Greater Bengaluru News9 : ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಹೊಸ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಹೊಸದಾಗಿ ನಾಲ್ಕು ಪ್ರಶ್ನೆಗಳ ಸೇರ್ಪಡೆ ಮಾಡಲಾಗಿದ್ದು, ಸರ್ಕಾರಿ ನೌಕರರ ಕುಟುಂಬಗಳು ಯೋಜನೆಯಿಂದ ಹೊರಗಾಗುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸ ಅರ್ಜಿ ರೂಪರೇಖೆಯನ್ನು ಸಿದ್ಧಪಡಿಸಿದ್ದು, ಒಟ್ಟು 12 ಪ್ರಶ್ನೆಗಳಿಗೆ ಫಲಾನುಭವಿಗಳು ಉತ್ತರಿಸಬೇಕಾಗಿದೆ. ಈ ಹಿಂದೆ ಆರು ಪ್ರಶ್ನೆಗಳಿದ್ದ ಅರ್ಜಿ ಈಗ ವಿಸ್ತರಿಸಲ್ಪಟ್ಟಿದ್ದು, ಹೊಸ ಪ್ರಶ್ನೆಗಳ ಸೇರ್ಪಡೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹೊಸ ಅರ್ಜಿಯಲ್ಲಿ ಕುಟುಂಬದ ಅರ್ಹತೆಯನ್ನು ಪರಿಶೀಲಿಸಲು ಹೆಚ್ಚುವರಿ ಪ್ರಶ್ನೆಗಳನ್ನು ಸೇರಿಸಲಾಗಿದೆ. ಸರ್ಕಾರಿ ನೌಕರರಿರುವ ಕುಟುಂಬಗಳ ಪತ್ತೆ, ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಸ್ಥಿತಿ ಸೇರಿದಂತೆ ಹಲವು ಅಂಶಗಳನ್ನು ಸ್ಪಷ್ಟಪಡಿಸುವಂತೆ ಕೇಳಲಾಗಿದೆ.
ಹೊಸ ಸೇರ್ಪಡೆಯಾದ ಪ್ರಶ್ನೆಗಳು ಹೀಗಿವೆ:
- ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರರು ಇದ್ದಾರಾ?
- ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ?
- ವೋಟರ್ ಐಡಿ ಇದೆಯಾ?
- ಆಧಾರ್‌ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ?
ಇದಕ್ಕೂ ಮುನ್ನ ಅರ್ಜಿಯಲ್ಲಿ ಯಜಮಾನಿಯ ವಿವರ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಪತಿಯ ಮಾಹಿತಿ, ಜಾತಿ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಗಳನ್ನು ಕೇಳಲಾಗುತ್ತಿತ್ತು.
ಈ ಬದಲಾವಣೆಗಳಿಂದ ಯೋಜನೆಗೆ ಅರ್ಹತೆ ಮಾನದಂಡಗಳು ಇನ್ನಷ್ಟು ಕಠಿಣವಾಗಲಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೆಚ್ಚು ಪರಿಶೀಲನೆಯೊಂದಿಗೆ ನಡೆಯಲಿದೆ ಎಂಬುದು ಇಲಾಖೆಯ ಮೂಲಗಳ ಮಾಹಿತಿ.


