BBMP
Loading ...

GBA

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಮಂಗಳವಾರ (ಸೆ.2) ಅಸ್ತಿತ್ವಕ್ಕೆ ಬರಲಿರುವ ಐದು ಪಾಲಿಕೆಗಳ ಆಡಳಿತ ವ್ಯವಸ್ಥೆಗೆ ನೆರವಾಗಲು 15 ಐಎಎಸ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ಹುದ್ದೆ ಮಂಜೂರಾತಿ ನೀಡಲಾಗಿದೆ. ಕೆಎಎಸ್ ವೃಂದದ 15 ಹುದ್ದೆಗಳೂ ಮಂಜೂರಾಗಿವೆ. ಹಾಲಿ ಬಿಬಿಎಂಪಿಗೆ ಮಂಜೂರಾಗಿದ್ದ ಈ ಹುದ್ದೆಗಳನ್ನು ಪದನಾಮದ ಮರುವಿನ್ಯಾಸ ಮಾಡಿ ಆದೇಶ ಹೊರಡಿಸಲಾಗಿದೆ.

ಜಿಬಿಎಗೆ ಮುಖ್ಯ ಆಯು ಕ್ತರು ಆಡಳಿತದ ಪೂರ್ಣ ಅಧಿಕಾರ ಹೊಂದಿರುತ್ತಾರೆ. ನಾಲ್ವರು ವಿಶೇಷ ಆಯುಕ್ತರು ವಿವಿಧ ವಿಭಾಗಗಳ ಮುಖ್ಯಸ್ಥ ರಾಗಿರುತ್ತಾರೆ. ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಗಳಿಗೆ ತಲಾ ಒಬ್ಬರಂತೆ ಆಯುಕ್ತರು ಮತ್ತು ಅಪರ ಆಯುಕ್ತರ ಹುದ್ದೆಗಳಿರಲಿವೆ. ಐಪಿಎಸ್ ಶ್ರೇಣಿಯ ಇಬ್ಬರು ಅಧಿಕಾರಿಗಳು ಎಡಿಜಿಪಿ ಹಾಗೂ ಎಸ್​ಪಿ ಹುದ್ದೆ ನಿಭಾಯಿಸಲಿದ್ದಾರೆ.

ಹಾಲಿ ಬಿಬಿಎಂಪಿಯ ಕೇಂದ್ರ ಕಚೇರಿಯು ಜಿಬಿಎ ಕಚೇರಿಯಾಗಿ ಮಾರ್ಪಾಟಾಗಲಿದ್ದು, ಇಲ್ಲಿಯೇ ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರು ಕಾರ್ಯನಿರ್ವಹಿಸುತ್ತಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆ ಕೂಡ ಇಲ್ಲಿಯೇ ನಡೆಯಲಿದೆ. ಜಿಬಿಎ ಅಧ್ಯಕ್ಷರೂ ಆದ ಸಿಎಂ ಹಾಗೂ ಉಪಾಧ್ಯಕ್ಷ ಡಿಸಿಎಂ ಅವರು ಆಗಮಿಸಿ ಸಭೆ ನಡೆಸುವವರಿದ್ದು, ಇದಕ್ಕಾಗಿ ಪ್ರತ್ಯೇಕ ಕಚೇರಿಗಳನ್ನು ಸಿದ್ಧಪಡಿಸಲಾಗುತ್ತಿದೆ.

ಅಂತಿಮ ಅಧಿಸೂಚನೆಗೆ ಕ್ಷಣಗಣನೆ: ಬಿಬಿಎಂಪಿಯನ್ನು ವಿಂಗಡಿಸಿ ಐದು ಹೊಸ ಪಾಲಿಕೆ (ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ) ರಚಿಸಿ ಕಳೆದ ತಿಂಗಳು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ಆಹ್ವಾನಿಸಿದ್ದ ಆಕ್ಷೇಪಣೆ ಆಲಿಸಿ ಕೆಲ ಬದಲಾವಣೆಯೊಂದಿಗೆ ಮಂಗಳವಾರ (ಸೆ.2) ಫೈನಲ್ ನೋಟಿಫಿಕೇಷನ್ ಹೊರಡಿಸಲು ಸರ್ಕಾರ ಅಂತಿಮ ಕಸರತ್ತು ನಡೆಸಿದೆ. ಐದು ಪಾಲಿಕೆಗಳನ್ನು ರಚಿಸುವ ವೇಳೆ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ವಿಧಾನಸಭೆ ಕ್ಷೇತ್ರಗಳನ್ನು 2 ಪಾಲಿಕೆ ವ್ಯಾಪ್ತಿಯಲ್ಲಿ ಅಡಕ ಮಾಡಲಾಗಿತ್ತು. ಇದಕ್ಕೆ ಶಾಸಕರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕೆಲ ಬದಲಾವಣೆಗಳೊಂದಿಗೆ ಅಂತಿಮಗೊಳಿಸಲಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಮತಕ್ಷೇತ್ರವನ್ನು ಒಂದೇ ಪಾಲಿಕೆ ಅಡಿಯಲ್ಲಿ ತರಲು ಸಹಮತ ವ್ಯಕ್ತವಾಗಿದ್ದು, ಅಧಿಸೂಚನೆ ಹೊರಬಿದ್ದ ಮೇಲೆ ಸ್ಪಷ್ಟತೆ ಮೂಡಲಿದೆ. ಐದು ಪಾಲಿಕೆಗಳು ಕೂಡ ಸೆ.2ರಿಂದಲೇ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದ್ದು, ಅಂದೇ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಲಿವೆ.

ಹೊಸದಾಗಿ ರಚಿಸಿರುವ 5 ಪಾಲಿಕೆಗಳಲ್ಲಿ ಒಟ್ಟು 450 ವಾರ್ಡ್ ರಚಿಸಲಾಗುತ್ತದೆ. ಆಯಾ ಪಾಲಿಕೆಗಳ ವಿಸ್ತೀರ್ಣ, ಜನಸಂಖ್ಯೆ ಪರಿಗಣಿಸಿ ಹೊಸದಾಗಿ ವಾರ್ಡ್ ರಚಿಸಲು ಬಿಬಿಎಂಪಿ ವಿಂಗಡಣಾ ಸಮಿತಿಯು ತನ್ನ ಕಾರ್ಯವನ್ನು ವಿಧ್ಯುಕ್ತವಾಗಿ ಆರಂಭಿಸಲಿದೆ. ಪ್ರತಿ ಪಾಲಿಕೆಗಳ ವಾರ್ಡ್ ಸಂಖ್ಯೆ ಕನಿಷ್ಠ 70ರಿಂದ ಗರಿಷ್ಠ 120 ಮೀರದಂತೆ ವಿಂಗಡಿಸಲಾಗುತ್ತದೆ. ಪೂರ್ವ ಪಾಲಿಕೆ ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿರುವ ಕಾರಣ ಆ ಕಾರ್ಪೆರೇಷನ್ ದೊಡ್ಡ ಪಾಲಿಕೆಯಾಗಿ ಹೊರಹೊಮ್ಮಿದೆ. ಪೂರ್ವ ಪಾಲಿಕೆ ಕಡಿಮೆ ವಾರ್ಡ್​ಗಳಿರಲಿದ್ದು, ಮಾಸಾಂತ್ಯದೊಳಗೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಲಾಗುತ್ತದೆ. ಅಕ್ಟೋಬರ್ ಮಧ್ಯ ಭಾಗದಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *