BBMP
Loading ...

RCB

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ ಪಟ್ಟದೊಂದಿಗೆ ಶೋಭಿತವಾಗಿದೆ. ಈ ಮೂಲಕ ಅಭಿಮಾನಿಗಳ 18 ವರ್ಷಗಳ ಪ್ರಶಸ್ತಿ ಗೆಲುವಿನ ಕನಸು ನನಸಾಗಿದ್ದು, ‘ಈ ಸಲ ಕಪ್ ನಮ್ದೇ’ ಎಂಬ ಘೋಷವಾಕ್ಯ ಕೊನೆಗೂ ನಿಜವಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸುದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಈ ಅಮೋಘ ಗೆಲುವಿಗೆ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ಆರ್​ಸಿಬಿ ಗೆಲುವು ಇಂದು ಎಲ್ಲರಿಗೂ ಖುಷಿ ಕೊಟ್ಟಿದೆ. 18 ವರ್ಷಗಳ ಬಳಿಕ ಮೊದಲ ಐಪಿಎಲ್​ ಪ್ರಶಸ್ತಿ ಗೆದ್ದಿರುವ ಆರ್​ಸಿಬಿ ತಂಡಕ್ಕೆ ಅಭಿನಂದನೆಗಳು ಎಂದು ನಂಜಾವಧೂತ ಶ್ರೀಗಳು ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಆರ್​ಸಿಬಿ ತಂಡ ಅಮೋಘ ಬೌಲಿಂಗ್ ನಿರ್ವಹಣೆ ತೋರುವ ಮೂಲಕ 6 ರನ್​ಗಳಿಂದ ಗೆದ್ದು ಹೊಸ ಇತಿಹಾಸ ಬರೆಯಿತು. ರಜತ್ ಪಾಟೀದಾರ್ ಆರ್​ಸಿಬಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಮೊದಲ ನಾಯಕ ಎನಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ಕೈಲ್ ಜೇಮಿಸನ್ (48ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (40ಕ್ಕೆ 3) ಬಿಗಿ ದಾಳಿಯ ನಡುವೆಯೂ ಅನುಭವಿ ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಸಹಿತ ಇತರ ಬ್ಯಾಟರ್​ಗಳ ಕೊಡುಗೆಯಿಂದ 9 ವಿಕೆಟ್​ಗೆ 190 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶಶಾಂಕ್ ಸಿಂಗ್ (61*ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 7 ವಿಕೆಟ್​ಗೆ 184 ರನ್​ಗಳಿಸಲಷ್ಟೇ ಶಕ್ತಗೊಂಡಿತು.

ಸವಾಲಿನ ಮೊತ್ತದ ಚೇಸಿಂಗ್​ಗೆ ಇಳಿದ ಪಂಜಾಬ್​ಗೆ ಪ್ರಿಯಾಂಶ್ (24)-ಪ್ರಭ್​ಸಿಮ್ರನ್ ಸಿಂಗ್ (26) ಮೊದಲ ವಿಕೆಟ್​ಗೆ 30 ಎಸೆತಗಳಲ್ಲಿ 43 ರನ್​ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಜೋಶ್ ಇಂಗ್ಲಿಸ್ (39) ಚೇಸಿಂಗ್​ಗೆ ಬಲ ತುಂಬಿದರು. ಇಂಗ್ಲಿಸ್ ವಿಕೆಟ್ ಪಡೆದ ಕೃನಾಲ್ (17ಕ್ಕೆ 2) ಪಂದ್ಯದ ಗತಿ ಬದಲಾಯಿಸಿದರು. 10ನೇ ಓವರ್​ನಲ್ಲಿ ರೊಮಾರಿಯೊ ಶೆಫರ್ಡ್, ನಾಯಕ ಶ್ರೇಯಸ್ ಅಯ್ಯರ್ (1) ವಿಕೆಟ್ ಪಡೆದ ಬಳಿಕ ಪಂದ್ಯ ತಿರುವು ಪಡೆಯಿತು. ಅನುಭವಿ ಭುವನೇಶ್ವರ್ (38ಕ್ಕೆ 2) 17ನೇ ಓವರ್​ನಲ್ಲಿ ವಧೇರ (15), ಸ್ಟೋಯಿನಿಸ್ (6) ವಿಕೆಟ್ ಪಡೆದು ಆರ್​ಸಿಬಿ ಹಾದಿ ಸುಗಮಗೊಳಿಸಿದರು.

ಇಂದು ಆರ್​ಸಿಬಿ ತಂಡದಿಂದ ವಿಜಯೋತ್ಸವ ಮೆರವಣಿಗೆ​: ಎಲ್ಲಿಂದ? ಯಾವಾಗ ಶುರು? ಇಲ್ಲಿದೆ ಮಾಹಿತಿ…

Leave a Reply

Your email address will not be published. Required fields are marked *