ಬೆಂಗಳೂರು: ತಮಿಳಿನಿಂದ ಕನ್ನಡ ಎಂಬ ನಟ ಕಮಲ್ ಹಾಸನ್ ಹೇಳಿಕೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಏನಿದು ವಿವಾದ?
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಹೆಸರಿನ ಸಿನಿಮಾದಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ ಹಾಗೂ ಅಭಿರಾಮಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಇತ್ತೀಚಗೆ ಸಿನಿಮಾದ ಆಡಿಯೋ ಲಾಂಚ್ ನೆರವೇರಿತು. ಈ ಸಮಾರಂಭಕ್ಕೆ ಅತಿಥಿಯಾಗಿ ನಟ ಶಿವರಾಜ್ಕುಮಾರ್ ಭಾಗವಹಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ಆ ಊರಿನಲ್ಲಿರುವ ನನ್ನ ಕುಟುಂಬ. ಹೀಗಾಗಿಯೇ ಅವರು ಇಲ್ಲಿಗೆ ಬಂದಿದ್ದಾರೆ. ಅದಕ್ಕಾಗಿಯೇ ನಾನು ನನ್ನ ಮಾತು ಆರಂಭಿಸುವುದಕ್ಕೂ ಮುನ್ನವೇ ಉಸಿರೇ, ತಮಿಳೇ ಅಂತ ಆರಂಭಿಸಿದ್ದೆ.. ಅದರಲ್ಲಿ ತಮಿಳಿನಿಂದ ಹುಟ್ಟಿದ್ದೇ ನಿಮ್ಮ ಭಾಷೆ..ಹಾಗಾಗಿ ನೀವು ಕೂಡ ಅದರಲ್ಲಿ ಸೇರಿಕೊಳ್ತೀರಿ ಎಂದು ಹೇಳಿದ್ದರು. ಇದೇ ಹೇಳಿಕೆ ಇದೀಗ ಕನ್ನಡಿಗರಲ್ಲಿ ಆಕ್ರೋಶ ಕಟ್ಟೆ ಹೊಡೆಯುವಂತೆ ಮಾಡಿದೆ.
ಶಿವಣ್ಣ ಹೇಳಿದ್ದೇನು?
ಖಾಸಗಿ ವಾಹಿನಿಯ ಸಮಾರಂಭವೊಂದರಲ್ಲಿ ಮಾತನಾಡಿರುವ ಶಿವಣ್ಣ, ಮೊದಲ ಬಾರಿಗೆ ಕಮಲ್ ಹಾಸನ್ ಕನ್ನಡ ವಿವಾದಕ್ಕೆ ಸ್ಪಷ್ಟನೆ ನೀಡಿದರು. ಕಮಲ್ ಹಾಸನ್ ಅವರು ಕನ್ನಡವನ್ನು ತುಂಬಾ ಪ್ರೀತಿ ಮಾಡುತ್ತಾರೆ. ನಮ್ಮ ತಂದೆಯವರ ಬಗ್ಗೆ ಅಷ್ಟೇ ಗೌರವ ಕೊಡುತ್ತಾರೆ. ನಿನ್ನೆ ಬಂದಾಗಲೂ ಅಷ್ಟೇ ಚೆನ್ನಾಗಿ ಕನ್ನಡ ಮಾತನಾಡಿದ್ದಾರೆ. ಬೆಂಗಳೂರು ಬಗ್ಗೆಯೂ ಗೌರವದಿಂದ ಮಾತನಾಡಿದ್ದಾರೆ. ನಾವು ಅವರನ್ನು ನೋಡಿ ಬೆಳೆದವರು. ನಾನು ಕೂಡ ಅವರ ಬಹುದೊಡ್ಡ ಅಭಿಮಾನಿ. ನನಗೆ ಅವರೇ ಸ್ಫೂರ್ತಿ. ನನ್ನ ನೆಚ್ಚಿನ ನಟ ಕೂಡ ಅವರೇ. ಪ್ರಸ್ತುತ ಬೆಳವಣಿಗೆ ಖಂಡಿತ ಅವರಿಗೆ ಅರ್ಥವಾಗಿರುತ್ತದೆ. ಅವರು ಏನು ಮಾಡಬೇಕು ಅದನ್ನು ಖಂಡಿತ ಮಾಡೇ ಮಾಡುತ್ತಾರೆ ಅನ್ನೋ ನಂಬಿಕೆ ನನಗಿದೆ. ನಾನೊಂದು ಸಮಾರಂಭಕ್ಕೆ ಹೋಗಿದ್ದೇ ಅಷ್ಟೇ. ನನ್ನನ್ನು ಗೌರವದಿಂದ ಕರೆದರು ಅದಕ್ಕೆ ಹೋದೆ. ಅಷ್ಟೇ ಗೌರವದಿಂದ ನಡೆಸಿಕೊಂಡರು. ಅದೇನಾಯ್ತು? ಎತ್ತಾಯ್ತು ಗೊತ್ತಿಲ್ಲ. ನಿನ್ನೆ ಬಂದಾಗ ಅವರು ಬೆಂಗಳೂರಿನಲ್ಲೇ ಇದ್ದರು. ಆಗಲೇ ಕೇಳಬಹುದಿತ್ತು. ಆದರೆ, ಏಕೆ ಕೇಳಲಿಲ್ಲ ಅನ್ನೋದು ನನಗೂ ಕೂಡ ಗೊತ್ತಿಲ್ಲ. ಕನ್ನಡ ಪ್ರೀತಿ ಅನ್ನೋದು ಯಾರೋ ಒಬ್ಬರು ಮಾತನಾಡಿದಾಗ ಬರಬಾರದು. ಸದಾ ಕನ್ನಡ ಇರಬೇಕು. ಏನೋ ಒಂದು ವಿವಾದ ಆದಾಗ ಮಾತ್ರ ಧ್ವನಿ ಎತ್ತುವುದಲ್ಲ, ಯಾವಾಗಲೂ ಕನ್ನಡವನ್ನು ಬೆಳೆಸಬೇಕು. ನಾವು ಕನ್ನಡಕ್ಕೋಸ್ಕರ ಹೋರಾಡುತ್ತೇವೆ ಮತ್ತು ಸಾಯುವುದಕ್ಕೂ ರೆಡಿ ಇದ್ದೇವೆ. ಬರೀ ಮಾತಲ್ಲಿ ಮಾತನಾಡಿ, ಮಾಧ್ಯಮದ ಮುಂದೆ ದೊಡ್ಡದಾಗಿ ಪೋಸ್ ಕೊಡುವುದು ದೊಡ್ಡ ವಿಷಯವಲ್ಲ. ಕನ್ನಡಕ್ಕೆ ನಾವೇನು ಮಾಡುತ್ತಿದ್ದೇವೆ ಅನ್ನೋದನ್ನ ನೀವೇ ಹುಡುಕಿ ನೋಡಿ, ನಿಮಗೇ ಗೊತ್ತಾಗುತ್ತದೆ. ನೀವೇನು ಮಾಡುತ್ತಿದ್ದೀರಾ ಕನ್ನಡ ಸಿನಿಮಾಗಳಿಗೆ? ಕೇವಲ ಸ್ಟಾರ್ ಸಿನಿಮಾಗಳಿಗೆ ಬೆಂಬಲ ನೀಡುವುದಲ್ಲ, ಹೊಸಬರಿಗೂ ಪ್ರೋತ್ಸಾಹ ಕೊಡಬೇಕು. ಆದರೆ, ಅದರ ಬಗ್ಗೆ ಮಾತನಾಡುವುದೇ ಇಲ್ಲ. ಕನ್ನಡ ಬೆಳೆಯುವುದು ನಮ್ಮ ಕೈಯಲ್ಲಿ. ದಯವಿಟ್ಟು ನಾನು ಹೇಳಿದ್ದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಡಿ. ನಿಮ್ಮ ಮನಸ್ಸನ್ನು ನೀವೇ ಮುಟ್ಟಿ ನೋಡಿಕೊಳ್ಳಿ, ನಾವು ಮಾಡುತ್ತಿರುವುದು ಸರಿನಾ? ತಪ್ಪಾ? ಎಂದು ನಿಮಗೆ ಗೊತ್ತಾಗುತ್ತದೆ. ನಾನೇನು ಕಮಲ್ ಹಾಸನ್ ಬಗ್ಗೆ ಮಾತನಾಡಬೇಕಿಲ್ಲ. ಖಂಡಿತ ಅವರ ಗೊತ್ತಿರುತ್ತದೆ. ಅವರೊಬ್ಬ ಹಿರಿಯರು. ಸಾಕಷ್ಟು ಕನ್ನಡ ಸಿನಿಮಾಗಳನ್ನು ಸಹ ಮಾಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಅರಿವಿದೆ. ಏನು ಮಾಡಬೇಕು ಅದನ್ನು ಮಾಡುತ್ತಾರೆ ಅನ್ನೋ ನಂಬಿಕೆ ಇದೆ ಎಂದು ಶಿವಣ್ಣ ಹೇಳಿದರು.
ಕ್ಷಮೆ ಕೇಳಲ್ಲ ಎಂದ ಕಮಲ್
ವಿವಾದದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಟ ಕಮಲ್ ಹಾಸನ್, ಪ್ರೀತಿಯಿಂದ ಮಾತನಾಡಿದ ವಿಷಯಕ್ಕೆ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಪ್ರೀತಿಯಿಂದ ಹೇಳಿದ್ದು ಮತ್ತು ಅನೇಕ ಇತಿಹಾಸಕಾರರು ನನಗೆ ಭಾಷೆ, ಇತಿಹಾಸ ಕಲಿಸಿದ್ದಾರೆ. ನಾನು ಏನನ್ನೂ ಅರ್ಥೈಸಲಿಲ್ಲ ಎಂದಿದ್ದಾರೆ. ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳಿಗೆ ಅರ್ಹತೆ ಇಲ್ಲ. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ತಮಿಳುನಾಡು ಒಂದು ವಿಶಾಲ ಹೃದಯ ರಾಜ್ಯ. ಒಬ್ಬ ಮೆನನ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ರೆಡ್ಡಿ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ತಮಿಳರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ಕನ್ನಡಿಗ ಅಯ್ಯಂಗಾರ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ನಾನು ಸಮಸ್ಯೆಗೆ ಸಿಲುಕಿದಾಗ ನನಗೆ ಬೆಂಬಲವಾಗಿ ಕನ್ನಡಿಗರು ನಿಂತಿದ್ರು. ಚೆನ್ನೈನಲ್ಲಿ ಸಮಸ್ಯೆ ಆದಾಗ ಕನ್ನಡಿಗರು ಸಪೋರ್ಟ್ ಮಾಡಿದ್ರು. ನನ್ನ ಸಿನಿಮಾಗಳನ್ನ ಅಭಿಮಾನಿಗಳು ನೋಡ್ತಾರೆ, ರಾಜಕಾರಣಿಗಳಿಗೆ ಭಾಷಾ ಜ್ಞಾನ ಇಲ್ಲ. ನನ್ನ ಪ್ರಕಾರ ನನ್ನ ಹೇಳಿಕೆ ಸರಿ ಇದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


