ಬೆಂಗಳೂರು: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ಕೊಡೋದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಸಿದ್ದಾರೆ. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೌಂಟರ್ ನೀಡಲು ಸಿಟಿ ರವಿ ಕೂಡ ದೂರು ನೀಡಿದ್ದಾರೆ.
ಇದೆಲ್ಲ ನಿನ್ನೆಯ ಬೆಳವಣಿಗೆ ಆದ್ರೆ ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಖಾನಾಪುರ ಸಿಪಿಐ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿಟಿ ರವಿ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣದಲ್ಲಿ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ನಾಯಕ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ಅವರು ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ನಾಯಕ್ ಅವರನ್ನು ಅಮಾನತು ಮಾಡಿದ್ದು, ಸಿ.ಟಿ ರವಿ ಅವರನ್ನು ಖಾನಾಪುರ ಠಾಣೆಗೆ ಕರೆತಂದು ಕರ್ತವ್ಯ ಲೋಪ, ನಿಷ್ಕಾಳಜಿತನ ಮತ್ತು ಬೇಜಬ್ದಾರಿತನ ತೋರಿದ್ದಲ್ಲದೇ, ಅಪಾದಿತನರನ್ನ ಹೊರತುಪಡಿಸಿ ಠಾಣೆ ಒಳಗಡೆ ಯಾರನ್ನು ಬಿಡದಂತೆ ಆದೇಶವಿದ್ದರೂ ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ ಆರೋಪದಡಿ ಇನ್ಸ್‌ಪೆಕ್ಟರ್ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ.
ಕಾನೂನು ಹೋರಾಟಕ್ಕೆ ಮುಂದಾದ ಸಿಟಿ ರವಿ
ಬೆಳಗಾವಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ ಪ್ರಕರಣದಲ್ಲಿ ಸಿಟಿ ರವಿ ಅವರು ಪೊಲೀಸರಿಂದ ಬಂಧನ ನಂತರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರವಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ್ದರು. ಇದೀಗ ಸುವರ್ಣ ಸೌಧದಿಂದ ಬಂಧನವಾಗಿ ಬಿಡುಗಡೆವರೆಗೂ ನಡೆದ ಘಟನೆಯ ಬಗ್ಗೆ ಸಿಟಿ ರವಿ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿದ ಬೆನ್ನಲ್ಲೇ ಸಿಟಿ ರವಿ ಕೂಡ ನಿನ್ನೆ ತನ್ನ ಬಂಧನದ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣದ ಬಗ್ಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಸಭಾಪತಿ ಬಸವರಾಜ್ ಹೊರಟ್ಟಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಪೊಲೀಸ್ ಮಹಾ ನಿರೀಕ್ಷಕರಿಗೆ ದೂರು ನೀಡಿದ್ದು, 7 ಪುಟಗಳ ವಿಸ್ತಾರವಾದ ದೂರಿನಲ್ಲಿ ಸಿಟಿ ರವಿ ಅವರು, ಸದನದಲ್ಲಿ ನಡೆದ ಘಟನೆ, ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಸಿಟಿ ರವಿ ಅವರು ಘಟನೆಯ ಬಗ್ಗೆ ಸಂಪೂರ್ಣವಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪರಿಷತ್ ಸದಸ್ಯರಾದ ಬೋಸರಾಜ್ ಸೇರಿದಂತೆ ಹಲವರು ತನ್ನ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ಸಿಟಿ ರವಿ ನೀಡಿದ್ದಾರೆ. ಸಭಾಪತಿಗಳಿಗೆ ಕೊಟ್ಟ ದೂರಿನಲ್ಲಿ ಪೊಲೀಸರಿಂದ ಹಕ್ಕು ಚ್ಯುತಿ ಆಗಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದು, ಜೀವ ಬೆದರಿಕೆ, ಮಾನಹಾನಿಯಾಗಿದೆ ಎಂದು ದೂರು ನೀಡಿದ್ದಾರೆ. ಅಲ್ಲದೇ, ಸಚಿವರ ಬೆಂಬಲಿಗರಿಂದ ಹಲ್ಲೆ ಯತ್ನ ನಡೆದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ದೂರು ನೀಡುವುದಕ್ಕೂ ಮೊದಲು ಕಾನೂನು ಹೋರಾಟದ ಕುರಿತು ತಜ್ಞರ ಜೊತೆ ಸಿ.ಟಿ ರವಿ ಚರ್ಚೆ ನಡೆಸಿದ್ದು, ಆ ಬಳಿಕ ದೂರು ನೀಡಲು ನಿರ್ಧರಿಸಿದ್ದರು. ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಇದರ ಬಗ್ಗೆ ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ. ನ್ಯಾಯ ಸಮ್ಮತವಾಗಿದ್ದರೆ ಸಿಐಡಿಗೆ ನೀಡಬೇಕಿಲ್ಲ. ಪೊಲೀಸ್ ಠಾಣೆಯಲ್ಲೇ ನ್ಯಾಯ ಸಿಗುತ್ತೆ ಎಂದು ಸಿಟಿ ರವಿ ಹೇಳಿದ್ದರು.
ಬೆಂಗಳೂರು ಸಂಚಾರ ಪೊಲೀಸರ ವಿಶೇಷ ತಪಾಸಣೆ: 10 ಗಂಟೆಯಲ್ಲಿ 18 ಲಕ್ಷ ರೂ. ದಂಡ ಸಂಗ್ರಹ


