BBMP
Loading ...

BESCOM

Greater Bengaluru News9: ಕರ್ನಾಟಕದ ವಿದ್ಯುತ್ ವಿತರಣಾ ವಲಯದಲ್ಲಿ ಈಗ ದೊಡ್ಡ ಚರ್ಚೆಯೊಂದು ಮುಂಚೂಣಿಗೆ ಬಂದಿದೆ. ಇಷ್ಟು ದಿನ ರಾಜ್ಯದ ಮನೆ-ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದ ಸರ್ಕಾರಿ ಸ್ವಾಮ್ಯದ ಎಸ್ಕಾಮ್ (ESCOM) ಮತ್ತು ಬೆಸ್ಕಾಮ್ (BESCOM) ಸಂಸ್ಥೆಗಳ ಕೆಲಸವನ್ನು ತಾನು ನಿರ್ವಹಿಸುವುದಾಗಿ ದೈತ್ಯ ಟಾಟಾ ಪವರ್ ಕಂಪನಿ ಮುಂದೆ ಬಂದಿದೆ. ರಾಜ್ಯದ ಒಟ್ಟು 15 ಪ್ರಮುಖ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆ ಮಾಡಲು ತನಗೆ ‘ಡಿಸ್ಟ್ರಿಬ್ಯೂಷನ್ ಲೈಸೆನ್ಸ್’ ನೀಡಬೇಕು ಎಂದು ಕೋರಿ ಟಾಟಾ ಪವರ್ ಸಂಸ್ಥೆಯು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ (KERC) ಅರ್ಜಿಯನ್ನು ಸಲ್ಲಿಸಿದೆ.

ವಿರೋಧದ ಜ್ವಾಲೆ ಮತ್ತು ಅನಿರ್ದಿಷ್ಟಾವಧಿ ಹೋರಾಟ
ಟಾಟಾ ಕಂಪನಿಯ ಈ ಪ್ರಸ್ತಾವನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ಕೋಲಾರ, ತುಮಕೂರು, ಶಿವಮೊಗ್ಗ, ಮೈಸೂರು ಮುಂತಾದ ಹಲವು ಜಿಲ್ಲೆಗಳಲ್ಲಿ ರೈತರು, ವಿದ್ಯುತ್ ಇಲಾಖೆಯ ನೌಕರರು ಹಾಗೂ ವಿದ್ಯುತ್ ಗುತ್ತಿಗೆದಾರರು ಒಟ್ಟಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ವಲಯದ ವಿದ್ಯುತ್ ಸರಬರಾಜನ್ನು ಖಾಸಗಿಯವರ ಕೈಗೆ ಒಪ್ಪಿಸಬಾರದು ಎನ್ನುವುದು ಪ್ರತಿಭಟನಾಕಾರರ ಮುಖ್ಯ ಬೇಡಿಕೆಯಾಗಿದೆ.

ಲಕ್ಷಾಂತರ ಉದ್ಯೋಗಿಗಳಿಗೆ ಆತಂಕ
ಪ್ರತಿಭಟನಾಕಾರರ ಪ್ರಮುಖ ಆರೋಪಗಳೆಂದರೆ, ಕರ್ನಾಟಕದಲ್ಲಿ ಸದ್ಯ ಸುಮಾರು 60 ಸಾವಿರಕ್ಕೂ ಅಧಿಕ ನೊಂದಾಯಿತ ವಿದ್ಯುತ್ ಗುತ್ತಿಗೆದಾರರು, ಸೂಪರ್‌ವೈಸರ್‌ಗಳು ಮತ್ತು ವೈರ್‌ಮ್ಯಾನ್‌ಗಳಿದ್ದಾರೆ. ಇವರ ಕೈಕೆಳಗೆ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರನ್ನು ಸೇರಿಸಿದರೆ ಈ ಸಂಖ್ಯೆ ಲಕ್ಷ ದಾಟುತ್ತದೆ. ಒಂದು ವೇಳೆ ವಿದ್ಯುತ್ ವಿತರಣೆ ಖಾಸಗಿಯವರ ಕೈ ಸೇರಿದರೆ ಈ ಲಕ್ಷಾಂತರ ಜನರ ಉದ್ಯೋಗ ಮತ್ತು ಕಾಂಟ್ರಾಕ್ಟ್‌ಗಳು ಕಂಪ್ಲೀಟ್ ಆಗಿ ಕೈತಪ್ಪಿ ಹೋಗಲಿವೆ ಎನ್ನುವ ಆತಂಕ ಎದುರಾಗಿದೆ.

ಸಾರ್ವಜನಿಕ ಹಣದ ಮೂಲಸೌಕರ್ಯ ಖಾಸಗಿಗೆ ಏಕೆ?
ಪ್ರತಿಭಟನಾಕಾರರು ಎತ್ತಿರುವ ಮತ್ತೊಂದು ಪ್ರಮುಖ ಪ್ರಶ್ನೆ ಎಂದರೆ ಮೂಲಸೌಕರ್ಯಗಳದ್ದು. ಇಷ್ಟು ವರ್ಷಗಳ ಕಾಲ ಹಳ್ಳಿ-ಹಳ್ಳಿಗಳಲ್ಲಿ ಕಂಬಗಳನ್ನು ನೆಟ್ಟು, ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ, ಇಡೀ ವಿದ್ಯುತ್ ಜಾಲವನ್ನು ನಿರ್ಮಿಸಿರುವುದು ಜನರ ತೆರಿಗೆ ಹಣ ಹಾಗೂ ಸರ್ಕಾರದ ದುಡ್ಡಿನಿಂದ. ಹೀಗೆ ಸಾರ್ವಜನಿಕರ ಹಣದಿಂದ ಸಿದ್ಧವಾಗಿರುವ ಇಂತಹ ಬೃಹತ್ ರೆಡಿಮೇಡ್ ಸಿಸ್ಟಮ್ ಅನ್ನು ಏಕಾಏಕಿ ಖಾಸಗಿ ಕಂಪನಿಯೊಂದಕ್ಕೆ ಲಾಭ ಮಾಡಿಕೊಳ್ಳಲು ಏಕೆ ಬಿಟ್ಟುಕೊಡಬೇಕು ಎಂಬ ವಾದವನ್ನು ಹೋರಾಟಗಾರರು ಮುಂದಿಡುತ್ತಿದ್ದಾರೆ.

ಸಾಲದ ಸುಳಿಯಲ್ಲಿ ಮುಳುಗಿರುವ ವಿದ್ಯುತ್ ನಿಗಮಗಳು
ಈ ಹೋರಾಟದ ಇನ್ನೊಂದು ಮುಖವನ್ನು ನೋಡುವುದಾದರೆ, ರಾಜ್ಯದ ವಿದ್ಯುತ್ ನಿಗಮಗಳು ಭೀಕರ ನಷ್ಟದಲ್ಲಿವೆ. 2022-23ರಲ್ಲಿ 17.5 ಸಾವಿರ ಕೋಟಿ ರೂಪಾಯಿ ಇದ್ದ ಎಸ್ಕಾಮ್‌ಗಳ ಒಟ್ಟು ನಷ್ಟ, 2024-25ರ ಹೊತ್ತಿಗೆ ಬರೋಬರಿ 34,980 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ನಿಗಮಗಳ ಮೇಲಿರುವ ಸಾಲ 32,000 ಕೋಟಿ ಇಂದ 47,993 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಉಚಿತ ಭರವಸೆಗಳನ್ನು ನೀಡುವುದು ಮತ್ತು ಸರ್ಕಾರದ ವಿವಿಧ ಇಲಾಖೆಗಳೇ ಸುಮಾರು 10,340 ಕೋಟಿ ರೂಪಾಯಿಗಳಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಈ ಆರ್ಥಿಕ ದಿವಾಳಿತನಕ್ಕೆ ಪ್ರಮುಖ ಕಾರಣವಾಗಿದೆ.

ಖಾಸಗೀಕರಣದ ಪರ ಇರುವ ವಾದಗಳೇನು?
ಖಾಸಗೀಕರಣವನ್ನು ಬೆಂಬಲಿಸುವವರ ಪ್ರಕಾರ, ಟಾಟಾ ಪವರ್ ಈಗಾಗಲೇ ಮುಂಬೈ, ದೆಹಲಿ ಮತ್ತು ಒಡಿಶಾಗಳಲ್ಲಿ ಯಶಸ್ವಿಯಾಗಿ ವಿದ್ಯುತ್ ವಿತರಣೆ ಮಾಡುತ್ತಿದೆ. ಖಾಸಗಿ ವಲಯದ ಪ್ರವೇಶದಿಂದ ಸೋಂಬೇರಿತನಕ್ಕೆ ಬ್ರೇಕ್ ಬಿದ್ದು, ಕೇವಲ ದಕ್ಷತೆಯುಳ್ಳ ನೌಕರರು ಮಾತ್ರ ಉಳಿಯುತ್ತಾರೆ. ಗ್ರಾಹಕರಿಗೆ 24×7 ಉತ್ತಮ ಕಸ್ಟಮರ್ ಕೇರ್ ಸೇವೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಲಾಭ ಸಿಗುತ್ತದೆ. ಅಲ್ಲದೆ, ಖಾಸಗಿ ಕಂಪನಿಗಳು ಬಂದ ತಕ್ಷಣ ಮನಸೋಇಚ್ಛೆ ದರ ಏರಿಸಲು ಸಾಧ್ಯವಿಲ್ಲ; ಏಕೆಂದರೆ ಇಲ್ಲಿಯೂ ಸರ್ಕಾರದ ನಿಯಂತ್ರಣಾ ಆಯೋಗದ (KERC) ಅಂತಿಮ ನಿಯಮಾವಳಿಗಳು ಅನ್ವಯವಾಗುತ್ತವೆ.

ಅಂತಿಮ ನಿರ್ಧಾರ ಯಾರ ಕೈಯಲ್ಲಿದೆ?
ವಿದ್ಯುತ್ ವಲಯದಲ್ಲಿ ಖಾಸಗಿಯವರಿಗೆ ಅವಕಾಶ ನೀಡುವ ಬಗ್ಗೆ ಕೇಂದ್ರ ಸರ್ಕಾರ 2020 ರಿಂದಲೇ ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಿದೆ. ಸದ್ಯಕ್ಕೆ ಕರ್ನಾಟಕ ಸರ್ಕಾರ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಡೀ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ (KERC) ವಿವೇಚನೆಗೆ ಬಿಡಲಾಗಿದ್ದು, ಅವರ ಪರಿಶೀಲನೆಯ ನಂತರವಷ್ಟೇ ರಾಜ್ಯದಲ್ಲಿ ಬೆಸ್ಕಾಮ್ ಮತ್ತು ಎಸ್ಕಾಮ್‌ಗಳ ಭವಿಷ್ಯ ಏನಾಗಲಿದೆ ಎಂಬುದು ನಿರ್ಧಾರವಾಗಲಿದೆ.

Leave a Reply

Your email address will not be published. Required fields are marked *