ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಸುದ್ದಿ ಭಾರಿ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ರೇಣುಕಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಸ್ಥಳಾಂತರವಾಗಿರುವ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ತಾಜಾ ಸಂಗತಿ ಏನೆಂದರೆ, ದರ್ಶನ್ ನೋಡಲು ಮಹಿಳಾ ಅಭಿಮಾನಿಯೊಬ್ಬ ಬಳ್ಳಾರಿ ಜೈಲಿನ ಮುಂಭಾಗ ಹೈಡ್ರಾಮಾ ಮಾಡಿದ್ದಾರೆ.
ದರ್ಶನ್ ನೋಡುವುದಕ್ಕಾಗಿ ಬೆಂಗಳೂರಿನಿಂದ ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಲಕ್ಷ್ಮೀ ಎಂಬ ಮಹಿಳಾ ಅಭಿಮಾನಿ ಆಗಮಿಸಿದ್ದು, ತನ್ನ ನೆಚ್ಚಿನ ನಟನನ್ನು ನೋಡಲು ಒಳಗೆ ಬಿಡಿ ಎಂದು ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದಾರೆ. ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದರೆ, ನಾನು ದರ್ಶನ್ ಅವರನ್ನು ಮದುವೆ ಆಗೋದಕ್ಕೂ ರೆಡಿಯಾಗಿ ಬಂದಿರುವೆ ಎನ್ನುವ ಮೂಲಕ ಅಭಿಮಾನಿ ಲಕ್ಷ್ಮೀ ಜೈಲಿನ ಮುಂದೆ ಹೈಡ್ರಾಮ ಮಾಡಿದ್ದಾರೆ.
ವಿಜಯಲಕ್ಷ್ಮೀ ರೀತಿ ನಾನೂ ದರ್ಶನ್ ಅವರನ್ನು ಮದುವೆ ಆಗುತ್ತೇನೆ. ನನಗೆ ದರ್ಶನ್ ಅವರೆಂದರೆ ಇಷ್ಟ. ಅವರನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಹೋದೆ ಆದರೆ, ಅಲ್ಲಿ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ ಹಣ್ಣು ಕೊಟ್ಟು, ನೋಡಿಕೊಂಡು ಹೊಗುವೆ ಎಂದು ಲಕ್ಷ್ಮೀ ಪಟ್ಟು ಹಿಡಿದಿದ್ದರು. ಕೊನೆಗೂ ಆಕೆಯ ಮನವೊಲಿಸಿದ ಜೈಲು ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರುವಾಗ ರೌಡಿ ವಿಲ್ಸನ್ ನಾಗನ ಜತೆ ಕುಳಿತು, ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೋ ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಭಾರಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ದರ್ಶನ್ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದು, ನ್ಯಾಯಾಲಯಕ್ಕೆ ನಿನ್ನೆ (ಸೆ.04) ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್ಶೀಟ್ಅನ್ನು 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಾರುತೇಶ್ ಪರಸುರಾಮ್ ಮೋಹಿತ್ ಅವರಿಗೆ ಪೊಲೀಸರು ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದೆ. 17 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. 7 ಸಂಪುಟಗಳ, 10 ಕಡತ ಇದೆ. 3991 ಪುಟ ಇದೆ. ಕೊಲೆ ಪ್ರಕರಣದಲ್ಲಿ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 3 ಸಾಕ್ಷಿದಾರರು ಇದ್ದಾರೆ. ವೈದ್ಯರು, ಆರ್ಟಿಒ ಅಧಿಕಾರಿಗಳು, 56 ಪೊಲೀಸ್ ಸಿಬ್ಬಂದಿ ಸಾಕ್ಷಿದಾರರಾಗಿದ್ದಾರೆ.
ಚಾರ್ಜ್ಶೀಟ್ನಲ್ಲಿ ಒಟ್ಟಾರೆ 731 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ. 27 ಜನ ಸಾಕ್ಷಿ, ನ್ಯಾಯಾಧೀಶರ ಮುಂದೆ 164, ಪ್ರತ್ಯೇಕ್ಷ ಸಾಕ್ಷಿದಾರರು 03, ಐ ವಿಟ್ನೆಸ್ 03, ಸಿಎಫ್ಎಸ್ಎಲ್ 08, 59 ಮಂದಿ ಪಂಚರ ಸಾಕ್ಷಿ, ಪೊಲೀಸರು 56, ಸರ್ಕಾರಿ ಅಧಿಕಾರಿಗಳು 8, ಎಫ್ಎಸ್ಎಲ್, ಸಿಎಫ್ಎಸ್ಎಲ್ 08, ಪ್ರತ್ಯಕ್ಷ ಸಾಕ್ಷಿಗಳು 03, ಪೊಲೀಸರ ಎದುರು ಸಿಆರ್ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ವ್ಯಕ್ತಿಗಳು 97, ನ್ಯಾಯಾಧೀಶರ ಮುಂದೆ ಸೆಕ್ಷನ್ 164ರ ಅಡಿ ಹೇಳಿಕೆಯನ್ನು 27 ಮಂದಿ ದಾಖಲಿಸಿದ್ದಾರೆ ಎಂದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರೇ ಗಮನಿಸಿ : ಇನ್ಮುಂದೆ ಈ ನಿಯಮಗಳ ಪಾಲನೆ ಕಡ್ಡಾಯ!


