ಬೆಂಗಳೂರು: ಹೊಸ ಮನೆ ನಿರ್ವಿುಸಿ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಹಾಗೂ ಆರಂಭಿಕ ಪ್ರಮಾಣಪತ್ರ (ಸಿಸಿ) ಕಡ್ಡಾಯಗೊಳಿಸಿರುವ ನಿಯಮದಿಂದ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಲಕ್ಷಾಂತರ ನಿವೇಶನ ಮಾಲೀಕರಿಗೆ ನಿರಾಳತೆ ಸಿಕ್ಕಿದೆ. ನಗರಾಭಿವೃದ್ಧಿ ಇಲಾಖೆ ಈ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಆದೇಶ ಹೊರಬೀಳಲಿದೆ.
30×40 (1,200 ಚದರಡಿ) ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಒಸಿ ಹಾಗೂ ಸಿಸಿ ಅಗತ್ಯವಿರುವುದಿಲ್ಲ. ಆದರೆ, 1200 ಚದರಡಿಗಿಂತ ಹೆಚ್ಚಿರುವ ನಿವೇಶನಗಳಿಗೆ ಕಡ್ಡಾಯ ನಿಯಮ ಮುಂದುವರಿಯಲಿದೆ.
ಒಸಿ, ಸಿಸಿ ಇಲ್ಲದೆ ಯಾವುದೇ ಹೊಸ ಕಟ್ಟಡಗಳಿಗೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ನೀಡಬಾರದೆಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಈ ಆದೇಶದ ಬಳಿಕ ಎಸ್ಕಾಂ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಒಸಿ, ಸಿಸಿಯನ್ನು ಕಡ್ಡಾಯಗೊಳಿಸಿತ್ತು. ಇದನ್ನು ಪಡೆಯಲು 2-3 ತಿಂಗಳು ಬೇಕಾಗುತ್ತಿತ್ತು. ಈ ವಿಳಂಬದಿಂದ ಮನೆ ಮಾಲೀಕರಿಗೆ ತೊಂದರೆಯಾಗುತ್ತಿತ್ತು. ಅಧಿಕಾರಿಗಳು ಕಾರ್ಯದೊತ್ತಡ ದಿಂದ ಒಸಿ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದರು. ಈ ಎಲ್ಲ ವಿಚಾರ ಪರಿಗಣಿಸಿರುವ ನಗರಾಭಿವೃದ್ಧಿ ಇಲಾಖೆ, ಒಸಿ ಇಲ್ಲದೆ ಮನೆ ನಿರ್ವಣಕ್ಕೆ ಅವಕಾಶ ಮಾಡಿಕೊಡುವ ನಿರ್ಧಾರ ಕೈಗೊಂಡಿದೆ.
ಸ್ವಾಧೀನಾನುಭವ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯು ಸ್ಥಳ ಪರಿಶೀಲನೆ, ನಿರ್ಮಾಣ ಕಟ್ಟಡ ಹಾಗೂ ಅನುಮೋದಿತ ಕಟ್ಟಡ ನಕ್ಷೆಯ ತುಲನಾತ್ಮಕ ಪರಿಶೀಲನೆ ಒಳಗೊಂಡಿರುವುದರಿಂದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕೆಲಸದ ಹೊರೆಯಾಗುತ್ತಿದೆ. ಇದರಿಂದ ವಿಳಂಬವೂ ಆಗಲಿದೆ, ಜನರ ಅನುಕೂಲಕ್ಕಾಗಿ ಸಣ್ಣ ಕಟ್ಟಡಗಳಿಗೆ ಒಸಿ ಪಡೆಯುವುದರಿಂದ ವಿನಾಯಿತಿ ನೀಡಬೇಕೆಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ರಾಜ್ಯಾದ್ಯಂತ ಈ ನಿಯಮ ಸಡಿಲಗೊಂಡರೆ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವರೂ ಸಹ ಅಭಿಪ್ರಾಯ ಕೊಟ್ಟಿದ್ದರು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ(ಜಿಬಿಎ)2024ರ ನಿಯಮ, ಕರ್ನಾಟಕ ಮುನ್ಸಿಪಲ್ ಕಾಯ್ದೆ(ಕೆಎಂಸಿ) 1976 ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಉಪಬಂಧಗಳನ್ವಯ ಕೆಲ ಕಟ್ಟಡಗಳಿಗೆ ಸಿಸಿ ಮತ್ತು ಒಸಿ ವಿನಾಯಿತಿ ನೀಡುವ ಕುರಿತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಇತ್ತೀಚಿಗಷ್ಟೇ ಬಿಬಿಎಂಪಿ, ಬೆಸ್ಕಾಂ, ಪೌರಾಡಳಿತ ನಿರ್ದೇಶನಾಲಯ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ನ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವಿನಾಯಿತಿ ನೀಡುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಭಿಪ್ರಾಯ ವ್ಯಕ್ತವಾಯಿತು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (2024ರ ಸೆಕ್ಷನ್ 241(1)ರಲ್ಲಿ ಸರ್ಕಾರ ಯಾವ ಕಟ್ಟಡದ ವರ್ಗವನ್ನು ಸ್ವಾಧೀನ ಪ್ರಮಾಣಪತ್ರ ಪಡೆಯುವುದರಿಂದ ವಿನಾಯಿತಿ ನೀಡಬಹುದು ಎಂಬುದನ್ನು ತಿಳಿಸಬಹುದು ಎಂದು ನಿರ್ದಿಷ್ಟಪಡಿಸಲಾಗಿದೆ. ಆದರೆ, ಈ ಅವಕಾಶ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆಗಳ ಕಾಯ್ದೆ 1964ರಲ್ಲಿ ಇರುವುದಿಲ್ಲ ಎಂಬುದರ ಬಗ್ಗೆ ಸಭೆಯಲ್ಲಿ ವಿಸõತವಾಗಿ ಚರ್ಚೆ ನಡೆಸಲಾಯಿತು.
ಒಸಿ ವಿನಾಯಿತಿ ವ್ಯಾಪ್ತಿ
*1,200 ಚ.ಅಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಪ್ಲೆಸ್ 2 ಅಂತಸ್ತು ಅಥವಾ ಸ್ಟಿಲ್ಟ್ ಪ್ಲೆಸ್ 3 ಅಂತಸ್ತು ಕಟ್ಟಡ
* ಜಿಬಿಎ ಕಾಯ್ದೆಯಲ್ಲಿ ವಿನಾಯಿತಿ ಇದೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಸ್ತರಿಸಲು ಮಾದರಿ ಕಟ್ಟಡ ಬೈಲಾಗೆ ತಿದ್ದುಪಡಿ ತರುವ ಸಾಧ್ಯತೆ
* ರಾಜ್ಯದಲ್ಲಿ 61 ನಗರಸಭೆ, 123 ಪುರಸಭೆ ,117 ಪಟ್ಟಣ ಪಂಚಾಯಿತಿಗಳಿದ್ದು, ವಿನಾಯಿತಿ ನಿಯಮ ಜಾರಿಯಾದರೆ ಲಕ್ಷಾಂತರ ಜನರಿಗೂ ಅನುಕೂಲ
ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿದೆ…!


