Greater Bengaluru News9 : ಒನ್ ವೇಯಲ್ಲಿ ಬಂದ ಯೂಟ್ಯೂಬರ್ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿದ ಘಟನೆ ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಳಗೆ ನಡೆದಿದೆ. ಘಟನೆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಸಂಬಂಧಿಸಿದ ಪೊಲೀಸ್ ಅಧಿಕಾರಿಗೆ ಅಮಾನತು ಆದೇಶ ಹೊರಬಿದ್ದಿದೆ.
ಮಾಹಿತಿಯ ಪ್ರಕಾರ, ಅಕ್ಟೋಬರ್ 13ರ ಮಧ್ಯಾಹ್ನ, ಕೇರಳ ಮೂಲದ ಯೂಟ್ಯೂಬರ್ ನಿತೀಶ್ ತನ್ನ ಸ್ನೇಹಿತನೊಂದಿಗೆ ಒನ್ ವೇಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾನೆ. ಆ ವೇಳೆ ಮಡಿವಾಳ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ತೇಲಿ ಅವರು ಯುವಕನನ್ನು ತಡೆದು ದಂಡ ವಿಧಿಸಿದರು.
ದಂಡದ ವೇಳೆ ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿ, ಸಿಟ್ಟಿಗೆದ್ದ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್, ಹೆಲ್ಮೆಟ್ ಹಾಕಿದ್ದ ನಿತೀಶ್‌ನ ಮುಖಕ್ಕೆ ಹೊಡೆದಿದ್ದಾರೆ. ಇದರಿಂದ ಸ್ಥಳದಲ್ಲೇ ಉದ್ವಿಗ್ನತೆ ಉಂಟಾಯಿತು.
ಕೋಪೋದ್ರಿಕ್ತನಾದ ಯುವಕ “ನನ್ನನ್ನು ಹೊಡೆಯಲು ನಿಮಗೆ ಅಧಿಕಾರ ಯಾರಿಂದ ಬಂದಿದೆ?” ಎಂದು ಪ್ರಶ್ನೆ ಮಾಡಿದಾಗ, ಮಲ್ಲಿಕಾರ್ಜುನ್ ಮತ್ತಷ್ಟು ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಸಂಪೂರ್ಣ ದೃಶ್ಯವನ್ನು ನಿತೀಶ್‌ನ ಸ್ನೇಹಿತ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಬಳಿಕ ಅದನ್ನು ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ.
ವೀಡಿಯೊ ವೈರಲ್ ಆದ ನಂತರ, ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ತಕ್ಷಣ ಕ್ರಮ ಕೈಗೊಂಡು ಮಡಿವಾಳ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ತೇಲಿ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಇಲಾಖೆಯು ಪ್ರಕರಣದ ಕುರಿತು ಒಳಗಿನ ತನಿಖೆ ಪ್ರಾರಂಭಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.


