Greater Bengaluru News9: ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಹಾಗೂ ವಿದ್ಯುತ್ ಪರಿವೀಕ್ಷಣಾಲಯದ ವತಿಯಿಂದ ರಾಜ್ಯಾದ್ಯಂತ ಜೂನ್ 26ರಿಂದ ಜುಲೈ 2ರವರೆಗೆ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2026’ ಅನ್ನು ಹಮ್ಮಿಕೊಳ್ಳಲಾಗಿದೆ. “ಇಂದಿನ ಮುಂಜಾಗ್ರತೆ… ನಾಳಿನ ಸುರಕ್ಷತೆ!!” ಎಂಬ ಮಹತ್ವದ ಘೋಷವಾಕ್ಯದೊಂದಿಗೆ ಈ ಜಾಗೃತಿ ಸಪ್ತಾಹವನ್ನು ಆಯೋಜಿಸಲಾಗಿದ್ದು, ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಪದನಿಮಿತ್ತ ಅಪರ ಕಾರ್ಯದರ್ಶಿಗಳು ಹಾಗೂ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ಶ್ರೀ ಡಾ. ತಿತ್ತಿರ ಎನ್. ಅಪ್ಪಚ್ಚು ಅವರು ವಿಶೇಷ ಸಂದೇಶ ನೀಡಿದ್ದಾರೆ. ದೈನಂದಿನ ಜೀವನದಲ್ಲಿ ಮತ್ತು ಕೈಗಾರಿಕೆಗಳಲ್ಲಿ ವಿದ್ಯುತ್ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬರೂ ವಿದ್ಯುತ್ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಳೆಗಾಲದ ಅವಧಿಯಲ್ಲಿ ವಿದ್ಯುತ್ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ರೈತರು ಹೆಚ್ಚು ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಸಿದ್ದಾರೆ. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದನ್ನು ಗಮನಿಸಿದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು, ಒದ್ದೆಯಾದ ಕೈಗಳಿಂದ ವಿದ್ಯುತ್ ಉಪಕರಣಗಳನ್ನು ಮುಟ್ಟಬಾರದು ಮತ್ತು ಗುಣಮಟ್ಟದ ಐಎಸ್ಐ (ISI) ಮುದ್ರೆ ಇರುವ ವಿದ್ಯುತ್ ಸಾಮಗ್ರಿಗಳನ್ನು ಮಾತ್ರ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ಸುರಕ್ಷತಾ ಸಪ್ತಾಹದ ಅಂಗವಾಗಿ ರಾಜ್ಯದಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳು, ಕರಪತ್ರಗಳ ವಿತರಣೆ ಮತ್ತು ವಿದ್ಯುತ್ ಸುರಕ್ಷತೆಯ ಬಗೆಗಿನ ನಿಯಮಗಳ ಪ್ರಚಾರ ಕಾರ್ಯಗಳು ನಡೆಯಲಿವೆ. ಸಾರ್ವಜನಿಕರು ತಮ್ಮ ಸ್ವಂತ ಹಾಗೂ ಸಮಾಜದ ಸುರಕ್ಷತೆಗಾಗಿ ಇಲಾಖೆಯೊಂದಿಗೆ ಕೈಜೋಡಿಸಿ, ಯಾವುದೇ ವಿದ್ಯುತ್ ಅವಘಡಗಳಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಈ ಮೂಲಕ ವಿನಂತಿಸಲಾಗಿದೆ.


