ಬೆಂಗಳೂರು/ದೆಹಲಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಇಲ್ಲ, ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಸಿಎಂ ಬದಲಾವಣೆ ಊಹಾಪೋಹಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರೀಯ ಮಾಧ್ಯಮದ ಸಂದರ್ಶನದಲ್ಲಿ ರಾಜ್ಯ ರಾಜಕಾರಣದ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
ಸೆಪ್ಟೆಂಬರ್ ತಿಂಗಳದಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಉಂಟಾಗಲಿದೆ. ಈ ಬಾರಿ ದಸರಾವನ್ನು ಬೇರೆ ಮುಖ್ಯಮಂತ್ರಿ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗುವುದು ಖಚಿತ ಎಂದು ವಿಪಕ್ಷಗಳ ನಾಯಕರು ಸಾಲು ಸಾಲಾಗಿ ಹೇಳಿಕೆ ನೀಡಿದ್ದನ್ನು ನೀವು ಕೇಳೇ ಇರುತ್ತೀರಿ. ಹೀಗಾಗಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ಕಾಂಗ್ರೆಸ್ನ ಅನೇಕ ನಾಯಕರುಗಳು ಕೂಡ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಧ್ವನಿ ಎತ್ತಿರುವುದು ಚರ್ಚೆಗೆ ತುಪ್ಪ ಸುರಿದಂತಾಗಿದೆ.
ಇದರ ನಡುವೆ ಸಿಎಂ ಮತ್ತು ಡಿಸಿಎಂ ಇಬ್ಬರು ದೆಹಲಿಗೆ ಹೈಕಮಾಂಡ್ ಭೇಟಿಗೆ ಹೋಗಿರುವುದು ಸಿಎಂ ಬದಲಾವಣೆ ವದಂತಿಗೆ ಇನ್ನಷ್ಟು ರೆಕ್ಕೆಪುಕ್ಕಗಳು ಸೇರಿಕೊಂಡವು. ಆದರೆ, ಆ ವದಂತಿಗಳನ್ನೆಲ್ಲ ಸಿಎಂ ಸಿದ್ದರಾಮಯ್ಯ ಅವರು ಇಂದು ಅಲ್ಲಗೆಳೆದಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ಇಂದು ಇಂಡಿಯಾ ಟುಡೆ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಡಿಕೆಶಿ ಹೇಳೇ ಇಲ್ಲ
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಅಂತ ಸ್ವತಃ ಡಿಸಿಎಂ ಡಿಕೆಶಿ ಕೂಡ ಹೇಳಿಕೆ ನೀಡಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಹುದ್ದೆ ಬದಲಾವಣೆ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಸಿಎಂ ಆಗಲಿ ಎಂದು ಹೇಳುತ್ತಿರುವ ನಾಯಕರದ್ದು ಅವರ ಸ್ವಂತ ಅಭಿಪ್ರಾಯವಾಗಿದೆ. ನಾನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆಂದು ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ಜುಲೈ 2 ರಂದು ನಾನು ಈ ಹೇಳಿಕೆಯನ್ನು ನೀಡಿದ್ದೇನೆ. ಆ ದಿನ ಡಿಕೆ ಶಿವಕುಮಾರ್ ಕೂಡ ಅಲ್ಲಿದ್ದರು. ಅವರು ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ಅದರಲ್ಲಿ ಯಾವುದೇ ತಪ್ಪಿಲ್ಲ. ಡಿಕೆ ಶಿವಕುಮಾರ್ ಅವರೇ ಕುರ್ಚಿ ಅಭಿ ಖಾಲಿ ನಹಿ ಹೈ (ಸದ್ಯಕ್ಕೆ ಕುರ್ಚಿ ಖಾಲಿ ಇಲ್ಲ) ಎಂದು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಹೈಕಮಾಂಡ್ ಹೇಳಿದ್ದನು ಪಾಲಿಸುತ್ತೇವೆ
ಹೈಕಮಾಂಡ್ ಒಳಗೆ ಅಧಿಕಾರ ಹಂಚಿಕೆ ನಡೆದಿದೆ ಎಂಬುದನ್ನು ತಿರಸ್ಕರಿಸಿದ ಸಿದ್ದರಾಮಯ್ಯ, ಎರಡೂವರೆ ವರ್ಷ ಅಂತ ಎಂದಿಗೂ ನಿರ್ಧರಿಸಿಲ್ಲ. ಅದು ಸರಿಯೂ ಅಲ್ಲ. ಹೈಕಮಾಂಡ್ ನಮಗೆ ಹೇಳಿದ್ದು ಏನೆಂದರೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ, ನಾವು ಅದನ್ನು ಅನುಸರಿಸಬೇಕು. ನಮ್ಮದು ಹೈಕಮಾಂಡ್ ಪಕ್ಷ ಎಂದು ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಹೇಳಿದ್ದಾರೆ. ಅವರು ಏನು ಹೇಳಿದರೂ, ನಾವು ಅನುಸರಿಸಬೇಕು. ಅದನ್ನು ನಾವು ಪಾಲಿಸುತ್ತೇವೆ ಮತ್ತು ಡಿಕೆ ಶಿವಕುಮಾರ್ ಕೂಡ ಅದನ್ನು ಪಾಲನೆ ಮಾಡುತ್ತಾರೆ ಎಂದು ಹೇಳಿದರು.
ರಣದೀಪ್ ಸುರ್ಜೇವಾಲಾ ಅವರಂತಹ ಕಾಂಗ್ರೆಸ್ ನಾಯಕರು ಕೂಡ ರಾಜ್ಯದಲ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ತಳ್ಳಿಹಾಕಿದರು. ನಾಯಕತ್ವದ ವಿಷಯದಲ್ಲಿ, ಸುರ್ಜೇವಾಲಾ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ ಎಂದು ಹೇಳಿದರು. ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸುವ ಕೆಲವು ಶಾಸಕರು ಯಾವಾಗಲೂ ಇದ್ದೇ ಇರುತ್ತಾರೆ, ಆದರೆ ಅವರಿಗೆ ಹೆಚ್ಚಿನ ಬೆಂಬಲ ಇಲ್ಲ ಎಂದು ಹೇಳಿದರು.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಏರ್ ಶೋಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್


