭುತ ಸೌಂದರ್ಯವಾಗಿ ಕಂಡರೆ, ಇನ್ನೊಂದೆಡೆ ಆಧ್ಯಾತ್ಮಿಕವಾಗಿ ಬೇರೊಂದು ಸಂಕೇತವನ್ನು ಸೂಚಿಸುತ್ತದೆ. ಪಿತೃ ಪಕ್ಷದ ಆರಂಭದೊಂದಿಗೆ ಗ್ರಹಣ ಸಮಯ ಹೊಂದಿಕೆಯಾಗುವುದರಿಂದ, ಕೆಲವು ಜ್ಯೋತಿಷಿಗಳು ಮತ್ತು ಆಧ್ಯಾತ್ಮಿಕ ಪಂಡಿತರ ಪ್ರಕಾರ ಈ ಗ್ರಹಣ ಮನುಷ್ಯನ ಮನಸ್ಸಿನ ಭಾವನೆಗಳನ್ನು ಕೆರಳಿಸಬಹುದು ಮತ್ತು ಆತಂಕದ ಭಾವನೆಯನ್ನು ತರಬಹುದು ಎಂದು ನಂಬಿದ್ದಾರೆ. ಇದು ಕೇವಲ ಕಾಕತಾಳೀಯವೇ? ಅಥವಾ ಗ್ರಹಣವೂ ನಿಜವಾಗಿಯೂ ಜನರ ಮನಸ್ಸಿನಲ್ಲಿ ಆತಂಕ ಉಂಟುಮಾಡಬಹುದೇ? ವಿಜ್ಞಾನ ಮತ್ತು ನಂಬಿಕೆ ಎರಡರ ದೃಷ್ಟಿಕೋನದಲ್ಲಿ ಈ ಬಗ್ಗೆ ತಿಳಿದುಕೊಳ್ಳೋಣ.

ಚಂದ್ರ ಗ್ರಹಣ ಎಂದರೇನು?
ನಮ್ಮ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲ್ಮೈಯಲ್ಲಿ ಬೀಳುತ್ತದೆ. ಚಂದ್ರನು ಭೂಮಿಯ ನೆರಳಿನಲ್ಲಿ ಸಾಗುವಾಗ, ಅದು ತನ್ನ ಸಾಮಾನ್ಯ ಪ್ರಕಾಶಮಾನವಾದ, ಬಿಳಿ ಹೊಳಪಿನಿಂದ ಮಸುಕಾಗಲು ಪ್ರಾರಂಭಿಸುತ್ತದೆ ಮತ್ತು ಕೆಂಪು ಬಣ್ಣವನ್ನು ಪಡೆಯುತ್ತದೆ. ಹೀಗಾಗಿ ಅದಕ್ಕೆ “ರಕ್ತ ಚಂದ್ರ” ಎಂಬ ಹೆಸರು ಬಂದಿದೆ.

ಅಂದಹಾಗೆ, ಚಂದ್ರನ ಕೆಂಪು ಬಣ್ಣವು ರೇಲೀ ಸ್ಕ್ಯಾಟರಿಂಗ್‌ನ ಪರಿಣಾಮವಾಗಿದೆ. ಅಂದರೆ, ಗ್ರಹಣ ಪ್ರಕ್ರಿಯೆಯಿಂದ ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುತ್ತದೆ. ಈ ವೇಳೆ ಸೂರ್ಯನ ನೀಲಿ ಮತ್ತು ನೇರಳೆ ಸೇರಿದಂತೆ ಮುಂತಾದ ಕಡಿಮೆ ತರಂಗಾಂತರಗಳು ಚದುರಿ ಹೋಗುತ್ತವೆ ಆದರೆ, ಕೆಂಪು ಮತ್ತು ಕಿತ್ತಳೆ ಮುಂತಾದ ದೀರ್ಘ ತರಂಗಾಂತರಗಳು ಚಂದ್ರನ ಕಡೆಗೆ ಬಾಗುತ್ತವೆ. ಇದರಿಂದ ಚಂದ್ರನ ಮೇಲೆ ಕಡುಗೆಂಪು ಬಣ್ಣ ಸೃಷ್ಟಿಯಾಗುತ್ತದೆ. ಈ ನಿರ್ದಿಷ್ಟ ಚಂದ್ರಗ್ರಹಣವು ದೀರ್ಘವಾದ ಅಥವಾ ಸಂಪೂರ್ಣ ಹಂತವನ್ನು ಹೊಂದಲಿದೆ. ಇದು ಖಗೋಳದಲ್ಲೇ ಅಪರೂಪದ ದೃಶ್ಯವಾಗಿದ್ದು, ಖಗೋಳ ವೀಕ್ಷಕರಿಗೆ ರಕ್ತಸಿಕ್ತ ಕೆಂಪು ಚಂದ್ರನನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಸಮಯ ಇರುತ್ತದೆ. ಏಕೆಂದರೆ, ಗ್ರಹಣದ ಉದ್ದಕ್ಕೂ ಚಂದ್ರನ ಬಣ್ಣ ಕ್ರಮೇಣ ಬದಲಾಗುತ್ತಾ ಸಾಗುತ್ತದೆ.

ಗ್ರಹಣ ಸಮಯದಲ್ಲಿ ಭಾವನೆ ಕೆರಳುತ್ತಾ?
ಚಂದ್ರಗ್ರಹಣವು ಹೆಚ್ಚಾಗಿ ನೈಸರ್ಗಿಕ ದೃಶ್ಯವಾಗಿದ್ದರು ಕೂಡ ಈ ವರ್ಷ ಅದು ಸಂಭವಿಸುತ್ತಿರುವ ಸಮಯ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಮಾಮೂಲಿಯಂತೆ ಗ್ರಹಣ ಸಮಯದಲ್ಲಿ ಮನುಷ್ಯನ ಭಾವನೆಗಳು ಏರಿಳಿತಗಳನ್ನು ಕಾಣುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಈ ಬಾರಿ ಸೆಪ್ಟೆಂಬರ್ 7 ರಂದು ಪಿತೃ ಪಕ್ಷ ಪ್ರಾರಂಭವಾಗುವ ಅದೇ ದಿನದಂದು ಬರುವುದರಿಂದ, ಇದು ಸಾಮಾನ್ಯಕ್ಕಿಂತ ಬಲವಾದ ಭಾವನಾತ್ಮಕ ಪ್ರವಾಹಗಳನ್ನು ತರಬಹುದು ಎಂದು ಕೆಲವರು ನಂಬಿದ್ದಾರೆ. ಈ ಗ್ರಹಣವು ಒತ್ತಡ, ಅಭದ್ರತೆ ಅಥವಾ ಆಂತರಿಕ ಸಂಘರ್ಷದ ಭಾವನೆಗಳನ್ನು ತೀವ್ರಗೊಳಿಸುತ್ತದೆ ಎಂದು ಭಾವಿಸಲಾಗಿದೆ. ಹೀಗಾಗಿ, ಗ್ರಹಣ ಸಮಯದಲ್ಲಿ ಭಾವನೆಗಳನ್ನು ಸಮತೋಲನಗೊಳಿಸುವುದು ಸ್ವಲ್ಪ ಕಷ್ಟಕರವಾಗಲಿದೆ ಎಂದು ಆಧ್ಯಾತ್ಮಿಕ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಪಿತೃ ಪಕ್ಷ
ಅಂದಹಾಗೆ, ನಾವಿಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಗಮನಿಸಬೇಕಿದೆ. ಪಿತೃ ಪಕ್ಷವು ಹಿಂದು ಕ್ಯಾಲೆಂಡರ್‌ನಲ್ಲಿ ಪೂರ್ವಜರನ್ನು ಸ್ಮರಿಸಲು ಮತ್ತು ಗೌರವಿಸಲು ಮೀಸಲಾಗಿರುವ 16 ದಿನಗಳಾಗಿವೆ. ಇದು ಈ ವರ್ಷ ಸೆಪ್ಟೆಂಬರ್ 7 ರಂದು ಗ್ರಹಣದೊಂದಿಗೆ ಪ್ರಾರಂಭವಾಗುತ್ತದೆ. ಸಾಂಪ್ರದಾಯಿಕವಾಗಿ, ಪಿತೃ ಪಕ್ಷದ ಅವಧಿಯನ್ನು ಚಿಂತನೆ, ಗೌರವ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಮೀಸಲಾದ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ಅನೇಕರು ಹೊಸ ಪ್ಲ್ಯಾನ್​ಗಳು ಅಥವಾ ಶುಭ ಕಾರ್ಯಗಳನ್ನು ಪ್ರಾರಂಭಿಸುವುದನ್ನು ತಪ್ಪಿಸಲು ಆದ್ಯತೆ ನೀಡುತ್ತಾರೆ. ಏಕೆಂದರೆ, ಈ ಸಮಯದಲ್ಲಿ ಶಕ್ತಿಯು ಪೂರ್ವಜರ ಸಂಪರ್ಕಗಳ ಅಥವಾ ಆತ್ಮಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಎಂದು ನಂಬಲಾಗಿದೆ. ಇದರಿಂದ ಏನೇ ಹೊಸ ಯೋಜನೆಗಳನ್ನು ಆರಂಭಿಸಿದರೆ ಫಲಿತಾಂಶ ಸಿಗುವುದಿಲ್ಲ ಎಂಬ ನಂಬಿಕೆ ಇದೆ. ಈ ಬಾರಿ ಚಂದ್ರ ಗ್ರಹಣದೊಂದಿಗೆ ಪಿತೃ ಪಕ್ಷವು ಆರಂಭವಾಗುವುದರಿಂದ ಭಾವನಾತ್ಮಕ ಸೂಕ್ಷ್ಮತೆ ತೀವ್ರವಾಗುತ್ತದೆ ಎಂದು ಹೇಳಲಾಗಿದೆ.

ಎಚ್ಚರಿಕೆಯಿಂದಿರಬೇಕಾ?
ಚಂದ್ರಗ್ರಹಣ ಮತ್ತು ಪಿತೃ ಪಕ್ಷದ ಶಕ್ತಿಯನ್ನು ಪರಿಗಣಿಸಿ, ಸೆಪ್ಟೆಂಬರ್ 7 ರಂದು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಅನೇಕ ಆಧ್ಯಾತ್ಮಿಕ ಮಾರ್ಗದರ್ಶಕರು ಮತ್ತು ಜ್ಯೋತಿಷಿಗಳು ಶಿಫಾರಸುಗಳನ್ನು ನೀಡುತ್ತಿದ್ದಾರೆ. ಅಂದಹಾಗೆ, ಈ ದೃಷ್ಟಿಕೋನಗಳು ಮುಖ್ಯವಾಗಿ ವೈಜ್ಞಾನಿಕ ಪುರಾವೆಗಳಿಗಿಂತ ನಂಬಿಕೆ ವ್ಯವಸ್ಥೆಗಳಿಂದ ಬಂದಿವೆ. ಅದನ್ನು ನಂಬುವರಿಗೆ ಮಾರ್ಗದರ್ಶನವಾಗಿದೆ.

ಏನು ಮಾಡಬಾರದು?

  • ನಂಬಿಕೆಗಳ ಪ್ರಕಾರ ಹೊಸ ಉದ್ಯಮಗಳ ಮೇಲೆ ಗ್ರಹಣ ಪರಿಣಾಮ ಬೀರತ್ತದೆ. ಅಂದರೆ, ಅಡೆತಡೆಗಳು ಅಥವಾ ಸವಾಲುಗಳಿಗೆ ಕಾರಣವಾಗಬಹುದು. ಹೀಗಾಗಿ ಹೊಸ ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸುವುದು, ಹೂಡಿಕೆ ಮಾಡುವುದು ಅಥವಾ ಮಹತ್ವದ ಯೋಜನೆಗಳನ್ನು ಪ್ರಾರಂಭಿಸುವುದನ್ನು ತಪ್ಪಿಸುವುದು ಒಳ್ಳೆಯದು.
  • ಸಾಂಪ್ರದಾಯಿಕವಾಗಿ, ಈ ಸಮಯವನ್ನು ಆಚರಣೆಗಳು ಅಥವಾ ಸಮಾರಂಭಗಳಿಗೆ ಶುಭ ಸಮಯವೆಂದು ಪರಿಗಣಿಸಲಾಗುವುದಿಲ್ಲ. ಕೆಲವರು ಈ ಅವಧಿಯಲ್ಲಿ ಮದುವೆಗಳು, ಪಾರ್ಟಿಗಳು ಅಥವಾ ಹೊಸ ಆಚರಣೆಗಳನ್ನು ಆಯೋಜಿಸುವುದನ್ನು ತಪ್ಪಿಸಲು ಬಯಸುತ್ತಾರೆ.
  • ಈ ದಿನದಂದು ಮಾನವನ ಭಾವನಾತ್ಮಕ ಅಥವಾ ಭಾವನೆಗಳ ತೀವ್ರತೆಯು ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಬಹುದು. ಹೀಗಾಗಿ, ಎಚ್ಚರದಿಂದಿರಿ.
  • ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನು ತಪ್ಪಿಸಲಾಗುತ್ತದೆ, ಏಕೆಂದರೆ ಈ ಸಮಯವನ್ನು ಶುದ್ಧವಲ್ಲ ಎಂದು ಕೆಲವರು ಭಾವಿಸುತ್ತಾರೆ. ಗ್ರಹಣಕ್ಕೆ ಮೊದಲು ತಯಾರಿಸಿದ ಆಹಾರವನ್ನು ತುಳಸಿ ಎಲೆಗಳನ್ನು ಇಟ್ಟು ರಕ್ಷಿಸಲಾಗುತ್ತದೆ.

ಏನು ಮಾಡಬೇಕು?

  • ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಮನಹರಿಸಲು ಸಮಯವನ್ನು ಬಳಸಿಕೊಳ್ಳಿ. ಧ್ಯಾನ, ಶಾಂತ ಚಿಂತನೆ ಮತ್ತು ದಿನಚರಿ ಬರೆಯುವುದು ಯಾವುದೇ ಏರಿಳಿತ ಭಾವನೆಗಳನ್ನು ಎದುರಿಸಲು ಸಹಾಯಕವಾಗಬಹುದು.
  • ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರಶಾಂತವಾಗಿಡಲು ಇದು ಒಳ್ಳೆಯ ಸಮಯ. ಶಾಂತಿ ಮತ್ತು ಸ್ಪಷ್ಟತೆಯನ್ನು ಬೆಳೆಸಲು ಅನೇಕ ಜನರು ಸಣ್ಣ ಎಳ್ಳೆಣ್ಣೆ ದೀಪವನ್ನು (ದೀಪ) ಬೆಳಗಿಸಲು ಶಿಫಾರಸು ಮಾಡುತ್ತಾರೆ.
  • ಗ್ರಹಣ ಮುಗಿದ ನಂತರ ಸ್ನಾನ ಮಾಡುವುದು ಸಾಮಾನ್ಯವಾಗಿದೆ, ಏಕೆಂದರೆ ಇದು ಶುದ್ಧೀಕರಣದ ಸಂಕೇತವೆಂದು ಪರಿಗಣಿಸಲಾಗುತ್ತದೆ.
  • ಕೆಲವರು ಗ್ರಹಣದ ಸಮಯದಲ್ಲಿ ಧ್ಯಾನ, ಜಪ (ಮಂತ್ರಗಳ ಪಠಣ) ಅಥವಾ ಪೂಜೆಯಲ್ಲಿ ತೊಡಗುತ್ತಾರೆ. ವಿಷ್ಣು, ಶಿವ ಅಥವಾ ದುರ್ಗೆಯಂತಹ ದೇವತೆಗಳಿಗೆ ಪ್ರಾರ್ಥನೆ ಸಾಮಾನ್ಯ.
  • ಗ್ರಹಣದ ನಂತರ ದಾನ ಮಾಡುವುದು (ಅನ್ನ, ದವಸ ಧಾನ್ಯ, ಬಟ್ಟೆ ಇತ್ಯಾದಿ) ಶುಭವೆಂದು ಪರಿಗಣಿಸಲಾಗುತ್ತದೆ.
  • ಸ್ವಯಂ ಆರೈಕೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಿ. ವಿಶ್ರಾಂತಿಯ ಮೂಲಕವಾಗಲಿ ಅಥವಾ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕವಾಗಲಿ, ಶಾಂತಿಯಿಂದ ನೆಲೆಗೊಳ್ಳುವುದು ಅತ್ಯಗತ್ಯ.

ವೈಜ್ಞಾನಿಕ ದೃಷ್ಟಿಕೋನ

  • ಚಂದ್ರ ಗ್ರಹಣವನ್ನು ನೇರವಾಗಿ ಕಣ್ಣಿನಿಂದ ನೋಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಏಕೆಂದರೆ ಇದು ಕಣ್ಣುಗಳಿಗೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ.
  • ಚಂದ್ರ ಗ್ರಹಣವನ್ನು ಖಗೋಳ ಆಸಕ್ತಿಯಿಂದ ಗಮನಿಸಬಹುದು. ಟೆಲಿಸ್ಕೋಪ್‌ಗಳು, ದೂರದರ್ಶಕಗಳು ಅಥವಾ ಕ್ಯಾಮೆರಾಗಳನ್ನು ಬಳಸಿ ಚಂದ್ರ ಗ್ರಹಣವನ್ನು ದಾಖಲಿಸಬಹುದು.
  • ಚಂದ್ರ ಗ್ರಹಣವು ಭೂಮಿಯ ನೆರಳು ಚಂದ್ರನ ಮೇಲೆ ಬೀಳುವಾಗ ಸಂಭವಿಸುತ್ತದೆ. ಇದನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

ಆಧ್ಯಾತ್ಮಿಕವಾಗಿ ಕೆಲವೊಂದು ಕಟ್ಟುಪಾಡುಗಳನ್ನು ಹೇಳಿದರು ಕೂಡ. ವಿಜ್ಞಾನದ ಪ್ರಕಾರ, ಗ್ರಹಣವು ಖಗೋಳದಲ್ಲಿ ನಡೆಯುವ ಒಂದು ಅಪರೂಪದ ವಿದ್ಯಾಮಾನವಾಗಿದೆ. ಇಂತಹ ಕ್ಷಣ ಅಪರೂಪಕ್ಕೆ ಮಾತ್ರ ಕಾಣಸಿಗುವುದರಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ ಎಂದು ವಿಜ್ಞಾನ ಪಂಡಿತರು ಹೇಳುತ್ತಾರೆ.

Leave a Reply

Your email address will not be published. Required fields are marked *