ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸಂಭ್ರಮಾಚರಣೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ (Bengaluru Stampede) ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿವೆ. ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್ಸಿಬಿ ಸಂಭ್ರಮಾಚರಣೆ, ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮ ಸಂಬಂಧ ಪ್ರತಿಪಕ್ಷ ನಾಯಕರು ಸರಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರತಿಪಕ್ಷ ನಾಯಕರು ಕೇಳಿದ ಪ್ರಶ್ನೆಗಳೇನು?
* ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಲಾಗಿದೆ. ಇದೇ ಆಯುಕ್ತರು ಇದ್ದಾಗಲೇ ಹೊಸ ವರ್ಷ ಸಂಭ್ರಮಾಚರಣೆಯೂ ನಡೆದಿತ್ತಲ್ಲವೇ? ಆಗ ಯಶಸ್ವಿಯಾಗಿ ಭದ್ರತೆ ಹೊಣೆಗಾರಿಕೆ ವಹಿಸಿದ್ದರಲ್ಲವೇ? ಹಾಗಾದರೆ ಈಗ ಏನಾಯಿತು?
* ಗಾಯಾಳುಗಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸರೇ. ನೀವು (ಕಾಂಗ್ರೆಸ್ ಸರ್ಕಾರದವರು) ಮೊಸರು ತಿಂದು ಪೊಲೀಸರ ಮೂತಿಗೆ ಒರೆಸಿದಿರಲ್ಲವೇ?
* ಅನಧಿಕೃತ ಕಾರ್ಯಕ್ರಮ ಎಂದು ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಹೇಳಲಾಗಿದೆ. ಹಾಗಾದರೆ ಅನಧಿಕೃತ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ?
* ಸಿಎಂ ಮನೆಗೆ ಫ್ರಾಂಚೈಸಿಯವರನ್ನು ಕರೆದುಕೊಂಡು ಹೋದವರು ಯಾರು, ಯಾಕೆ?
* ಕಮಿಷನರ್ ಅನುಮತಿ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದವರು ಯಾರು?
* ‘ಯಾರು ಏನೇ ಮಾಡಿದರು ನಾನು ಇದ್ದೀನಿ’ ಎಂದವರು ಯಾರು?
* ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ, ಆ ಸ್ಟೇಡಿಯಂ ಕರ್ನಾಟಕದಲ್ಲಿ ಇಲ್ಲವೇ?
* ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದು ಪೊಲೀಸರ ಅನುಮತಿ ಇಲ್ಲದ ಕಾರ್ಯಕ್ರಮವೇ ಹೌದಾದರೆ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ?
‘ಅಮಾನತು ನಾಟಕ’ ಎಂದ ಕುಮಾರಸ್ವಾಮಿ
ಬೆಂಗಳೂರು ಕಾಲ್ತುಳಿತ ಸಂಬಂಧ ಪೊಲೀಸರ ಅಮಾನತು ಮಾಡಿರುವುದು ನಾಟಕವಷ್ಟೇ. ‘ಒಂದು ತಿಂಗಳು ಸಸ್ಪೆಂಡ್ ಅಂತಾ ನಾಟಕ ಮಾಡುತ್ತೇವೆ, ಬೇಸರ ಮಾಡಿಕೊಳ್ಳಬೇಡಿ’ ಎಂಬುದಾಗಿ ಮೊದಲೇ ಹೇಳಿರುತ್ತಾರೆ ಅಷ್ಟೇ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟೀಕಿಸಿದರು. ಪೊಲೀಸ್ ಇಲಾಖೆ ಸಲಹೆ ಧಿಕ್ಕರಿಸಿ 11 ಜೀವಗಳ ಬಲಿಯಾಗಿದೆ. ಅದಕ್ಕೆ ಮೂಲ ಕಾರಣ ರಾಜ್ಯ ಸರ್ಕಾರ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕಮಿಷನರ್ ಸೇರಿ ಹಲವರ ಅಮಾನತು ಮಾಡಿದ್ದಾರೆ. ಹೊಸ ವರ್ಷಾಚರಣೆ ವೇಳೆ ಕಮಿಷನರ್ ದಯಾನಂದ್ ಇದ್ದರು. ಲಕ್ಷಾಂತರ ಜನ ಸೇರಿದ್ದರೂ ಸಣ್ಣ ಅಹಿತಕರ ಘಟನೆಗೆ ಅವಕಾಶ ಕೊಟ್ಟಿರಲಿಲ್ಲ. ನಾನು ಬಿ. ದಯಾನಂದ್ ಪರ ವಕಾಲತ್ತು ಮಾಡುತ್ತಿಲ್ಲ. ಸಸ್ಪೆಂಡ್ ಆದ ಡಿಸಿಪಿ ಒಬ್ಬರು ‘ಅಪ್ಪಯ್ಯ’ನ ಆತ್ಮೀಯರು ಎಂದೂ ಕುಮಾರಸ್ವಾಮಿ ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ: RCB ಮ್ಯಾನೇಜ್ಮೆಂಟ್ನ ಮೂವರು ಆಯೋಜಕರು ಅರೆಸ್ಟ್!


