ನಟ ಚಿಕ್ಕಣ್ಣ ಅವರಿಗೆ ಕೆಲ ವರ್ಷಗಳಿಂದ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಎದುರಾಗುತ್ತಿತ್ತು. ಕಳೆದ ವರ್ಷ ಅವರು ನಾಯಕನಾಗಿ ಪದಾರ್ಪಣೆ ಮಾಡಿದ್ದ ‘ಉಪಾಧ್ಯಕ್ಷ’ ಸಿನಿಮಾ ಯಶಸ್ಸಿನ ಬಳಿಕ, ಆ ಪ್ರಶ್ನೆ ಕೇಳುವವರೂ ಹೆಚ್ಚಾಗಿದ್ದರು. ಇದೀಗ ಚಿಕ್ಕಣ್ಣ ಸದ್ದಿಲ್ಲದೇ ಆ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಗ್ರಾಮದ ಸಾವಿತ್ರಮ್ಮ ಮತ್ತು ನಾಗರಾಜು ದಂಪತಿಯ ದ್ವಿತೀಯ ಪುತ್ರಿ ಪಾವನಾ, ಚಿತ್ರನಟ ಚಿಕ್ಕಣ್ಣ ಕೈಹಿಡಿದಿದ್ದು, ಇತ್ತೀಚೆಗೆ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಮಾತುಕತೆ ನಡೆದು ಹೂ ಮುಡಿಸಿ ಸರಳವಾಗಿ ನಿಶ್ಚಯ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ಮುಂದಿನ ವಾರ ನಿಗದಿಯಾಗಲಿದೆ.
ಇದೀಗ ಚಿಕ್ಕಣ್ಣ, ಭಾವಿ ಪತ್ನಿ ಮನೆಯ ಶುಭ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು ಭಾನುವಾರ ಉಕ್ಕಡದಲ್ಲಿ ಆಯೋಜಿಸಲಾಗಿದ್ದ ಪಾವನಾ ಸಂಬಂಧಿಕರೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪದವೀಧರೆಯಾಗಿರುವ ಪಾವನಾ ಸ್ವಂತ ಉದ್ಯಮ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ವಿಜಯವಾಣಿ ಡಿಜಿಟಲ್ ಜೊತೆ ಮಾತನಾಡಿರುವ ಚಿಕ್ಕಣ್ಣ ಮದುವೆ ವಿಚಾರವನ್ನು ಖಚಿತಪಡಿಸಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿರುವ ಯುವತಿಯನ್ನೇ ನಾನು ಮದುವೆಯಾಗಲಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಚಿಕ್ಕಣ್ಣ ಅವರು ಎಲ್ಲ ಗೊಂದಲಗಳಿಗೆ ತೆರೆಎಳೆದಿದ್ದಾರೆ. ಶೀಘ್ರದಲ್ಲೇ ಮದುವೆ ಸಮಾರಂಭ ನೆರವೇರಲಿದೆ.

ಅಂದಹಾಗೆ, ಚಿಕ್ಕಣ್ಣ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟರಲ್ಲಿ ಒಬ್ಬರಾಗಿದ್ದಾರೆ. ಮಂಡ್ಯದ ಸ್ಥಳೀಯ ಭಾಷೆಯನ್ನು ಬಳಸಿಕೊಂಡು ಅವರ ಸಹಜಾಭಿನಯ ಮತ್ತು ಕಾಮಿಡಿ ಟೈಮಿಂಗ್ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ‘ರಾಜಾಹುಲಿ’ ಮತ್ತು ‘ಅಧ್ಯಕ್ಷ’ ಚಿತ್ರಗಳಲ್ಲಿ ಅವರ ಪಾತ್ರಗಳು ಅಪಾರ ಜನಮನ್ನಣೆ ಗಳಿಸಿದವು. ಕನ್ನಡ ಚಿತ್ರರಂಗದಲ್ಲಿ ಬಹುತೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿರುವ ಚಿಕ್ಕಣ್ಣ, ತಮ್ಮ ನಗುವಿನ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. 2022ರಲ್ಲಿ ಬಿಡುಗಡೆಯಾದ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಚಿಕ್ಕಣ್ಣ ಹಾಸ್ಯನಟನಿಂದ ನಾಯಕನಟನಾಗಿ ಬದಲಾದರು. ಈ ಚಿತ್ರದಲ್ಲಿ ಅವರ ಅಭಿನಯ ಮತ್ತು ಕಥಾನಾಯಕನಾಗಿ ಪಾತ್ರ ಗಮನ ಸೆಳೆಯಿತು. ಚಿಕ್ಕಣ್ಣ ತಮ್ಮ ವಿಶಿಷ್ಟ ಹಾಸ್ಯ ಶೈಲಿ ಮತ್ತು ಗಂಭೀರ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ.



