Greater Bengaluru News9 : ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಾಳೆ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೈಕೋರ್ಟ್ ಇಂದು (ಮೇ 19) ತಡೆ ನೀಡಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಾಲಯವು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಯಾವುದೇ ಕಾರಣಕ್ಕೂ ನಾಳೆ ಮುಷ್ಕರ ನಡೆಸದಂತೆ ನೌಕರರ ಒಕ್ಕೂಟಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದಾಗಿ ನಾಳೆ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಕ್ಕೆ ತೊಂದರೆಯಾಗಬಹುದು ಎಂಬ ಭೀತಿಯಲ್ಲಿದ್ದ ಪ್ರಯಾಣಿಕರು ಮತ್ತು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಸಾರಿಗೆ ನೌಕರರ ಮುಷ್ಕರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೋವಿಂದರಾಜ ಅವರ ನೇತೃತ್ವದ ನ್ಯಾಯಪೀಠವು ಈ ಮಹತ್ವದ ಆದೇಶ ನೀಡಿದೆ. ವಿಶೇಷವೆಂದರೆ, ಸಮಾಜದ ಸಾಮಾನ್ಯ ದುಡಿಯುವ ವರ್ಗಕ್ಕೆ ಸೇರಿದ ಮನೆಗೆಲಸದ ಮಹಿಳೆ ವೇದಾವತಿ ಮತ್ತು ಕಟ್ಟಡ ಕಾರ್ಮಿಕ ಶ್ರೀಧರ್ ಎಂಬುವವರು ಈ ಅರ್ಜಿಯನ್ನು ಸಲ್ಲಿಸಿದ್ದರು. ದೈನಂದಿನ ಕೂಲಿ ಕಾರ್ಮಿಕರ ಮತ್ತು ಸಾರ್ವಜನಿಕರ ಹಿತಕ್ಕಾಗಿ ಸಾಮಾನ್ಯ ವರ್ಗದ ಜನರೇ ಜಾಗೃತರಾಗಿ ನ್ಯಾಯಾಲಯದ ಕದ ತಟ್ಟಿರುವುದನ್ನು ಕಂಡು ಹೈಕೋರ್ಟ್ ತೀವ್ರ ಅಚ್ಚರಿ ಮತ್ತು ಪ್ರಶಂಸೆ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಿಕ್ರಂ ಹುಯಿಲಗೊಳ ಅವರ ವಾದ ಆಲಿಸಿದ ನ್ಯಾಯಾಲಯವು, ಮುಷ್ಕರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರುವುದರ ಜೊತೆಗೆ ರಾಜ್ಯ ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ನೌಕರರ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಸಾರಿಗೆ ಸಚಿವರ ನೇತೃತ್ವದಲ್ಲಿ ತಕ್ಷಣವೇ ತುರ್ತು ಸಭೆ ನಡೆಸಿ, ಮುಖಾಮುಖಿ ಚರ್ಚೆಯ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯ ಸರ್ಕಾರವು ಈಗಾಗಲೇ ಜೂನ್ 30ರವರೆಗೆ ಸಾರಿಗೆ ಸಂಸ್ಥೆಗಳ ಮೇಲೆ ‘ಎಸ್ಮಾ’ (KESMA – ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿಗೊಳಿಸಿ ಮುಷ್ಕರವನ್ನು ನಿಷೇಧಿಸಿದೆ. ಅಲ್ಲದೆ, ಸದ್ಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯುತ್ತಿರುವುದರಿಂದ ಮತ್ತು ನಿತ್ಯ ಕೋಟ್ಯಂತರ ಸಾರ್ವಜನಿಕರು, ಮಹಿಳೆಯರು ಹಾಗೂ ರೋಗಿಗಳು ಬಸ್ ಪ್ರಯಾಣವನ್ನು ಅವಲಂಬಿಸಿರುವುದರಿಂದ ಈ ಮುಷ್ಕರ ಕಾನೂನುಬಾಹಿರ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು. ಮುಷ್ಕರ ನಡೆಸದಂತೆ ಕಾರ್ಮಿಕ ಸಂಘಟನೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಸಾರ್ವಜನಿಕ ಸೇವೆಗೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದರು.
ಸಚಿವರು ಮತ್ತು ಸಂಬಂಧಿಸಿದ ಕಾರ್ಯದರ್ಶಿ ಜತೆ ಮಾತುಕತೆ ನಡೆಸಲು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಹೈಕೋರ್ಟ್ ನಿರ್ದೇಶನ ನೀಡಿ, ಗುರುವಾರಕ್ಕೆ ವಿಚಾರಣೆ ಮುಂದೂಡಿದೆ. ಈಗಾಗಲೇ ಶೇ. 12.5 ಏರಿಸಿದ್ದಾರೆ. ಬೇಡಿಕೆಗಳಿದ್ದರೆ ಮಾತುಕತೆ ನಡೆಸಿ, ಮುಷ್ಕರ ಬೇಡ ಎಂದು ನ್ಯಾಯಾಲಯ ಹೇಳಿದೆ.


