ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ.
ಭಾನುವಾರ ಅಥವಾ ಇನ್ಯಾವುದೇ ವಿಶೇಷ ದಿನ ಬರಲಿ ರುಚಿಕರವಾದ ಚಿಕನ್ ಖಾದ್ಯ ಮಾಡಲು ಬಯಸುತ್ತಾರೆ. ಅದರಲ್ಲೂ ಒಂದೇ ರೀತಿಯ ಚಿಕನ್ ಖಾದ್ಯ ತಿಂದು ತಿಂದು ಬೋರ್ ಆದ ಮಂದಿ ಹೊಸ ರೀತಿಯ ಚಿಕನ್ ರೆಸಿಪಿ ಟ್ರೈ ಮಾಡುತ್ತಾರೆ. ಹೈದರಾಬಾದಿ ಚಿಕನ್ ರೆಸಿಪಿ, ಆಂಬೂರ್ ಬಿರಿಯಾನಿ, ಕೊಲ್ಲಾಪುರಿ ಚಿಕನ್ ಕರಿ ಹೀಗೆ ನಾನಾ ರೀತಿಯ ಚಿಕನ್ ರೆಸಿಪಿಗಳಿವೆ. ಯೂಟ್ಯೂಬ್ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಅಡುಗೆ ಕುರಿತು ಲಭ್ಯವಿರುವ ಅನೇಕ ವಿಡಿಯೋ ಹಾಗೂ ಪೋಸ್ಟ್ಗಳನ್ನು ನೋಡಿ ಚಿಕನ್ ರೆಸಿಪಿ ಟ್ರೈ ಮಾಡಿದ ಅನೇಕ ಮಂದಿಯನ್ನು ನಾವು ನೋಡಿದ್ದೇವೆ. ನೀವು ಕೂಡ ಟ್ರೈ ಮಾಡುತ್ತೀರಿ.
ಇದೀಗ ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಅಂತಾ ನೀವು ಬಯಸಿದ್ದರೆ ಶ್ರೀಲಂಕಾ ಸ್ಟೈಲ್ ಚಿಕನ್ ಕರಿ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ. ಹೇಗೆ ಮಾಡಬೇಕು ಅನ್ನೋದನ್ನು ನಾವೀಗ ನಿಮಗೆ ತಿಳಿಸಿಕೊಡುತ್ತೇವೆ. ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಶ್ರೀಲಂಕಾ ಶೈಲಿಯ ಚಿಕನ್ ಕರಿ ರೆಸಿಪಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಹಾಗಾದರೆ, ಇನ್ನೇನು ತಡ ಶುರು ಮಾಡೋಣ ಬನ್ನಿ.
ಬೇಕಾಗುವ ಪದಾರ್ಥಗಳು
- ಕೋಳಿ ಮಾಂಸ : 1/2 ಕೆಜಿ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ : 1 ಟೀ ಸ್ಪೂನ್
- ಸಾಸಿವೆ : 1/2 ಟೀ ಸ್ಪೂನ್
- ಮೆಂತ್ಯ : 1/2 ಟೀಸ್ಪೂನ್
- ಈರುಳ್ಳಿ : 1
- ಮೆಣಸಿನಕಾಯಿ : 4
- ಕರಿಬೇವು : ಸ್ವಲ್ಪ
- ಲವಂಗ, ಏಲಕ್ಕಿ : 2 ಅಥವಾ 3
- ಟೊಮೆಟೊ : 2
- ಕೊತ್ತಂಬರಿ ಸೊಪ್ಪು : ಸ್ವಲ್ಪ
- ಚಿಲ್ಲಿ ಪೌಡರ್ : 3 ಚಮಚ
- ಅರಿಶಿನ : 1/2 ಚಮಚ
- ಮೆಣಸು ಪುಡಿ ಅಥವಾ ಪೆಪ್ಪರ್ ಪೌಡರ್ : 2 ಚಮಚ
- ಚಿಕನ್ ಮಸಾಲ ಪುಡಿ : 1 ಚಮಚ
- ಎಣ್ಣೆ : 2 ಚಮಚ
ಮಾಡುವ ವಿಧಾನ
ಮೊದಲು, ಅಗತ್ಯವಿರುವ ಪ್ರಮಾಣದ ಕೋಳಿ ಮಾಂಸವನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ, ಒಂದು ಬಟ್ಟಲಿನಲ್ಲಿ ಪ್ರತ್ಯೇಕವಾಗಿ ಇರಿಸಿ. ಬಳಿಕ ತೊಳೆದ ಕೋಳಿ ಮಾಂಸವನ್ನು ಚಿಲ್ಲಿ ಪೌಡರ್, ಅರಿಶಿನ ಪುಡಿ, ಚಿಕನ್ ಮಸಾಲಾ ಪುಡಿ, ಮೆಣಸಿನ ಪುಡಿ, ಟೊಮ್ಯಾಟೋ ಮತ್ತು ಉಪ್ಪಿನೊಂದಿಗೆ ಬೆರೆಸಿ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಲು ಬಿಡಿ.
30 ನಿಮಿಷದ ನಂತರ ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದರಲ್ಲಿ ಎಣ್ಣೆ ಸುರಿಯಿರಿ. ಅದು ಬಿಸಿಯಾದಾಗ ಸಾಸಿವೆ ಮತ್ತು ಮೆಂತ್ಯ ಸೇರಿಸಿ. ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಎರಡನ್ನೂ ಸೇರಿಸಿ. ಈರುಳ್ಳಿ ಚೆನ್ನಾಗಿ ಬೆಂದ ನಂತರ, ಕರಿಬೇವು ಮತ್ತು ಜೀರಿಗೆ ಸೇರಿಸಿ. ಸುವಾಸನೆ ಬರಲು ಪ್ರಾರಂಭಿಸುತ್ತದೆ. ಮಸಾಲೆಗಳು ಬೆಂದ ನಂತರ ಮ್ಯಾರಿನೇಟ್ ಮಾಡಿದ ಮಿಶ್ರಣವನ್ನು ಅದಕ್ಕೆ ಸೇರಿಸಿ. ಬಳಿಕ ಸ್ವಲ್ಪ ಎಣ್ಣೆ ಹಾಕಿ, ಸ್ವಲ್ಪ ಹೊತ್ತು ಚಿಕನ್ ಬೇಯಿಸಿ. ಇದಾದ ನಂತರ ಅಗತ್ಯವಿರುವಷ್ಟು ನೀರು ಸೇರಿಸಿ, ಮುಚ್ಚಿ ಬೇಯಿಸಿ.
ಚಿಕನ್ 3 ಅಥವಾ 4 ಕುದಿ ಬಂದ ನಂತರ, ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿದರೆ ನಿಮ್ಮ ಖಾರದ ಚಿಕನ್ ಕರಿ ಸಿದ್ಧ! ಸಾಧ್ಯವಾದ್ರೆ ಒಮ್ಮೆ ಟ್ರೈ ಮಾಡಿ ನೋಡಿ.


