Greater Bengaluru News9 : 01 ಏಪ್ರಿಲ್ 2019 ಕ್ಕಿಂತ ಹಿಂದೆ ರಿಜಿಸ್ಟ್ರೇಷನ್ ಆಗಿರುವ ಎಲ್ಲಾ ವಾಹನಗಳಿಗೂ ವಾಹನ ಮಾಲೀಕರು ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ (ಹೆಚ್ಎಸ್ಆರ್ಪಿ HSRP) ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಆ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗೆ ಬ್ರೇಕ್ ಹಾಕಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ವದಂತಿಗೆ ತೆರೆ ಎಳೆದ ರಾಜ್ಯ ಸಾರಿಗೆ ಇಲಾಖೆ
ಹಳೆಯ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಲ್ಲ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗಿತ್ತು. ಇದೀಗ ಅದೆಲ್ಲದಕ್ಕೂ ರಾಜ್ಯ ಸಾರಿಗೆ ಇಲಾಖೆ ತೆರೆ ಎಳೆದಿದೆ.
ಸಾರಿಗೆ ಇಲಾಖೆಯ ಪ್ರಕಾರ 01 ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದೆ. ರಾಜ್ಯದ ಎಲ್ಲಾ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳಿಗೆ ತಕ್ಷಣವೇ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
ಪ್ರಕಟಣೆಯಲ್ಲಿ ಏನಿದೆ?
ಕೇಂದ್ರ ಸರ್ಕಾರವು 1989ರ ಕೇಂದ್ರ ಮೋಟಾರು ವಾಹನ ನಿಯಮಗಳ 50ನೇ ವಿಧಿಯ ಅನ್ವಯ, 01 ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್ಪಿ ಅಳವಡಿಕೆ ಕಡ್ಡಾಯ ಮಾಡಿದೆ. ಈ ನಿಯಮವು 2018ರಲ್ಲಿ ಜಾರಿಗೊಂಡಿದ್ದು, ರಾಜ್ಯದಲ್ಲಿಯೂ ಈ ನಿಯಮ ಅನ್ವಯವಾಗುತ್ತಿದೆ. ರಾಜ್ಯ ಸಾರಿಗೆ ಇಲಾಖೆ 2023ರಲ್ಲಿ ಹೊರಡಿಸಿದ ಅಧಿಸೂಚನೆ ಪ್ರಕಾರ, 2019ರ ಏಪ್ರಿಲ್ 1ರ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಾಲಯವು ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಅವಕಾಶ ನೀಡಿದ್ದು, ಹೆಚ್ಎಸ್ಆರ್ಪಿ ಅಳವಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಧಾರವನ್ನು ಅನುಸರಿಸುವಂತೆ ಸೂಚಿಸಿತ್ತು. ಇದೇ ಸಂದರ್ಭದಲ್ಲಿ, ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳಿಗೆ ಹೆಚ್ಎಸ್ಆರ್ಪಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.


