ಬೆಂಗಳೂರು: ಬೆಂಗಳೂರಿನಲ್ಲಿ ತನ್ನ ಜಾಲ ವಿಸ್ತರಣೆಗೆ ಮುಂದಾಗಿರುವ ನಮ್ಮ ಮೆಟ್ರೋ ಮೂರನೇ ಹಂತ ಯೋಜನೆಯನ್ನು ಆರಂಭಿಸಲಿದೆ. ಈ ಸಂಬಂಧ ತಾಂತ್ರಿಕ ಕಾರ್ಯವನ್ನು ಆರಂಭಿಸಲು ಸಜ್ಜಾಗಿದೆ. ನಮ್ಮ ಮೆಟ್ರೋ ಯೋಜನೆಯ 3ನೇ ಹಂತ 44.65 ಕಿ. ಮೀ.ಗಳನ್ನು ಒಳಗೊಂಡಿದೆ. ಈ ಯೋಜನೆಗೆ 16328 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಮಾತ್ರವಲ್ಲದೇ ಸಾಲ ಪಡೆದು ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
ಮೆಟ್ರೋ 3ನೇ ಹಂತದ ಯೋಜನೆಯನ್ನು ಎರಡು ಕಾರಿಡಾರ್ ಆಗಿ ವಿಂಗಡನೆ ಮಾಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) 2025ರ ಜೂನ್ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ 175 ಕಿ. ಮೀ. ಮೆಟ್ರೋ ಮಾರ್ಗ ನಿರ್ಮಾಣ, 2041ರ ಅಂತ್ಯಕ್ಕೆ 314 ಕಿ. ಮೀ. ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ. 2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ನಾಗರಬಾವಿಯಲ್ಲದೆ, ಮಾಗಡಿ ರಸ್ತೆಯ ಕಾಮಾಕ್ಷಿ ಪಾಳ್ಯ, ಮತ್ತು ಸುಂಕದಕಟ್ಟೆಯಲ್ಲೂ ಮೆಟ್ರೋ ಸೇವೆ ತರಲು ಶಾಸಕರಾದ ಪ್ರಿಯಕೃಷ್ಣ ಅವರು ಯತ್ನಿಸಿದ್ದರು. ಕೊನೆಗೂ ಅವರ ಕನಸು ನನಸಾಗಿದೆ.
3ನೇ ಹಂತದಲ್ಲಿ ಎರಡು ಕಾರಿಡಾರ್ಗಳು
ಕರ್ನಾಟಕ ಸರ್ಕಾರ 44.65 ಕಿ. ಮೀ.ಗಳ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿದೆ. ಎರಡು ಕಾರಿಡಾರ್ಗಳನ್ನು ಈ ಯೋಜನೆ ಹೊಂದಿದೆ. ಹೊರವರ್ತುಲ ರಸ್ತೆಯ ಪಶ್ಚಿಮಕ್ಕೆ ಒಂದು ಕಾರಿಡಾರ್ ಮತ್ತು ಮಾಗಡಿ ರಸ್ತೆ ಮೂಲಕ ಮತ್ತೊಂದು ಕಾರಿಡಾರ್ ಸಾಗಲಿದೆ. 3ನೇ ಹಂತದ ಮೆಟ್ರೋ ಯೋಜನೆಗೆ 16328 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2028ರಲ್ಲಿ ಈ ಯೋಜನೆ ಪೂರ್ಣಗೊಂಡು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ನಮ್ಮ ಮೆಟ್ರೋ 3ನೇ ಹಂತದ ಯೋಜನೆಯ ವೆಚ್ಚ ಸದ್ಯದ ಮಾಹಿತಿ ಪ್ರಕಾರ 16328 ಕೋಟಿ ರೂ.ಗಳು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಶೇ 20ರಷ್ಟು ಅನುದಾನ ನೀಡಲಿವೆ. ಉಳಿದ ಶೇ 60ರಷ್ಟು ಅನುದಾನವನ್ನು ಸಾಲವಾಗಿ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಸದ್ಯ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ವಿಸ್ತರಣೆ ಮಾರ್ಗ, 2ನೇ ಹಂತದ ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಹ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ.

ನಮ್ಮ ಮೆಟ್ರೋ ಫೇಸ್-3 ಕಾರಿಡಾರ್ 1
ಜೆ. ಪಿ. ನಗರ 4ನೇ ಹಂತದಿಂದ ಕೆಂಪಾಪುರವನ್ನು ಹೊರವರ್ತುಲ ರಸ್ತೆ ಮೂಲಕ ನಮ್ಮ ಮೆಟ್ರೋ ಫೇಸ್-3 ಮಾರ್ಗದ ಕಾರಿಡಾರ್-1 ಸಂಪರ್ಕಿಸುತ್ತದೆ. ಈ ಜಾಲ 32.15 ಕಿ. ಮೀ. ಇರಲಿದ್ದು, ಒಟ್ಟು 22 ನಿಲ್ದಾಣಗಳಿವೆ.
ಈ ಮಾರ್ಗದಲ್ಲಿ ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್, ಹೊಸಕೆರೆಹಳ್ಳಿ, ದ್ವಾರಕಾ ನಗರ, ಮೈಸೂರು ರಸ್ತೆ, ನಾಗರಬಾವಿ ಸರ್ಕಲ್, ವಿನಾಯಕ ಲೇಔಟ್, ಪಾಪರೆಡ್ಡಿ ಪಾಳ್ಯ, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್, ಸುಮನಹಳ್ಳಿ ಕ್ರಾಸ್, ಚೌಡೇಶ್ವರಿ ನಗರ, ಫ್ರೀಡಂ ಫೈಟರ್ಸ್ ಕಾಲೋನಿ, ಕಂಠೀರವ ನಗರ, ಪೀಣ್ಯ, ಮುತ್ಯಾಲ ನಗರ, ಬಿಇಎಲ್ ಸರ್ಕಲ್, ನಾಗಶೆಟ್ಟಿಹಳ್ಳಿ, ಹೆಬ್ಬಾಳ ರೈಲು ನಿಲ್ದಾಣ, ಕೆಂಪಾಪುರ ನಿಲ್ದಾಣಗಳಿವೆ.
ಮೆಟ್ರೋ ಫೇಸ್-3 ಕಾರಿಡಾರ್ 2
ನಮ್ಮ ಮೆಟ್ರೋ ಫೇಸ್ -3 ಹೊಸಹಳ್ಳಿ-ಕಡಬಗೆರೆ ಸಂಪರ್ಕ ಕಲ್ಪಿಸುತ್ತದೆ. 12.5 ಕಿ. ಮೀ. ವ್ಯಾಪ್ತಿಯ ಜಾಲದಲ್ಲಿ 9 ನಿಲ್ದಾಣಗಳಿವೆ. ಹೊಸಹಳ್ಳಿ, ಕೆಎಚ್ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೆರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್, ಕಡಬಗೆರೆ ನಿಲ್ದಾಣಗಳು ಇರಲಿವೆ. ಫೇಸ್-3 ಯೋಜನೆಯಲ್ಲಿ ಕನಕಪುರ ರೋಡ್ ಜಂಕ್ಷನ್, ಸಾರಕ್ಕಿ ಜಂಕ್ಷನ್ನಲ್ಲಿ ರೋಡ್ ಕಂ ಫ್ಲೈ ಓವರ್ ನಿರ್ಮಾಣವಾಗಲಿದೆ. ಕಾಮಾಕ್ಯ-ಇಟ್ಟಮಡು-ಹೊಸಕೆರೆಹಳ್ಳಿ ಜಂಕ್ಷನ್ನಲ್ಲಿಯೂ ಇದೇ ಮಾದರಿ ವ್ಯವಸ್ಥೆ ಬರಲಿದೆ.

ಜುಲೈ 8ರಿಂದ ಬೆಂಗಳೂರಿನಾದ್ಯಂತ ಕಾಮಗಾರಿ ಸ್ಥಗಿತ: ಬಿಬಿಎಂಪಿ ಗುತ್ತಿಗೆದಾರರ ಸಂಘ ನಿರ್ಧಾರ


