BBMP
Loading ...

ಬೆಂಗಳೂರು: ಭ್ರಷ್ಟರ ವಿರುದ್ಧ ಸಮರ ಸಾರಿ ಪಾರದರ್ಶಕ ಆಡಳಿತಕ್ಕೆ ಮುನ್ನುಡಿಯಂತಿದ್ದ ಕರ್ನಾಟಕ ಲೋಕಾಯುಕ್ತದಲ್ಲಿ ಇತ್ತೀಚೆಗೆ ಐಪಿಎಸ್ ಅಧಿಕಾರಿ ವಿರುದ್ಧ ಲಂಚಾವತಾರದ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾಗಿರುವ ಸಂಸ್ಥೆಯು ಈ ಸಂಬಂಧ ಈವರೆಗೆ ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ತಿಳಿಸಿದೆ.

ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿದ್ದ ಮಾಜಿ ಹೆಡ್ ಕಾನ್​ಸ್ಟೇಬಲ್ ನಿಂಗಪ್ಪ ಅವರನ್ನು ಬಂಧಿಸಲಾಗಿತ್ತು. ಭ್ರಷ್ಟಾಚಾರದಲ್ಲಿ ಲೋಕಾಯುಕ್ತ ನಗರ ವಿಭಾಗದ ಎಸ್ಪಿ-1 ಆಗಿದ್ದ ಶ್ರೀನಾಥ್ ಮಹದೇವ್ ಜೋಷಿ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಲೋಕಾ ಕಾರ್ಯವೈಖರಿ ಬಗ್ಗೆ ಅಪಸ್ಪರ ಕೇಳಿಬಂದಿತ್ತು.

ಈ ನಿಟ್ಟಿಯಲ್ಲಿ ಎಸಿಬಿ ರದ್ದುಗೊಂಡು ಲೋಕಾಯುಕ್ತ ಮರುರಚನೆಯಾದಾಗಿನಿಂದ ಈವರೆಗೆ ಕೈಗೊಂಡ ದಾಳಿ, ಟ್ರ್ಯಾಪ್, ದೂರುಗಳ ವಿಲೇವಾರಿ, ಅಧಿಕಾರಿ-ಸಿಬ್ಬಂದಿ ಕೊರತೆ ಕುರಿತು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಳು, ಲೋಕಾಯುಕ್ತ ಹೆಸರು ಬಳಸಿ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ದಾಖಲಿಸಿಕೊಂಡ ಪ್ರಕರಣಗಳು ಸೇರಿದಂತೆ ಕೈಗೊಂಡ ರಚನಾತ್ಮಕ ಕ್ರಮಗಳ ಬಗ್ಗೆ 14 ಪುಟಗಳಲ್ಲಿ ಸವಿಸ್ತಾರವಾಗಿ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದೆ.

4.92 ಕೋಟಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಸರ್ಕಾರಿ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಕರೆ ಮಾಡಿ ‘ನನಗೆ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಪರಿಚಯ ಸೋಗಿನಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಹಣ ಸುಲಿಗೆ ಮಾಡುತ್ತಿದ್ದ. ಎಸ್ಪಿಯಾಗಿದ್ದ ಜೋಷಿ ಶ್ರೀನಾಥ ಮಹದೇವ, ಐಪಿಎಸ್ ನಿಕಟ ಸಂಪರ್ಕ ಇಟ್ಟುಕೊಂಡು, ಸರ್ಕಾರಿ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಬೆದರಿಸಿ, ಅವರಿಂದ ಲಂಚದ ಹಣವನ್ನು ಕೋಡ್ ವರ್ಡ್ ‘ಕೆ.ಜಿ’ ಮುಖಾಂತರ ವಸೂಲಿಗಿಳಿದ್ದರು. ಅಕ್ರಮವಾಗಿ ಗಳಿಸಿದ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಲು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದು, ನಿಂಗಪ್ಪನ ಮೊಬೈಲ್ ಪರಿಶೀಲನೆಯಲ್ಲಿ, ಸುಮಾರು 24 ಕ್ರಿಪ್ಟೋ ವ್ಯಾಲೆಟ್‍ಗಳಿದ್ದವು. ಈ ಪೈಕಿ 13 ವ್ಯಾಲೆಟ್‍ಗಳಲ್ಲಿ ಸುಮಾರು 4.92 ಕೋಟಿ ರೂ. ಹಣ ಹೂಡಿಕೆ ಮಾಡಿರುವುದು ತಿಳಿದುಬಂದಿದೆ ಎಂದು ಲೋಕಾಯುಕ್ತ ನಿಬಂಧಕರು ತಿಳಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ 2022ರಿಂದ ಜೂನ್ 30ರ ವರೆಗೆ 41 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಸಾವಿನ ಪ್ರಕರಣ, ಜಲಮೂಲ ರಕ್ಷಣೆ ಹಾಗೂ ಪುನಶ್ಚೇತನ ಸೇರಿದಂತೆ 150ಕ್ಕೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸರ್ಕಾರಿ ಕಚೇರಿಗಳಿಂದ ದುರಾಡಳಿತಕ್ಕೆ ಸಂಬಂಧಿಸಿದಂತೆ 500ಕ್ಕೂ ಹೆಚ್ಚು ಶೋಧನಾ ವಾರೆಂಟ್ ಗಳನ್ನ ನೀಡಿ ಅಗತ್ಯ ದಾಖಲಾತಿಗಳನ್ನು ವಶಕ್ಕೆ ಪಡೆದು ಕೇಸ್ ಮಾಡಲಾಗಿದೆ ಎಂದು ಲೋಕಾಯುಕ್ತ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಥೆಗೆ ಒಟ್ಟು 1929 ಅಧಿಕಾರಿಗಳು ಹಾಗೂ ಸಿಬ್ಬಂದಿ ಹುದ್ದೆಗಳು ಮಂಜೂರಾಗಿದ್ದರೂ ಪೂರ್ತಿಯಾಗಿ ತುಂಬಲು ಸಾಧ್ಯವಾಗಿಲ್ಲ. ಗ್ರೂಪ್ -ಸಿ ವೃಂದದ ಪ್ರಥಮ, ದ್ವೀತಿಯ ದರ್ಜೆ ಸಹಾಯಕರು, ಕ್ಲರ್ಕ್ -ಟೈಪಿಸ್ಟ್ ಗಳು ಸೇರಿದಂತೆ ಒಟ್ಟು 66 ಹುದ್ದೆಗಳಿಗೆ ನೇರ ನೇಮಕಾತಿ, ಖಾಲಿಯಿರುವ 8 ಜಿಲ್ಲೆಗಳಲ್ಲಿ ಎಸ್ಪಿಗಳನ್ನು ತುಂಬುವಂತೆ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸದಾಗಿ 339 ಹುದ್ದೆಗಳನ್ನು ಸೃಜಿಸಲು ಕಳೆದ ವರ್ಷ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಪರಿಶೀಲನಾ ಹಂತದಲ್ಲಿದೆ.

ಪ್ರತ್ಯೇಕ ಆಂತರಿಕ ನಿಗಾ ಘಟಕ ಪ್ರಸ್ತಾವನೆ ತಿರಸ್ಕೃತ: ಲೋಕಾಯುಕ್ತದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಆಂತರಿಕ ನಿಗಾ ಘಟಕ ಸ್ಥಾಪಿಸಲು 24 ಅಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಸೃಷ್ಟಿಸುವಂತೆ ಎರಡು ಬಾರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸರ್ಕಾರವು ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಎಸಿಬಿ ರದ್ದುಗೊಂಡ ಬಳಿಕ ಲೋಕಾಯುಕ್ತಕ್ಕೆ ವರ್ಗಾವಣೆಯಾದ 2159 ಪ್ರಕರಣಗಳ ಜೊತೆ 2022 ಸೆ.22ರಿಂದ ಈವರೆಗೂ ಕರ್ನಾಟಕದಲ್ಲಿ 205 ದಾಳಿ ಪ್ರಕರಣಗಳು, 645 ಟ್ರ್ಯಾಪ್ ಪ್ರಕರಣಗಳು ಹಾಗೂ 77 ಇತರೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.ಹಣಕ್ಕೆ ಬೇಡಿಕೆಯಿಟ್ಟರೆ ಈ ಸಂಖ್ಯೆಗೆ ಕರೆ ಮಾಡಿ : ಸಾರ್ವಜನಿಕ ನೌಕರರುಗಳ ವಿರುದ್ಧ ದಾಖಲಾಗಿ ತನಿಖೆಯ ಹಂತದಲ್ಲಿದ್ದ ಪ್ರಕರಣಗಳ ಸಂಬಂಧ, ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಇನ್ನಿತರೆ ಸಾರ್ವಜನಿಕ ನೌಕರರು, ಈ ಸಂಸ್ಥೆಯಲ್ಲಿ ಪ್ರಕರಣ ದಾಖಲಾದ ಸಾರ್ವಜನಿಕ ನೌಕರರನ್ನು ಅಥವಾ ಇತರೆ ಸಾರ್ವಜನಿಕ ನೌಕರರನ್ನು ದೂರವಾಣಿ / ಮೊಬೈಲ್ ಮೂಲಕ ಸಂಪರ್ಕಿಸಿ, ಪ್ರಕರಣಗಳ ಇತ್ಯರ್ಥಕ್ಕಾಗಿ ಹಣಕ್ಕಾಗಿ ಪೀಡಿಸುವುದು ಅಥವಾ ಅಮಿಷವೊಡ್ಡುವುದು, ಸಾರ್ವಜನಿಕ ನೌಕರರು ಯಾವುದೇ ಅಮಿಷಕ್ಕೆ ಒಳಗಾಗದೇ, ಕರೆ ಮಾಡಿದಂತಹ ವ್ಯಕ್ತಿಗಳ ಹೆಸರು ಮತ್ತು ಮೊಬೈಲ್ ನಂಬರುಗಳನ್ನು ಕೂಡಲೇ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಚೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ಕಚೇರಿಯ ದೂರವಾಣಿ ಸಂಖ್ಯೆ 080 – 22011205 – kla-citysp-ka@nic.in, 080 – 22011273 – kla.citysp2-ka@nic.in ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *