Greater Bengaluru News9 : ಮಗಳು ತನ್ನ ತಾಯಿಯನ್ನು ನೋಡಿಕೊಳ್ಳುವ ಕಾನೂನು, ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ತಾಯಿಯಿಂದ ಮಗಳ ಹೆಸರಿಗೆ ವರ್ಗಾಯಿಸಲಾಗಿದ್ದ ಆಸ್ತಿಯನ್ನು ಮರಳಿ ತಾಯಿಯ ಹೆಸರಿಗೆ ನೋಂದಣಿ ಮಾಡುವಂತೆ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ. ತಾಯಿಯಿಂದ ಉಡುಗೊರೆಯ ರೂಪದಲ್ಲಿ ಪಡೆದ ಆಸ್ತಿಯನ್ನು ಹಿಂತಿರುಗಿಸಲು ನೀಡಿದ್ದ ಉಪವಿಭಾಗಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಮಗಳು ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ದಾನಪತ್ರದಲ್ಲಿ ತಾಯಿಯನ್ನು ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಆಸ್ತಿ ವರ್ಗಾವಣೆ ಮಾಡುವ ಹಿಂದಿನ ಮೂಲ ಆಶಯವೇ ಆರೈಕೆ ಮತ್ತು ಭದ್ರತೆಯ ನಂಬಿಕೆ ಎಂದು ತಿಳಿಸಿದೆ. ಮಗಳಿಗೆ ಸ್ವಂತ ಮನೆ ಇದ್ದರೂ, ವೃದ್ಧ ತಾಯಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿರುವುದು ಮಗಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007ರ ಮುಖ್ಯ ಉದ್ದೇಶವೇ ಅಸಹಾಯಕ ಪೋಷಕರನ್ನು ರಕ್ಷಿಸುವುದಾಗಿದೆ. ಕೇವಲ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಕಾಯ್ದೆಯ ಮೂಲ ಆಶಯವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ, ಈ ಕಾಯ್ದೆ ಹಿರಿಯ ನಾಗರಿಕರನ್ನು ಬಡತನ ಹಾಗೂ ನಿರ್ಲಕ್ಷ್ಯದಿಂದ ರಕ್ಷಿಸಲು ರೂಪುಗೊಂಡಿರುವ ಪ್ರಯೋಜನಕಾರಿ ಕಾನೂನು ಎಂದು ಪೀಠ ತಿಳಿಸಿದೆ. ಪ್ರತಿಯೊಂದು ಪ್ರಕರಣದಲ್ಲೂ ಅದರ ಆಶಯವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಶಾಸನಬದ್ಧ ರಕ್ಷಣೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರಗಳ ಪ್ರಕಾರ, ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಜಿ. ಹೇಮಾ ಅವರು ತಮ್ಮ ಸ್ವಂತ ಸಂಪಾದನೆಯಿಂದ ಖರೀದಿಸಿದ್ದ ಆಸ್ತಿಗಳನ್ನು ತಮ್ಮ ಮಗಳು ಆರ್. ಪವಿತ್ರಾ ಮತ್ತು ಮಗ ಆರ್. ವೇಣುಗೋಪಾಲ್ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ವಯಸ್ಸಾದ ಸಂದರ್ಭದಲ್ಲಿ ಮಕ್ಕಳು ತಮ್ಮ ಆರೈಕೆ ಮಾಡುತ್ತಾರೆ ಹಾಗೂ ಆಸ್ತಿಯಿಂದ ಬರುವ ಬಾಡಿಗೆಯಿಂದ ಜೀವನ ಸಾಗಿಸಲು ನೆರವಾಗುತ್ತಾರೆ ಎಂಬ ನಂಬಿಕೆಯಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು.
ಆದರೆ ಬಳಿಕ ಮಕ್ಕಳು ಮನೆಯ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದರೂ, ತಾಯಿಯ ಆರೈಕೆ ಹಾಗೂ ಅಗತ್ಯ ಸೌಲಭ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಹೇಮಾ ಅವರು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯಡಿ ದಾನಪತ್ರ ರದ್ದುಪಡಿಸುವಂತೆ ಕೋರಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿ, ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಿ ಮತ್ತೆ ಹೇಮಾ ಅವರ ಹೆಸರಿಗೆ ನೋಂದಣಿ ಮಾಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಗಳು ಮೇಲ್ಮನವಿ ಸಲ್ಲಿಸಿದ್ದರೂ, ಉಪವಿಭಾಗಾಧಿಕಾರಿಗಳು ನ್ಯಾಯಮಂಡಳಿಯ ಆದೇಶವನ್ನು ಸಮರ್ಥಿಸಿ ಮೇಲ್ಮನವಿಯನ್ನು ವಜಾಗೊಳಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಮಗಳು ಹೈಕೋರ್ಟ್ ಮೆಟ್ಟಿಲೇರಿದ್ದರೂ, ಹೈಕೋರ್ಟ್ ಕೂಡ ತಾಯಿಯ ಪರವಾಗಿಯೇ ತೀರ್ಪು ನೀಡಿದ್ದು, ಆಸ್ತಿ ಹಿಂತಿರುಗಿಸುವ ಕ್ರಮವನ್ನು ಸಮರ್ಥನೀಯ ಎಂದು ಘೋಷಿಸಿದೆ.


