Greater Bengaluru News9: ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ಇನ್ಮುಂದೆ ಬೆಂಗಳೂರು-ಒನ್ ಮತ್ತು ಕರ್ನಾಟಕ-ಒನ್ ಕೇಂದ್ರಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಆನ್‌ಲೈನ್ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಒದಗಿಸುತ್ತಿದೆ ಎಂದಿದೆ.
ಕೆಎಸ್‌ಆರ್‌ಟಿಸಿ ವೆಬ್‌ಸೈಟ್, ಮೊಬೈಲ್ ಆಪ್, ಇಲಾಖಾ ಕೌಂಟರ್‌ಗಳು ಹಾಗೂ ಫ್ರಾಂಚೈಸಿ ಕೌಂಟರ್‌ಗಳ ಜೊತೆಗೆ, ಪ್ರಯಾಣಿಕರು ಈಗ ತಮ್ಮ ಮನೆಗೆ ಸಮೀಪದಲ್ಲಿರುವ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕವೂ ಮುಂಗಡ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ ನಿರ್ದೇಶನಾಲಯ (EDCS) ರವರ ಬೆಂಗಳೂರು-ಒನ್ ಹಾಗೂ ಕರ್ನಾಟಕ-ಒನ್ ಕೇಂದ್ರಗಳಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿದೆ.
ಈ ಸೇವೆ ಬೆಂಗಳೂರು ನಗರದಲ್ಲಿರುವ 161 ಬೆಂಗಳೂರು-ಒನ್ ಕೇಂದ್ರಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ 1021 ಕರ್ನಾಟಕ-ಒನ್ ಕೇಂದ್ರಗಳಲ್ಲಿ ಲಭ್ಯವಿದೆ. ಪ್ರಯಾಣಿಕರು ಈ ಸುಲಭ ಮತ್ತು ಹತ್ತಿರದ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ.
ಟಿಕೆಟ್ ಕಾಯ್ದಿರಿಸುವಿಕೆ ಅಥವಾ ಯಾವುದೇ ಸಹಾಯಕ್ಕಾಗಿ, ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕರೆ ಕೇಂದ್ರವನ್ನು 080-26252625 (24×7) ಅಥವಾ AWATAR ಸೆಲ್ ಅನ್ನು 7760990034 / 7760990035 (ಬೆಳಿಗ್ಗೆ 7.00 ರಿಂದ ರಾತ್ರಿ 10.00 ಗಂಟೆವರೆಗೆ) ಅಥವಾ ಬೆಂಗಳೂರು-ಒನ್ ಕರೆ ಕೇಂದ್ರವನ್ನು 080-49203888 ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


