ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು 27ನೇ ಜೂನ್ 2025ರ (ಶುಕ್ರವಾರ) ಆಚರಿಸಲಾಗುತ್ತಿದೆ. ರಾಜ್ಯಮಟ್ಟದ ಕಾರ್ಯಕ್ರಮವನ್ನು ಡಾ. ಬಾಬು ಜಗಜೀವನ್ ರಾಂ ಭವನದಲ್ಲಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಮಟ್ಟದ ಕಾರ್ಯಕ್ರಮವನ್ನು ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಪ್ರಶಸ್ತಿ ಪ್ರಧಾನ ಸೇರಿದಂತೆ ಬೆಳಗ್ಗೆಯಿಂದ ಸಂಜೆವರೆಗೆ ವರೆಗೆ ನಾನಾ ಕಾರ್ಯಕ್ರಮಗಳು ಜರುಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ತಿಳಿಸಿದೆ. ಕಾರ್ಯಕ್ರಮಗಳ ಪಟ್ಟಿ, ಮೆರವಣಿಗೆ ಇತರ ವಿವರ ಇಲ್ಲಿದೆ.
7 ಸ್ಥಳಗಳಿಂದ ಪುರ ಜ್ಯೋತಿಗಳು
ಕೆಂಪೇಗೌಡರ ಜಯಂತಿಯ ದಿನದಂದು ಬೆಳಗ್ಗೆ 7.00 ಗಂಟೆಗೆ ನಗರದ ನಾಲ್ಕು ದಿಕ್ಕುಗಳಾದ ಲಾಲ್ ಬಾಗ್, ಮೇಕ್ರಿ ವೃತ್ತ, ಕೆಂಪಾಂಬುದಿ ಕೆರೆ ಹಾಗೂ ಹಲಸೂರು ಗಡಿ ಗೋಪುರಗಳಿಂದ ಹಾಗೂ 3 ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ, ದೇವನಹಳ್ಳಿ ತಾಲ್ಲೂಕಿನ ಆವತಿ ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಸೇರಿದಂತೆ ಒಟ್ಟು 7 ಸ್ಥಳಗಳಿಂದ ಸಚಿವರುಗಳ ನೇತೃತ್ವದಲ್ಲಿ ಪುರ ಜ್ಯೋತಿಗಳ ಮೆರವಣಿಗೆ ಹೊರಟು, ಸುಮ್ಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ (ಮಾಗಡಿ ರಸ್ತೆ) ಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ 7 ಪುರ ಜ್ಯೋತಿಗಳನ್ನು ಸ್ವೀಕರಿಸಲಾಗುತ್ತದೆ.
ಪ್ರತಿಮೆಗಳಿಗೆ ಪುಷ್ಪ ನಮನ
* ಬೆಳಗ್ಗೆ 9.00 ಗಂಟೆಗೆ ದೇವನಹಳ್ಳಿಯ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಹತ್ತಿರ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಗೆ ಪುಷ್ಪ ನಮನ.
* ಬೆಳಗ್ಗೆ 10.30ಕ್ಕೆ ಬಿಬಿಎಂಪಿ ಕೇಂದ್ರ ಕಛೇರಿಯ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮತ್ತು ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿರುವ ಮಹಾತ್ಯಾಗಿ ಲಕ್ಷ್ಮಿದೇವಿ ಪ್ರತಿಮೆಗೆ ಪುಷ್ಪ ನಮನ.
* ಬೆಳಗ್ಗೆ 11.11 ಗಂಟೆಗೆ ವಿಧಾನಸೌಧ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪ ನಮನ.
ಕೆಂಪೇಗೌಡ ಭವನ ನಿರ್ಮಾಣದ ಶಂಕುಸ್ಥಾಪನೆ
ಬೆಂಗಳೂರು ನಗರ ಸುಮ್ಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ (ಮಾಗಡಿ ರಸ್ತೆ) ಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ ಬೆಳಗ್ಗೆ 12.15 ಗಂಟೆಗೆ ಶಂಕುಸ್ಥಾಪನೆ ನೆರವೇರಲಿದೆ.
ರಾಜ್ಯ ಮಟ್ಟದ ಕಾರ್ಯಕ್ರಮಗಳು
ಸುಮ್ಮನಹಳ್ಳಿ ಬಳಿಯಿರುವ ಡಾ. ಬಾಬು ಜಗಜೀವನ್ ರಾಂ ಭವನದಲ್ಲಿ ರಾಜ್ಯಮಟ್ಟದ ವೇದಿಕೆ ಕಾರ್ಯಕ್ರಮವು ಅಪರಾಹ್ನ 12.30ಕ್ಕೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಠಾಧೀಶರುಗಳು, ಮಾನ್ಯ ಸಚಿವರುಗಳು ಹಾಗೂ ಇನ್ನಿತರೆ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ಅಂತರಾಷ್ಟ್ರೀಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಸಂಜೆ ಕೆಂಪೇಗೌಡ ಪ್ರಶಸ್ತಿ ಪ್ರದಾನ
ಬಿಬಿಎಂಪಿ ಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವು ಸಂಜೆ 4.30 ರಿಂದ 6.00 ಗಂಟೆಯವರೆಗೆ ನಡೆಯಲಿದ್ದು, ಮಾನ್ಯ ಉಪ ಮುಖ್ಯಮಂತ್ರಿಗಳು, ಸಚಿವರುಗಳು, ಶಾಸಕರುಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸಂಜೆ 6.00 ಗಂಟೆಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಹಾಗೂ ಉತ್ತಮ ಅಧಿಕಾರಿ ನೌಕಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ.
ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವದ ಅಂಗವಾಗಿ ನಾಳೆ ನಡೆಯಲಿರುವ ಕಾರ್ಯಕ್ರಮಗಳಿಗೆ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇನೆ.
ಬನ್ನಿ, ಆಡಳಿತ ಚತುರ, ಅಪ್ರತಿಮ ವೀರ, ಬೆಂಗಳೂರಿನ ನಿರ್ಮಾತೃಗೆ ಗೌರವ ಸಲ್ಲಿಸುವ ಈ ಸುಸಂದರ್ಭದಲ್ಲಿ ನಮ್ಮ ಜೊತೆಯಾಗಿ.#KempegowdaJayanti pic.twitter.com/NWqIrfGs7b
— DK Shivakumar (@DKShivakumar) June 26, 2025
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ; ಮಾಜಿ ಪ್ರಧಾನಿ HDD, ಕೇಂದ್ರ ಸಚಿವ HD, ಡಿಸಿಎಂ ಡಿಕೆಶಿ ಸೇರಿ ಗಣ್ಯರಿಂದ ಶುಭಾಶಯ


