BBMP
Loading ...

Pumpset

ರಾಮನಗರ: ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದು, ರೈತರು ಸ್ವಯಂ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು. ಅವರು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಂಧನ ಇಲಾಖೆ ಸಂಬಂಧಿಸಿ ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ವೇಳೆ ಈ ವಿಚಾರ ಪ್ರಸ್ತಾಪಿಸಿದರು.

ಕೃಷಿ ಪಂಪ್ ಸೆಟ್‌ಗಳ ಸಕ್ರಮಕ್ಕೆ ನವೀಕೃತ ಶೀಘ್ರ ಸಂಪರ್ಕ ಯೋಜನೆ
2023ರ ಸೆ. 22ರ ಬಳಿಕ ಸ್ಥಾಪಿಸಿರುವ ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ರೈತರು ಸ್ವಂತ ವೆಚ್ಚದಲ್ಲಿ ಲೈನ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂಪ್ ಸೆಟ್ ಗಳಿಗೆ ಎಸ್ಕಾಂಗಳ ವತಿಯಿಂದಲೇ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಸಚಿವ ಕೆಜೆ ಜಾರ್ಜ್ ಹೇಳಿದರು.

ಕರ್ನಾಟಕದಲ್ಲಿ 2004ರಲ್ಲಿ ಕೃಷಿ ಪಂಪ್ ಸೆಟ್‌ಗಳ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬಂದಿತ್ತಾದರೂ 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 4.5 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳು ಇದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ 2023ರ ಸೆ. 22ಕ್ಕೆ ಮುನ್ನ ಸಂಪರ್ಕ ಪಡೆದಿದ್ದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ನಿರ್ಧರಿಸಿ ಈವರೆಗೆ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿದೆ. ಉಳಿದವುಗಳನ್ನು ಇನ್ನು ಒಂದು ವರ್ಷದೊಳಗೆ ಸಕ್ರಮಗೊಳಿಸಲಾಗುವುದು ಎಂದು ಕೆಜೆ ಜಾರ್ಜ್‌ ಹೇಳಿದರು.

ಆದರೆ, 2023ರ ಸೆ. 22ರ ಬಳಿಕ ಸ್ಥಾಪಿಸಲಾದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅಕ್ರಮ ಪಂಪ್ ಸೆಟ್ ಹೊಂದಿರುವ ರೈತರು ಎಸ್ಕಾಂಗಳಿಗೆ ನಿಗದಿತ ಠೇವಣಿ ಪಾವತಿಸಿ ಅವರ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಅದಾದ ಬಳಿಕ 2 ಅಥವಾ ಅದಕ್ಕಿಂತ ಹೆಚ್ಚಿನ ಪಂಪ್ ಸೆಟ್ ಗಳಿಗೆ ಅವುಗಳ ಸಾಮರ್ಥ್ಯ ಆಧರಿಸಿ ಎಸ್ಕಾಂಗಳ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ಸಂಪರ್ಕ ಸಕ್ರಮಗೊಳಿಸಲಾಗುವುದು ಎಂದು ಸಚಿವ ಜಾರ್ಜ್‌ ತಿಳಿಸಿದರು.

ನವೀಕೃತ ಶೀಘ್ರ ಸಂಪರ್ಕ ಯೋಜನೆಯು ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ಎಲ್ಲಾ ಕೃಷಿ ಪಂಪ್ ಸೆಟ್ ಗಳಿಗೆ ಅನ್ವಯವಾಗುತ್ತದೆ. ವಿದ್ಯುತ್ ಜಾಲದಿಂದ 500 ಮೀಟರ್ ಗಿಂತ ದೂರ ಇರುವ ಪಂಪ್ ಸೆಟ್ ಗಳಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ. ಸೋಲಾರ್ ಪಂಪ್ ಸೆಟ್ ಗಳಿಗೆ ಕುಸುಮ್- ಬಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 30, ರಾಜ್ಯ ಸರ್ಕಾರದಿಂದ ಶೇ. 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಶೇ. 20ರಷ್ಟು ಮೊತ್ತವನ್ನು ಮಾತ್ರ ರೈತರು ಪಾವತಿಸಬೇಕು ಎಂದು ತಿಳಿಸಿದರು.

ವಿಧಾನಸಭೆ ಸದಸ್ಯರಾದ ಎಚ್.ಎ. ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಸಭೆಯಲ್ಲಿದ್ದರು.

ಸಿಲಿಕಾನ್​ ಸಿಟಿ ವಾಹನ ಸವಾರರಿಗೆ ಬಿಗ್​ ಶಾಕ್​: ಮತ್ತೆ ಶುರು ಟೋಯಿಂಗ್​, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ಎತ್ಹಾಕೊಂಡು ಹೋಗ್ತಾರೆ!

Leave a Reply

Your email address will not be published. Required fields are marked *