ಬೆಂಗಳೂರು: ಚಿನ್ನ ಎಲ್ಲರೂ ಸಂಗ್ರಹಿಸಲು ಬಯಸುವ ಅತ್ಯಂತ ಜನಪ್ರಿಯ ಸ್ವತ್ತುಗಳಲ್ಲಿ ಒಂದಾಗಿದೆ. ಪ್ರತಿಯೊಂದು ಕುಟುಂಬವು ಆಭರಣ, ನಾಣ್ಯ ಅಥವಾ ಆಧುನಿಕ ಹೂಡಿಕೆ ಯೋಜನೆಗಳ ರೂಪದಲ್ಲಿ ಸ್ವಲ್ಪ ಪ್ರಮಾಣದ ಚಿನ್ನವನ್ನು ಹೊಂದಿರುತ್ತದೆ. ಚಿನ್ನದ ಮೇಲಿನ ಈ ಗೀಳು ದೇಶದಲ್ಲಿ ಅದೃಷ್ಟ ಮತ್ತು ಸಂಪತ್ತಿನ ಸಂಕೇತವಾಗಿ ಅದರ ಸ್ಥಾನಮಾನವನ್ನು ಹೆಚ್ಚಿಸಿದೆ. ಚಿನ್ನವನ್ನು ಖರೀದಿ ಮಾಡಲು, ಸಂಗ್ರಹಿಸಿಟ್ಟುಕೊಳ್ಳಲು ಇತಿ ಮಿತಿಗಳಿವೆ. ಮನೆಯಲ್ಲಿ ಎಷ್ಟು ಚಿನ್ನವನ್ನು ಇಡಬಹುದು ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಕೆಲವೊಂದು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು.
ಚಿನ್ನವನ್ನು ಮನೆಯಲ್ಲಿ ಎಷ್ಟು ಇಟ್ಟುಕೊಳ್ಳಬಹುದು?
* ಒಬ್ಬ ವಿವಾಹಿತ ಮಹಿಳೆ ಮನೆಯಲ್ಲಿ ತನ್ನ ಬಳಿ 500 ಗ್ರಾಮ್ನಷ್ಟು ಚಿನ್ನ ಅಥವಾ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು.
* ಅವಿವಾಹಿತ ಮಹಿಳೆಯಾದರೆ 250 ಗ್ರಾಮ್ ಚಿನ್ನವನ್ನು ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬಹುದು.
* ಪುರುಷರು 100 ಗ್ರಾಮ್ನಷ್ಟು ಮಾತ್ರ ಚಿನ್ನ ಅಥವಾ ಚಿನ್ನಾಭರಣವನ್ನು ಮನೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು.
ಹೆಚ್ಚು ಚಿನ್ನ ಇದ್ದರೆ ಮಾತ್ರ ಸೀಜ್
ಸರ್ಕಾರದ ನಿಯಮಗಳ ಪ್ರಕಾರ, ನಿಗದಿತ ಪ್ರಮಾಣದೊಳಗೆ ಮನೆಯಲ್ಲಿ ಚಿನ್ನ ಇದ್ದರೆ ಯಾವ ಅಧಿಕಾರಿಯೂ ಅದನ್ನು ವಶಕ್ಕೆ ಪಡೆಯುವಂತಿಲ್ಲ. ತನಿಖಾ ಅಧಿಕಾರಿಗಳು ಮನೆಗೆ ಶೋಧಕ್ಕೆ ಬಂದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇರುವ ಚಿನ್ನವನ್ನಷ್ಟೇ ಸೀಜ್ ಮಾಡಿಕೊಳ್ಳಲು ಅವಕಾಶ ಇರುತ್ತದೆ.
ಎಷ್ಟು ಚಿನ್ನ ಖರೀದಿಸಬಹುದು? ತೆರಿಗೆ ಎಷ್ಟು ಕಟ್ಟಬೇಕು?
ಆದಾಯ ತೆರಿಗೆ ಫೈಲಿಂಗ್ನಲ್ಲಿ ಘೋಷಣೆ ಮಾಡಲಾಗಿರುವ ಕೃಷಿ ಆದಾಯ, ಗೃಹ ಉಳಿತಾಯದಿಂದ ಬಂದ ಹಣದಲ್ಲಿ ಖರೀದಿಸಲಾದ ಚಿನ್ನಕ್ಕೆ ಯಾವ ತೆರಿಗೆ ಕಟ್ಟಬೇಕಿಲ್ಲ. ಹಾಗೆಯೇ, ಪಾರಂಪರಿಕವಾಗಿ ಬಂದ ಚಿನ್ನಕ್ಕೂ ತೆರಿಗೆ ಕಟ್ಟುವಂತಿಲ್ಲ. ಸಿಬಿಡಿಟಿ ನಿಯಮಗಳ ಪ್ರಕಾರ ಘೋಷಿತ ಆದಾಯ ಮೂಲಗಳಿದ ಚಿನ್ನವನ್ನು ಎಷ್ಟು ಬೇಕಾದರು ಇಟ್ಟುಕೊಳ್ಳಬಹುದು. ಅದಕ್ಕೆ ಮಿತಿ ಇರುವುದಿಲ್ಲ.
ನೀವು ಚಿನ್ನ ಖರೀದಿಸಿ 3 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಅದನ್ನು ಮಾರಲು ಹೊರಟಿದ್ದರೆ ಕಿರು ಅವಧಿ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ದರಕ್ಕೆ ಅನುಗುಣವಾಗಿ ಈ ತೆರಿಗೆ ಇರುತ್ತದೆ. ಚಿನ್ನ ಖರೀದಿಸಿ 3 ವರ್ಷಕ್ಕೂ ಹೆಚ್ಚು ಅವಧಿ ಬಳಿಕ ಅದನ್ನು ಮಾರಲು ಹೊರಟಿದ್ದರೆ ದೀರ್ಘಾವಧಿ ಲಾಭ ತೆರಿಗೆ ಅನ್ವಯವಾಗುತ್ತದೆ. ಇನ್ನು ಮನೆಯಲ್ಲಿ ಸೀಮಿತ ಪ್ರಮಾಣದಲ್ಲಿ ಚಿನ್ನವನ್ನು ಇಟ್ಟುಕೊಳ್ಳುವುದರಿಂದ ಪ್ರಮುಖ ಲಾಭವೆಂದರೆ ಕಳ್ಳತನದ ರಿಸ್ಕ್ ಕಡಿಮೆ ಆಗುತ್ತದೆ. ಹೆಚ್ಚುವರಿ ಚಿನ್ನವನ್ನು ಬ್ಯಾಂಕ್ ಲಾಕರ್ನಲ್ಲಿ ಇಡಬಹುದು. ಆ ಚಿನ್ನವನ್ನು ಲಾಭ ಮಾಡಿಕೊಳ್ಳುವ ಅವಕಾಶ ನಿಮಗಿರುತ್ತದೆ.


