ಹೊಸದಿಲ್ಲಿ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಈ ವರ್ಷ ನಡೆದಿದ್ದ ನೀಟ್ (ಯುಜಿ) ಪರೀಕ್ಷೆಯ ಫಲಿತಾಂಶಗಳು ಮೆರಿಟ್ ಪಟ್ಟಿ, ಟಾಪರ್ಗಳು ಮತ್ತು ಅಂಕಗಳ ವ್ಯವಸ್ಥೆಯಲ್ಲಿ ಗುರುತಿಸಲಾದ ವಿವಿಧ ಲೋಪ ದೋಷಗಳಿಂದಾಗಿ ಗೊಂದಲದ ಗೂಡಾಗಿದೆ.
67 ಮಂದಿಗೆ ಪ್ರಥಮ ರ್ಯಾಂಕ್, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 8 ಮಂದಿಗೆ ಪ್ರಥಮ ರ್ಯಾಂಕ್, ಕೆಲವು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್, ನಿರ್ಧರಿತ ದಿನಾಂಕಕ್ಕಿಂತ ಮೊದಲು ಅಂದರೆ ಲೋಕಸಭಾ ಚುನಾವಣೆಯ ಫಲಿತಾಂಶದ ದಿನದಂದೇ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟ ಇತ್ಯಾದಿಗಳು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪೋಷಕರಲ್ಲಿ ಅನೇಕ ಅನುಮಾನಗಳನ್ನು ಹುಟ್ಟು ಹಾಕಿವೆ.
ಪರೀಕ್ಷೆ ನಡೆಸುವ ನೋಡಲ್ ಸಂಸ್ಥೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ- ಎನ್ಟಿಎ ಇದರ ಕ್ರಮದ ಬಗ್ಗೆ ಅಸಮಾಧಾನವನ್ನು ಉಂಟು ಮಾಡಿದೆ. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಕ್ರಮಗಳನ್ನು ಮರೆಮಾಚಲು ಲೋಕ ಸಭಾ ಚುನಾವಣಾ ಫಲಿತಾಂಶದ ದಿನದಂದು ಫಲಿತಾಂಶಗಳನ್ನು ಘೋಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಫಲಿತಾಂಶಗಳನ್ನು ಜೂ. 14 ರಂದು ಘೋಷಿಸ ಬೇಕಾಗಿತ್ತು. ಅದರೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇನ್ನೂ ಇತ್ಯರ್ಥ ಆಗದಿರುವಾಗ ಫಲಿತಾಂಶ ಪ್ರಕಟಿಸಿದ್ದು ಯಾಕೆ..? ಲೋಕಸಭೆ ಚುನಾವಣೆಯ ಫಲಿತಾಂಶಗಳು ನೀಟ್ ಫಲಿತಾಂಶಗಳ ಗೊಂದಲ ಹಾಗೂ ವಿವಾದಗಳನ್ನು ಮುಚ್ಚಿ ಹಾಕಬಹುದೆಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂಬುದು ನೊಂದ ಅಭ್ಯರ್ಥಿಗಳ ಆರೋಪ. ಆದರೆ ಎನ್ಟಿಎ ಅಕ್ರಮಗಳ ಆರೋಪಗಳನ್ನು ತಳ್ಳಿಹಾಕಿದೆ. ಈ ವರ್ಷ ಅಭ್ಯರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಟಾಪ್ ಸ್ಕೋರರ್ಗಳ ಸಂಖ್ಯೆ ಹೆಚ್ಚಳವಾಗಿದೆ.
2023 ರಲ್ಲಿ 20,38,596 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, 2024 ರಲ್ಲಿ ಹಾಜರಾದ ಅಭ್ಯರ್ಥಿಗಳ ಸಂಖ್ಯೆ 23,33,297. ಅಭ್ಯರ್ಥಿಗಳ ಹೆಚ್ಚಳವು ಸ್ವಾಭಾವಿಕವಾಗಿ ಪ್ರಥಮ ರ್ಯಾಂಕ್ ವಿಜೇತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅದು ತಿಳಿಸಿದೆ. ಕೆಲವು ಕೇಂದ್ರಗಳಲ್ಲಿ ಪರೀಕ್ಷಾ ಸಮಯದ ನಷ್ಟವನ್ನು ಸರಿದೂಗಿಸಲು ವಿದ್ಯಾರ್ಥಿಗಳು ರಿಟ್ ಅರ್ಜಿ ಸಲ್ಲಿಸಿದ ಕಾರಣ ಗ್ರೇಸ್ ಅಂಕಗಳನ್ನು ನೀಡಲಾಗಿದೆ ಎಂದು ಎನ್.ಟಿ.ಎ. ಸ್ಪಷ್ಟಪಡಿಸಿದೆ. ಫಲಿತಾಂಶದಲ್ಲಿ ದೋಷಗಳು ಕಂಡು ಬಂದಿರುವುದರಿಂದ ಅಭ್ಯರ್ಥಿಗಳು ಮತ್ತು ಅವರ ಪೋಷಕರು ಇದೀಗ ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ. ಅಲ್ಲದೆ ಈ ಬಾರಿ ನೀಟ್ ಪರೀಕ್ಷಾ ಅಕ್ರಮಗಳ ಕುರಿತು ಸಿಬಿಐ ಅಥವಾ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯವೂ ಕೇಳಿ ಬಂದಿದೆ.


