BBMP
Loading ...

Bribe Officers

ಮಂಗಳೂರು: ಮನೆ ಕಟ್ಟಲು ಭೂಮಿ ಸಮತಟ್ಟು ಮಾಡುವ ಉದ್ದೇಶದಿಂದ ಕಲ್ಲು ತೆಗೆಯಲು 50 ಸಾವಿರ ರೂ. ಲಂಚದ ಬೇಡಿಕೆಯಿಟ್ಟು, ಅದನ್ನು ಸ್ವೀಕರಿಸುತ್ತಿದ್ದ ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ವ್ಯಕ್ತಿಯೊಬ್ಬರು ಉಳ್ಳಾಲ ತಾಲೂಕು ಇರಾ ಗ್ರಾಮದ 1.39 ಎಕರೆ ವಿಸ್ತೀರ್ಣದ ಜಮೀನಿನ 35 ಸೆಂಟ್ಸ್ ಪ್ರದೇಶದಲ್ಲಿ ಮನೆ ಕಟ್ಟಲು ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 2024ರ ಅ.28ರಂದು ಅರ್ಜಿ ಸಲ್ಲಿಸಿದ್ದರು.

ಭೂಮಿ ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡ ಕಲ್ಲು ತೆಗೆಯಲು ಪ್ರಮಾಣಪತ್ರ ನೀಡಬಹುದಾಗಿದೆ ಎಂದು ಉಳ್ಳಾಲ ತಾಲೂಕು ತಹಸೀಲ್ದಾರ್ ಮಾರ್ಚ್‌ 21ರಂದು ವರದಿ ಸಲ್ಲಿಸಿದ್ದರೂ, ಗಣಿ ಇಲಾಖೆಯಿಂದ ಅನುಮತಿ ನೀಡಿರಲಿಲ್ಲ.

ಈ ಬಗ್ಗೆ ಅರ್ಜಿದಾರರು ವಿಚಾರಿಸಲು ಮಂಗಳೂರು ಗಣಿ ಇಲಾಖೆ ಕಚೇರಿಗೆ ತೆರಳಿದಾಗ, ಉಪನಿರ್ದೇಶಕಿ ಕೃಷ್ಣವೇಣಿಯವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ 50 ಸಾವಿರ ರೂ. ತೆಗೆದುಗೊಳ್ಳಿ. ನಂತರ ಸಹಿ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಬುಧವಾರ ಕೃಷ್ಣವೇಣಿಯವರು ಚಾಲಕ ಮಧು ಮೂಲಕ 50 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಉಪನಿರ್ದೇಶಕಿ ಜತೆಗೆ ಸಿಬ್ಬಂದಿ ಪ್ರದೀಪ್ ಮತ್ತು ಮತ್ತು ಚಾಲಕ ಮಧುವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕರಾದ ಡಾ.ಗಾನ ಪಿ.ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ. ಮತ್ತು ಚಂದ್ರಶೇಖರ್ ಕೆ.ಎನ್., ಉಡುಪಿ ಲೋಕಾಯುಕ್ತ ನಿರೀಕ್ಷಕ ಮಂಜುನಾಥ, ರಾಜೇಂದ್ರ ನಾಯ್ಕ ಸಿಬ್ಬಂದಿ ಜತೆ ಟ್ರ್ಯಾಪ್‌ ಕಾರ್ಯಾಚರಣೆ ಕೈಗೊಂಡಿದ್ದರು.

ಹಿಂದೆ ಚಿಕ್ಕಬಳ್ಳಾಪುರ, ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಾಗಿದ್ದ ಕೃಷ್ಣವೇಣಿಯವರ ಮೇಲಿನ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಮಂಗಳೂರಿನ ಕೃಷ್ಣವೇಣಿಯವರ ಕಚೇರಿ ಹಾಗೂ ಮನೆಗೆ ನವೆಂಬರ್ ತಿಂಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಮುಸ್ಲಿಮರಿಗೆ 4%ರಷ್ಟು ಗುತ್ತಿಗೆ ಮೀಸಲಿಗೆ ಒಪ್ಪದ ಗವರ್ನರ್: ರಾಷ್ಟ್ರಪತಿಗಳ ಅಂಗಳಕ್ಕೆ ರವಾನೆ?

Leave a Reply

Your email address will not be published. Required fields are marked *