ಬೆಂಗಳೂರು: ವಿದ್ಯುತ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಮುಂದಾಗಿರುವ ಇಂಧನ ಇಲಾಖೆ, ಕೆಇಆರ್‌ಸಿ, ಬೆಸ್ಕಾಂಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಿದ್ಯುತ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆ ಸಂಬಂಧ ಬೆಂಗಳೂರು ವಿದ್ಯುಚ್ಛಕ್ತಿ ಪೂರೈಕೆ ಕಂಪೆನಿಯು (ಬೆಸ್ಕಾಂ) ಹೊರಡಿಸಿರುವ ಮಾರ್ಗಸೂಚಿ ವಜಾ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತು.
ಕರ್ನಾಟಕ ವಿದ್ಯುತ್ ಸೇನೆ ಪರವಾಗಿ ಹಿರಿಯ ವಕೀಲರಾದ ಲಕ್ಷ್ಮಿ ಐಯ್ಯಂಗಾರ್ ಅವರು ವಾದ ಮಂಡನೆ ಮಾಡಿದರು. ” ಟೆಂಡರ್ ಪಡೆದಿರುವ ವ್ಯಕ್ತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಉದ್ಯಮದಲ್ಲಿರುವ ಎಲ್ಲರನ್ನೂ ಟೆಂಡರ್‌ನಲ್ಲಿ ಭಾಗವಹಿಸುವಂತೆ ಸೂಚಿಸಿಲ್ಲ. ಮಾರ್ಗಸೂಚಿಗಳು ವಿರುದ್ಧವಾಗಿವೆ. ಈ ಬಗ್ಗೆ ಟೆಂಡರ್ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೂ ಈ ಉದ್ಯಮಕ್ಕೂ ಯಾವುದೇ ಸಂಬಂಧವಿಲ್ಲ ” ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಸ್ಮಾರ್ಟ್ ಮೀಟರ್‌ಗೆ 8 ಸಾವಿರ ರೂಪಾಯಿ ಪಾವತಿಸಬೇಕು
” ಸಿಂಗಲ್ ಫೇಸ್ ಮೀಟರ್‌ಗೆ 5 ಸಾವಿರ ರೂಪಾಯಿ ಮತ್ತು ತ್ರಿಫೇಸ್ ಮೀಟರ್‌ಗೆ 8 ಸಾವಿರ ರೂಪಾಯಿ ಪಾವತಿಸಬೇಕಿದೆ. ಇದು ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ ” ಎಂದು ಲಕ್ಷ್ಮಿ ಐಯ್ಯಂಗಾರ್ ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಎಲ್ಲರಿಗೂ ಕಡ್ಡಾಯವಲ್ಲ ಎಂದ ಬೆಸ್ಕಾಂ ಪರ ವಕೀಲ
ಬೆಸ್ಕಾಂ ಪರ ವಾದ ಮಂಡಿಸಿದ ಹಿರಿಯ ವಕೀಲ ಉದಯ್ ಹೊಳ್ಳ ಅವರು, “ಸ್ಮಾರ್ಟ್ ಮೀಟರ್‌ಗಳನ್ನು ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಹೊಸ ಕನೆಕ್ಷನ್‌ಗೆ (ಸಂಪರ್ಕಕ್ಕೆ) ಮಾತ್ರ ಅಳವಡಿಸಲಾಗುತ್ತಿದೆ ” ಎಂದರು. ಮುಂದುವರೆದು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಹಿರಿಯ ವಕೀಲರಾದ ಉದಯ್ ಹೊಳ್ಳ ಮತ್ತು ಕೆ ಎನ್ ಫಣೀಂದ್ರ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಮೂರು ಸಂಸ್ಥೆಗಳಿಗೆ ನೋಟಿಸ್ ಜಾರಿ
ಪ್ರಕರಣದ ಸಂಬಂಧ ಹೈಕೋರ್ಟ್ ಇಂಧನ ಇಲಾಖೆ, ಕೆಇಆರ್‌ಸಿ, ಬೆಸ್ಕಾಂಗೆ ನೋಟಿಸ್ ಜಾರಿ ಮಾಡಿತು. ಇನ್ನು ಈ ಅರ್ಜಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಚಾಮುಂಡೇಶ್ವರಿ ದರ್ಶನಕ್ಕೆ 2000 ರೂ ವಿಶೇಷ ಟಿಕೆಟ್: ಸರ್ಕಾರದ ವಿರುದ್ಧ ಸ್ಥಳೀಯ ಜನರ ಪ್ರತಿಭಟನೆ


