Greater Bengaluru News9 : ಹಿಂದೆ ಕೊಟ್ಟ ಭರವಸೆಗಳೇ ಕಾಂಗ್ರೆಸ್ಸಿನ ಹಿರಿಯ ನಾಯಕರು ಮತ್ತು ಹೈಕಮಾಂಡಿಗೆ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ನಂತರ, ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇನ್ನೊಂದು ಕಡೆ, ಇಂತದ್ದೇ ಖಾತೆ ಬೇಕು ಎನ್ನುವ ಹಠಕ್ಕೂ ಸಚಿವರೂ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ನಗರ ವ್ಯಾಪ್ತಿಯ ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಎಂ.ಕೃಷ್ಣಪ್ಪ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಅದೇನು ಭರವಸೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅಥವಾ ಸಿಎಂ ಡಿಕೆ ಶಿವಕುಮಾರ್ ಅಥವಾ ಎಐಸಿಸಿ ನಾಯಕರು ನೀಡಿದ್ದರೋ ಗೊತ್ತಿಲ್ಲ, ಸಚಿವ ಸ್ಥಾನ ಬೇಕೇಬೇಕು ಎಂದು ಹಠ ಹಿಡಿದು ಕೂತಿದ್ದಾರೆ. ಯಾರ ಮಾತಿಗೆ ಮಣಿಯದ ಇವರಿಗಾಗಿ, ಈಗಾಗಲೇ ಪ್ರಮಾಣವಚನ ತೆಗೆದುಕೊಂಡಿರುವ ನೂತನ ಸಚಿವರ ಪೈಕಿ, ಒಬ್ಬರು ತ್ಯಾಗ ಮಾಡಬೇಕಾದ ಅನಿವಾರ್ಯತೆ ಬಂದರೂ ಬರಬಹುದು ಎಂದು ಹೇಳಲಾಗುತ್ತಿದೆ.
ಸತತವಾಗಿ ಗೆಲುವು ಸಾಧಿಸುತ್ತಾ ಬರುತ್ತಿರುವ ಎಂ.ಕೃಷ್ಣಪ್ಪ
ಕ್ಷೇತ್ರ ಪುನರ್-ವಿಂಗಡಣೆಯ ನಂತರ ಅಂದರೆ, 2008ರಿಂದ ಎಂ.ಕೃಷ್ಣಪ್ಪ, ಸತತವಾಗಿ ಗೆಲುವನ್ನು ಸಾಧಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವ ವಿ.ಸೋಮಣ್ಣನವರ ಪ್ರಭಾವದ ನಡುವೆಯೂ, ಕಾಂಗ್ರೆಸ್ ಪಾರ್ಟಿಯ ನೆಲೆಯನ್ನು ಇವರು ಭದ್ರಗೊಳಿಸಿದ್ದರು. 2023ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದಾಗಲೇ, ಇವರು ಸಚಿವ ಸ್ಥಾನದ ರೇಸಿನಲ್ಲಿದ್ದರು. ಆವೇಳೆ, ಇವರನ್ನು ಸಮಾಧಾನ ಪಡಿಸಲಾಗಿತ್ತು. ಈಗ, ಮತ್ತೆ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೂ, ಇವರಿಗೆ ಸಚಿವ ಸ್ಥಾನ ನೀಡಲಾಗಲಿಲ್ಲ.
ಪ್ರಮಾಣವಚನದ ದಿನದಂದೇ ಎಂ.ಕೃಷ್ಣಪ್ಪ ಮತ್ತು ಅವರ ಬೆಂಬಲಿಗರು ಆಕ್ರೋಶವನ್ನು ಹೊರಹಾಕಿದ್ದರು. ಖುದ್ದು ಮುಖ್ಯಮಂತ್ರಿಗಳ ಕಾರಿಗೇ ಮುತ್ತಿಗೆಯನ್ನು ಹಾಕಿದ್ದರು. ಇವರನ್ನು ಸಮಾಧಾನ ಪಡಿಸುವ ಹಲವು ಪ್ರಯತ್ನಗಳು ವಿಫಲವಾಗಿದೆ. ನಿಗಮ ಮಂಡಳಿ ಸ್ಥಾನವನ್ನು ಇವರು ನೋ ಎಂದಿದ್ದಾರೆ. ಇಲ್ಲಿ ಏನಾದರೂ, ನಿರ್ಧಾರವನ್ನು ಕಾಂಗ್ರೆಸ್ ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ರಾಹುಲ್ ಗಾಂಧಿ ಕೂಡಾ ಕೃಷ್ಣಪ್ಪ ಮನವೊಲಿಕೆಗೆ ಪ್ರಯತ್ನ
ಎಂ.ಕೃಷ್ಣಪ್ಪ ಅಸಮಾಧಾನಗೊಂಡ ನಂತರ ಮೊದಲು, ಸಚಿವರಾದ ಚೆಲುವರಾಯಸ್ವಾಮಿ ಮತ್ತು ಮಾಗಡಿ ಬಾಲಕೃಷ್ಣ, ಮನವೊಲಿಸಲು ಪ್ರಯತ್ನಿಸಿದರು. ಇದಾದ ನಂತರ ಖುದ್ದು ಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕೂಡಾ ಪ್ರಯತ್ನಿಸಿದರು. ಇದ್ಯಾವುದೂ ಫಲ ಕೊಡದೇ ಇದ್ದಾಗ, ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಕೂಡಾ ಇವರ ಜೊತೆ ದೂರವಾಣಿಯಲ್ಲಿ ಮಾತುಕತೆಯನ್ನು ನಡೆಸಿದರು ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್ ನಾಯಕರ ಎಲ್ಲಾ ಪ್ರಯತ್ನವು ಸದ್ಯದ ಮಟ್ಟಿಗೆ ಫೇಲ್ ಆಗಿದೆ.
ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಸದ್ಯ ಒಂದು ಹುದ್ದೆ ಮಾತ್ರ ಖಾಲಿಯಿದೆ. ಇದನ್ನು ಮಹಿಳೆಯರಿಗೆ ಮೀಸಲಿಡುವ ಅನಿವಾರ್ಯತೆಯಲ್ಲಿ ಪಾರ್ಟಿಯಿದೆ. ಹಾಗಾಗಿ, ಕೃಷ್ಣಪ್ಪನವರಿಗೆ ಸ್ಥಾನ ಕಲ್ಪಿಸಬೇಕಾದರೆ, ಒಬ್ಬರು ಸಚಿವ ಸ್ಥಾನವನ್ನು ತ್ಯಾಗ ಮಾಡಬೇಕಾಗಿ ಬರಬಹುದು ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿ ಬಂದಾಗ, ಯಾವ ಸಮುದಾಯದ ಸಚಿವರನ್ನು ಮನವೊಲಿಸಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಒಕ್ಕಲಿಗೆ ಅಥವಾ ಬೆಂಗಳೂರು ನಗರ ಶಾಸಕರು – ಯಾವುದನ್ನು ಆಯ್ಕೆ ಮಾಡಬಹುದು?
ಬೆಂಗಳೂರು ನಗರ ವಿಜಯನಗರ ಕ್ಷೇತ್ರದ ಶಾಸಕರಾದ ಎಂ.ಕೃಷ್ಣಪ್ಪನವರು ಒಕ್ಕಲಿಗ ಸಮುದಾಯದವರಾಗಿದ್ದಾರೆ. ಆ ಸಮುದಾಯದವರು, ಸರ್ಕಾರದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮರ್ ಸೇರಿ, ಆರು ಸಚಿವರಿದ್ದಾರೆ. ಅದರಲ್ಲಿ, ಶಿವಲಿಂಗೇ ಗೌಡ ಮತ್ತು ಬಾಲಕೃಷ್ಣ ನೂತನವಾಗಿ ಸಚಿವರಾಗಿದ್ದಾರೆ. ಇನ್ನೊಂದು ಆಯಾಮದ ಪ್ರಕಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರದ ಭಾಗದ ಒಟ್ಟು ಒಂಬತ್ತು ಮುಖಂಡರು ಸಚಿವರಾಗಿದ್ದಾರೆ.
ಒಂದು ವೇಳೆ, ಕೃಷ್ಣಪ್ಪನವರಿಗೆ ಸ್ಥಾನ ಕಲ್ಪಿಸಲು ಒಬ್ಬರು ತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾದರೆ, ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿಎಂ ಡಿಕೆ ಶಿವಕುಮಾರ್, ಈ ಎರಡು ಆಯ್ಕೆಯನ್ನು ಪರಿಗಣಿಸಿ, ಒಬ್ಬರನ್ನು ಮನವೊಲಿಸಿ, ಸಚಿವ ಸ್ಥಾನ ತ್ಯಾಗ ಮಾಡುವಂತೆ ಸೂಚಿಸಬಹುದಾ ಎನ್ನುವ ಚರ್ಚೆ ಆರಂಭವಾಗಿದೆ. ಇದಕ್ಕೆ ಪೂರಕ ಎನ್ನುವಂತೆ, ಮಾಗಡಿ ಬಾಲಕೃಷ್ಣ ಮಾತನಾಡಿ, ಕೃಷ್ಣಪ್ಪನವರಿಗಾಗಿ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದ ಎಂದಿದ್ದಾರೆ.


