Greater Bengaluru News9: ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ಸೂರಿನ ಕನಸು ಕಂಡು, ಅದನ್ನ ನನಸಾಗಿಸುವುದು ಒಂದು ದೊಡ್ಡ ಸಾಧನೆಯೇ ಸರಿ! ಆದ್ರೆ ಪ್ರಸ್ತುತ ಆಸ್ತಿ ಖರೀದಿಸಿದ ನಂತರವೂ ಅನೇಕರಿಗೆ ಕಾನೂನಾತ್ಮಕ ಸವಾಲುಗಳು ಎದುರಾಗುತ್ತವೆ. ಅದರಲ್ಲಿ ಪ್ರಮುಖವಾದುದು ಖಾತಾ ವಿವಾದ. ಹಾಗಾಗಿ, ಸರ್ಕಾರ ಬಿ-ಖಾತೆಯನ್ನು ಕಾನೂನುಬದ್ಧ ಎ-ಖಾತೆಯಾಗಿ ಪರಿವರ್ತಿಸಲು ವಿಶೇಷ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದ್ದು, ಇದು ಬೆಂಗಳೂರಿನ ಲಕ್ಷಾಂತರ ಆಸ್ತಿ ಮಾಲೀಕರಿಗೆ ಒಂದು ಸುವರ್ಣಾವಕಾಶವಾಗಿದೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ:
ಹೌದು, ಇಂದು ಲಕ್ಷಾಂತರ ಆಸ್ತಿ ಮಾಲೀಕರು ಬಿ-ಖಾತೆ (b khata) ಹೊಂದಿದ್ದು, ಇದು ತಮ್ಮ ಆಸ್ತಿಯ ಮೇಲಿನ ಸಂಪೂರ್ಣ ಹಕ್ಕನ್ನು ನೀಡದೆ ಕೇವಲ ತೆರಿಗೆ ಪಾವತಿಸುವ ದಾಖಲೆಯಾಗಿ ಉಳಿದಿದೆ. ಇದರಿಂದಾಗಿ ಅದೆಷ್ಟೋ ಜನರು ತಮ್ಮ ಸ್ವಂತ ಆಸ್ತಿಯ ಮೇಲೆ ಸಾಲ ಪಡೆಯಲು, ಮನೆ ಕಟ್ಟಲು ನಕ್ಷೆ ಅನುಮೋದನೆ ಪಡೆಯಲು ಅಥವಾ ಸುಲಭವಾಗಿ ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ, ದಶಕಗಳ ಈ ಸಮಸ್ಯೆಗೆ ತೆರೆ ಎಳೆಯಲು ಕರ್ನಾಟಕ ಸರ್ಕಾರ (Government of Karnataka) ಇದೀಗ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದು, ನಿಗದಿತ ಶುಲ್ಕ ಪಾವತಿಯೊಂದಿಗೆ, ಬಿ-ಖಾತೆಯನ್ನು ಕಾನೂನುಬದ್ಧ ಎ-ಖಾತೆಯಾಗಿ (a khata) ಪರಿವರ್ತಿಸಲು ವಿಶೇಷ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ. ಹಾಗಾಗಿ, ಇದು ಬೆಂಗಳೂರಿನ ಲಕ್ಷಾಂತರ ಆಸ್ತಿ ಮಾಲೀಕರಿಗೆ ಒಂದು ಸುವರ್ಣಾವಕಾಶವಾಗಿದೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ:
ಏನಿದು ಎ-ಖಾತೆ ಮತ್ತು ಬಿ-ಖಾತೆ?
ಮೊದಲಿಗೆ, ಈ ಎರಡು ಖಾತೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ:
ಎ-ಖಾತೆ ಅಂದ್ರೇನು..?
ಇದು ಯಾವುದೇ ಒಂದು ಆಸ್ತಿಯ ಕಾನೂನುಬದ್ಧತೆಯನ್ನು ದೃಢೀಕರಿಸುವ ಪರಿಪೂರ್ಣ ದಾಖಲೆಯಾಗಿದ್ದು, ಒಂದು ಆಸ್ತಿಯು ಸರ್ಕಾರದ ಎಲ್ಲಾ ನಿಯಮಗಳನ್ನು, ಭೂ ಪರಿವರ್ತನೆ (ಡಿಸಿ ಕನ್ವರ್ಷನ್), ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ (ಉದಾಹರಣೆಗೆ ಬಿಡಿಎ ಅಥವಾ ಬಿಎಂಆರ್‌ಡಿಎ) ಮತ್ತು ಸ್ಥಳೀಯ ಸಂಸ್ಥೆಯ (ಬಿಬಿಎಂಪಿ) ನಕ್ಷೆ ಅನುಮೋದನೆಯನ್ನು ಪಡೆದಿದ್ದರೆ, ಅಂತಹ ಆಸ್ತಿಗೆ ಎ-ಖಾತೆ ನೀಡಲಾಗುತ್ತದೆ. ಅದ್ರಂತೆ, ಎ-ಖಾತೆ ಹೊಂದಿರುವವರು ಆಸ್ತಿಯ ನಿಜವಾದ ಮಾಲೀಕರಾಗಿದ್ದು, ಅವರು ಆಸ್ತಿಯನ್ನು ಮಾರಾಟ ಮಾಡಲು, ಉಡುಗೊರೆ ನೀಡಲು, ಸಾಲ ಪಡೆಯಲು ಅಥಾವ ಇನ್ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡಲು ಸಂಪೂರ್ಣ ಅರ್ಹತೆ ಹೊಂದಿರುತ್ತಾರೆ.
ಬಿ-ಖಾತೆ ಎಂದ್ರೇನು..?
ಇದು ಕಾನೂನುಬದ್ಧ ಖಾತೆಯಲ್ಲ. 2007 ರಲ್ಲಿ ಬಿಬಿಎಂಪಿ ವ್ಯಾಪ್ತಿ ವಿಸ್ತರಣೆಯಾದಾಗ, ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ, ಸರಿಯಾದ ಅನುಮೋದನೆ ಇಲ್ಲದ ಬಡಾವಣೆಗಳು ಮತ್ತು ಕಂದಾಯ ನಿವೇಶನಗಳು ನಗರ ಪಾಲಿಕೆ ವ್ಯಾಪ್ತಿಗೆ ಬಂದವು. ಈ ಆಸ್ತಿಗಳಿಂದ ತೆರಿಗೆ ಸಂಗ್ರಹಿಸುವ ಉದ್ದೇಶದಿಂದ, ಪಾಲಿಕೆಯು ಅಂತಹ ಆಸ್ತಿಗಳನ್ನು ಒಂದು ಪ್ರತ್ಯೇಕ ರಿಜಿಸ್ಟರ್‌ನಲ್ಲಿ (ರಿಜಿಸ್ಟರ್ ‘ಬಿ’) ನೋಂದಾಯಿಸಲು ಪ್ರಾರಂಭಿಸಿತು. ತದನಂತ್ರ ಇದೇ ಬಿ-ಖಾತೆ ಎಂದಾಯಿತು. ಅದ್ರಂತೆ, ಇದು ಕೇವಲ ತೆರಿಗೆ ಪಾವತಿ ಉದ್ದೇಶಕ್ಕಾಗಿ ಇರುವ ದಾಖಲೆಯೇ ಹೊರತು, ಆಸ್ತಿಯ ಮಾಲೀಕತ್ವದ ಹಕ್ಕನ್ನು ನೀಡುವುದಿಲ್ಲ.
ಹಾಗಾದ್ರೆ ಬಿ-ಖಾತೆಯಿಂದಾಗುವ ಪ್ರಮುಖ ಸಮಸ್ಯೆಗಳೇನು ಎಂದು ನೋಡುವುದಾದರೆ…
ಬಿ-ಖಾತೆ ಹೊಂದಿರುವುದು ಆಸ್ತಿ ಮಾಲೀಕರಿಗೆ ನಿರಂತರ ತಲೆನೋವಾಗಿರುತ್ತದೆ. ಅದ್ರಂತೆ, ಮೊದಲನೆಯದಾಗಿ, ಯಾವುದೇ ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳು ಬಿ-ಖಾತೆ ಆಸ್ತಿಯ ಮೇಲೆ ಗೃಹ ಸಾಲ (ಹೋಮ್ ಲೋನ್) ಅಥವಾ ಆಸ್ತಿ ಅಡಮಾನ ಸಾಲವನ್ನು ನೀಡುವುದಿಲ್ಲ. ಏಕೆಂದರೆ ಬ್ಯಾಂಕುಗಳ ದೃಷ್ಟಿಯಲ್ಲಿ ಇದು ಕಾನೂನಾತ್ಮಕವಾಗಿ ಸ್ಪಷ್ಟವಾದ ಶೀರ್ಷಿಕೆಯನ್ನು (ಕ್ಲಿಯರ್ ಟೈಟಲ್) ಹೊಂದಿರುವುದಿಲ್ಲ. ಎರಡನೆಯದಾಗಿ, ಬಿ-ಖಾತೆ ನಿವೇಶನದಲ್ಲಿ ಮನೆ ಕಟ್ಟಲು ಬಯಸಿದರೆ, ಬಿಬಿಎಂಪಿಯಿಂದ ಕಟ್ಟಡದ ನಕ್ಷೆ ಅನುಮೋದನೆ (ಪ್ಲಾನ್ ಸ್ಯಾಂಕ್ಷನ್) ಪಡೆಯುವುದು ಅಸಾಧ್ಯ. ಇದರಿಂದಾಗಿ ಅನೇಕರು ಅನುಮೋದನೆ ಇಲ್ಲದೆ ಮನೆ ಕಟ್ಟಿ, ನಂತರ ಕಾನೂನು ತೊಂದರೆಗೆ ಸಿಲುಕುತ್ತಾರೆ. ಮೂರನೆಯದಾಗಿ, ಆಸ್ತಿಯನ್ನು ಮರುಮಾರಾಟ ಮಾಡುವಾಗ, ಎ-ಖಾತೆ ಆಸ್ತಿಗಳಿಗೆ ಹೋಲಿಸಿದರೆ ಬಿ-ಖಾತೆ ಆಸ್ತಿಗಳಿಗೆ ಬಹಳ ಕಡಿಮೆ ಮಾರುಕಟ್ಟೆ ಮೌಲ್ಯ ಸಿಗುತ್ತದೆ ಮತ್ತು ಖರೀದಿದಾರರು ಸಹ ಇಂತಹ ಆಸ್ತಿಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಾರೆ.
ಹಾಗಾಗಿ, ಸರ್ಕಾರದ ಒಂದು ಹೊಸ ಹೆಜ್ಜೆ….
ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು, ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರವು, ಇದೀಗ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಲು ಒಂದು ಸರಳೀಕೃತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ವಿಶೇಷ ಆನ್‌ಲೈನ್ ಪೋರ್ಟಲ್ ಒಂದನ್ನು ಸಿದ್ಧಪಡಿಸಲಾಗಿದ್ದು, ನವೆಂಬರ್ ಒಂದರಿಂದ ಸುಮಾರು 100 ದಿನಗಳ ಕಾಲ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದ್ರಂತೆ, ಈ ಅಭಿಯಾನದ ಉದ್ದೇಶ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ನಾಗರಿಕರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ತಮ್ಮ ಆಸ್ತಿಯನ್ನು ಕಾನೂನುಬದ್ಧಗೊಳಿಸಿಕೊಳ್ಳಲು ಅವಕಾಶ ನೀಡುವುದಾಗಿದೆ. ಇದರೊಂದಿಗೆ, ಇದು ಸರ್ಕಾರದ ಬೊಕ್ಕಸಕ್ಕೂ ಆದಾಯ ತರುವುದರ ಜೊತೆಗೆ, ಲಕ್ಷಾಂತರ ನಾಗರಿಕರ ಆಸ್ತಿಗಳಿಗೆ ಕಾನೂನಿನ ರಕ್ಷಣೆ ಒದಗಿಸುವ ಗುರಿ ಹೊಂದಿದೆ.
ಯಾರು ಯಾರು ಈ ಪರಿವರ್ತನೆಗೆ ಅರ್ಹರು?
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಎಲ್ಲಾ ಬಿ-ಖಾತೆ ಆಸ್ತಿಗಳು ಎ-ಖಾತೆಗೆ ಪರಿವರ್ತನೆಯಾಗಲು ಅರ್ಹವಾಗಿರುವುದಿಲ್ಲ. ಹೌದು, ಸರ್ಕಾರಿ ಜಮೀನು, ಕೆರೆ-ಕುಂಟೆ, ರಾಜಕಾಲುವೆ, ಉದ್ಯಾನವನ ಅಥವಾ ಇತರ ಸಾರ್ವಜನಿಕ ಬಳಕೆಯ ಜಾಗಗಳನ್ನು ಒತ್ತುವರಿ ಮಾಡಿ ನಿರ್ಮಿಸಲಾದ ಆಸ್ತಿಗಳನ್ನು ಯಾವುದೇ ಕಾರಣಕ್ಕೂ ಸಕ್ರಮಗೊಳಿಸಲಾಗುವುದಿಲ್ಲ. ಬದಲಾಗಿ, ಕಂದಾಯ ಜಮೀನಿನಲ್ಲಿ (ರೆವೆನ್ಯೂ ಸೈಟ್ಸ್) ಇದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ, ಸಣ್ಣಪುಟ್ಟ ನಿಯಮಗಳ ಉಲ್ಲಂಘನೆ (ಮೈನರ್ ಡೀವಿಯೇಷನ್ಸ್) ಹೊಂದಿರುವ, ಅಥವಾ ಅನುಮೋದಿತ ಬಡಾವಣೆಯಲ್ಲಿದ್ದರೂ ಕೆಲವು ದಾಖಲೆಗಳ ಕೊರತೆಯಿಂದ ಬಿ-ಖಾತೆಯಲ್ಲಿ ಉಳಿದಿರುವ ಆಸ್ತಿಗಳು ಈ ಯೋಜನೆಯ ಲಾಭ ಪಡೆಯಬಹುದು. ಹಾಗಾಗಿ, ಅರ್ಜಿದಾರರು ತಮ್ಮ ಆಸ್ತಿಯು ನಿಗದಿತ ಮಾನದಂಡಗಳನ್ನು ಪೂರೈಸುತ್ತದೆಯೇ ಎಂದು ಪರಿಶೀಲಿಸಿಕೊಳ್ಳುವುದು ಮೊದಲ ಹಂತವಾಗಿದೆ.
ಪರಿವರ್ತನೆ ಪ್ರಕ್ರಿಯೆ ಮತ್ತು ಬೇಕಾದ ದಾಖಲೆಗಳು
ಹೊಸ ಆನ್‌ಲೈನ್ ವ್ಯವಸ್ಥೆಯಲ್ಲಿ ಪ್ರಕ್ರಿಯೆಯು ಈ ಕೆಳಗಿನಂತಿರುತ್ತದೆ ಎಂದು ನಿರೀಕ್ಷಿಸಲಾಗಿದೆ:
- ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವುದು.
- ಆಸ್ತಿಯ ವಿವರಗಳು, ಮಾಲೀಕರ ವಿವರಗಳು ಮತ್ತು ಸಂಬಂಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು.
ಅಗತ್ಯವಿರುವ ಪ್ರಮುಖ ದಾಖಲೆಗಳೆಂದರೆ:
- ಆಸ್ತಿಯ ಮಾಲೀಕತ್ವವನ್ನು ದೃಢೀಕರಿಸುವ ನೋಂದಾಯಿತ ಕ್ರಯಪತ್ರ (ಸೇಲ್ ಡೀಡ್).
ಆಸ್ತಿಯ ಮೂಲ ದಾಖಲೆಗಳು (ಮದರ್ ಡೀಡ್). - ಇಲ್ಲಿಯವರೆಗೆ ಪಾವತಿಸಿದ ಆಸ್ತಿ ತೆರಿಗೆಯ ರಶೀದಿಗಳು (ಬಿ-ಖಾತೆ ತೆರಿಗೆ ರಶೀದಿ).
- ಇಸಿ (ಎನ್‌ಕಂಬರೆನ್ಸ್ ಸರ್ಟಿಫಿಕೇಟ್) ಅಂದರೆ ಋಣಮುಕ್ತ ಪ್ರಮಾಣಪತ್ರ.
- ಆಸ್ತಿಯ ಸ್ಪಷ್ಟ ಅಳತೆಗಳನ್ನು ತೋರಿಸುವ ಸ್ಕೆಚ್ ಅಥವಾ ನಕ್ಷೆ.
- ಭೂ ಪರಿವರ್ತನೆ (ಡಿಸಿ ಕನ್ವರ್ಷನ್) ಆಗಿದ್ದರೆ ಅದರ ಆದೇಶ ಪತ್ರ (ಇದ್ದಲ್ಲಿ).
- ಮಾಲೀಕರ ಗುರುತಿನ ಚೀಟಿ (ಆಧಾರ್ ಕಾರ್ಡ್).
ಶುಲ್ಕ ಪಾವತಿ
ಅರ್ಜಿ ಸಲ್ಲಿಸಿದ ನಂತರ, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಆಸ್ತಿಯು ಪರಿವರ್ತನೆಗೆ ಅರ್ಹವಾಗಿದ್ದರೆ, ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಲು ಸೂಚಿಸಲಾಗುತ್ತದೆ. ವರದಿಗಳ ಪ್ರಕಾರ, ಆಸ್ತಿಯ ಪ್ರಸ್ತುತ ಮಾರ್ಗದರ್ಶಿ ಮೌಲ್ಯದ (ಗೈಡೆನ್ಸ್ ವ್ಯಾಲ್ಯೂ) ಶೇಕಡಾ 5 ರಷ್ಟು ಶುಲ್ಕವನ್ನು ‘ಅಭಿವೃದ್ಧಿ ಶುಲ್ಕ’ ಅಥವಾ ‘ಸಕ್ರಮಗೊಳಿಸುವ ಶುಲ್ಕ’ವಾಗಿ ಪಾವತಿಸಬೇಕಾಗಬಹುದು. ಈ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಿದ ನಂತರ, ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡು, ಅರ್ಹ ಆಸ್ತಿಗಳಿಗೆ ಎ-ಖಾತೆಯನ್ನು ವಿತರಿಸಲಾಗುತ್ತದೆ.
ಪರಿವರ್ತನೆಯಿಂದಾಗುವ ದೀರ್ಘಕಾಲೀನ ಲಾಭಗಳೇನು..?
ಏತನ್ಮಧ್ಯೆ, ಬಿ-ಖಾತೆಯಿಂದ ಎ-ಖಾತೆಗೆ ವರ್ಗಾವಣೆ ಮಾಡಿಕೊಳ್ಳುವ ಈ ಪ್ರಕ್ರಿಯೆಯು ಸ್ವಲ್ಪ ಖರ್ಚಿನದ್ದಾಗಿ ಕಂಡರೂ, ಇದರಿಂದಾಗುವ ದೀರ್ಘಕಾಲೀನ ಲಾಭಗಳು ಅಪಾರ. ಯಾಕಂದ್ರೆ ಒಮ್ಮೆ ನಿಮ್ಮ ಆಸ್ತಿಗೆ ಎ-ಖಾತೆ ದೊರೆತರೆ, ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯವು ತಕ್ಷಣವೇ ಗಣನೀಯವಾಗಿ ಏರಿಕೆಯಾಗುತ್ತದೆ. ಜೊತೆಗೆ ನೀವು ಸುಲಭವಾಗಿ ಗೃಹ ಸಾಲ ಅಥವಾ ಕಟ್ಟಡ ನಿರ್ಮಾಣಕ್ಕೆ ಸಾಲ ಪಡೆಯಬಹುದು. ಇದರೊಂದಿಗೆ ಅಧಿಕೃತವಾಗಿ ನಕ್ಷೆ ಅನುಮೋದನೆ ಪಡೆದು ಮನೆ ಕಟ್ಟಬಹುದು. ಜೊತೆಗೆ ಭವಿಷ್ಯದಲ್ಲಿ ಆಸ್ತಿಯನ್ನು ಮಾರಾಟ ಮಾಡುವಾಗ ಅಥವಾ ಮುಂದಿನ ಪೀಳಿಗೆಗೆ ವರ್ಗಾಯಿಸುವಾಗ ಯಾವುದೇ ಕಾನೂನು ತೊಡಕುಗಳು ಎದುರಾಗುವುದಿಲ್ಲ. ಅದರಲ್ಲೂ ಎಲ್ಲಕ್ಕಿಂತಲೂ ಮುಖ್ಯವಾಗಿ, ನಿಮ್ಮ ಆಸ್ತಿಯ ಮೇಲೆ ನಿಮಗೆ ಸಂಪೂರ್ಣ ಕಾನೂನುಬದ್ಧ ಹಕ್ಕು ಮತ್ತು ಭದ್ರತೆ ದೊರೆಯುತ್ತದೆ.
ಹಾಗಾಗಿ, ಬೆಂಗಳೂರಿನಲ್ಲಿ ಬಿ-ಖಾತೆ ಹೊಂದಿರುವ ಆಸ್ತಿ ಮಾಲೀಕರಿಗೆ ಇದು ನಿಜಕ್ಕೂ ಒಂದು ಅತ್ಯುತ್ತಮ ಅವಕಾಶವಾಗಿದ್ದು, ಸರ್ಕಾರದ ಈ 100 ದಿನಗಳ ಅಭಿಯಾನದ ಸದುಪಯೋಗ ಪಡೆದುಕೊಂಡು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ತಮ್ಮ ಆಸ್ತಿಯನ್ನು ಕಾನೂನುಬದ್ಧಗೊಳಿಸಿಕೊಳ್ಳುವುದು ಜಾಣತನದ ನಿರ್ಧಾರವಾಗಿದೆ. ಇದು ಕೇವಲ ತೆರಿಗೆ ಪಾವತಿಸುವವರಿಂದ, ಆಸ್ತಿಯ ಸಂಪೂರ್ಣ ಮಾಲೀಕರಾಗುವ ಒಂದು ಪ್ರಮುಖ ಹೆಜ್ಜೆಯಾಗಿದೆ.


