Greater Bengaluru News9: ಪಾದಚಾರಿ ಮಾರ್ಗಗಳ ತೆರವು ಕಾರ್ಯಾಚರಣೆ ನಂತರ ಇದೀಗ ಬೆಂಗಳೂರು ನಗರದ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿಕೊಂಡಿರುವ ಬಿಟ್ಟುಹೋಗಿರುವ ವಾಹನಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಗೆ ಇಂದು ಶುಕ್ರವಾರ ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಚಾಲನೆ ನೀಡಿದರು.
ಇಂದು ಬೆಳಗ್ಗೆ ಅವರು ಕ್ವೀನ್ಸ್ ರಸ್ತೆಯಲ್ಲಿ ಹಲವು ಸಮಯಗಳಿಂದ ಬಿಟ್ಟುಹೋಗಿರುವ ವಾಹನಗಳಿಗೆ ನೊಟೀಸ್ ಅಂಟಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸುವುದು, ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದು ಹಾಗೂ ನಾಗರಿಕರ ಸಂಚಾರವನ್ನು ಸುಗಮಗೊಳಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ. ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ಅಡೆತಡೆಗಳಿಂದ ಮುಕ್ತಗೊಳಿಸಿ, ಸಾರ್ವಜನಿಕ ಸ್ಥಳಗಳನ್ನು ಹೆಚ್ಚು ಸುಲಭವಾಗಿ ಬಳಸುವಂತಾಗಿಸುವ ಸರ್ಕಾರದ ನಿರಂತರ ಪ್ರಯತ್ನದ ಭಾಗವಾಗಿ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಸಚಿವರ ಕಚೇರಿ ತಿಳಿಸಿದೆ.
ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸರು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗಿರುವ ವಾಹನಗಳನ್ನು ತೆರವುಗೊಳಿಸಿ ಹರಾಜು ಮಾಡುವ ಕುರಿತು ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಿದ್ದರು.
ಜುಲೈ 10ರಿಂದ ಹಲವು ಸಮಯಗಳಿಂದ ರಸ್ತೆ, ತೆರೆದ ಸ್ಥಳಗಳು ಹಾಗೂ ಇತರ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಲಕ್ಷ್ಯವಾಗಿ ಬಿಟ್ಟುಹೋಗಿರುವ ವಾಹನಗಳನ್ನು ಗುರುತಿಸಲಾಗುವುದು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ನಿಗಮಗಳು ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಜಂಟಿ ಕಾರ್ಯಾಚರಣೆ ನಡೆಸಲಿದ್ದು, ಅಂತಹ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ–2024ರ ಸೆಕ್ಷನ್ 324ರ ಅನ್ವಯ, ಜಿಬಿಎ ವ್ಯಾಪ್ತಿಯ ಐದು ನಗರ ನಿಗಮಗಳು ಈ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಸಚಿವರ ಕಚೇರಿ ತಿಳಿಸಿದೆ.
ಬಿಟ್ಟುಹೋಗಿರುವ ವಾಹನಗಳಿಗೆ ಅಂಟಿಸಲಾಗುವ ನೊಟೀಸ್ ನಲ್ಲಿ ವಾಹನ ಮಾಲೀಕರಿಗೆ ಅದನ್ನು ತೆರವುಗೊಳಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನೊಟೀಸ್ ಅಂಟಿಸುವ ಸಂದರ್ಭದಲ್ಲಿ ವಾಹನಕ್ಕೆ ವೀಲ್ ಕ್ಲ್ಯಾಂಪ್ ಕೂಡ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳು ದಿನಗಳೊಳಗೆ ವಾಹನವನ್ನು ತೆರವುಗೊಳಿಸದಿದ್ದರೆ, ಜಂಟಿ ಕಾರ್ಯಾಚರಣೆ ತಂಡವು ಅದನ್ನು ವಶಪಡಿಸಿಕೊಂಡು ತೆಗೆದುಕೊಂಡು ಹೋಗಲಿದೆ. ವಶಪಡಿಸಿಕೊಳ್ಳಲಾದ ಎಲ್ಲಾ ವಾಹನಗಳನ್ನು ಕಾನೂನುಬದ್ಧ ಮಾರ್ಗಸೂಚಿಗಳಂತೆ ಸಾರ್ವಜನಿಕ ಹರಾಜಿಗೆ ಇಡಲಾಗುವುದು. ನಂತರ ವಾಹನಗಳ ಕುರಿತು ಯಾವುದೇ ಹಕ್ಕು ಮಂಡನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಜಿಬಿಎ ಅಧಿಕಾರಿಗಳು, ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಯಾವುದೇ ವಾಹನಗಳನ್ನು ಬಿಟ್ಟುಹೋಗಿದ್ದರೆ, ಅವುಗಳನ್ನು ತಕ್ಷಣವೇ ನಿಮ್ಮ ಖಾಸಗಿ ಜಾಗಕ್ಕೆ ಸ್ಥಳಾಂತರಿಸಿ. ಇಲ್ಲವಾದರೆ ವಾಹನಗಳನ್ನು ವಶಪಡಿಸಿಕೊಂಡು ಸಾರ್ವಜನಿಕ ಹರಾಜು ನಡೆಸಲಾಗುತ್ತದೆ ಎಂದು ಸೂಚಿಸಿದ್ದಾರೆ.


