BBMP
Loading ...

RSS

Greater Bengaluru News9 : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್​​ಎಸ್​​ಎಸ್ ನೋಂದಣಿ ವಿಚಾರವನ್ನು ಎತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇದರ ನಡುವೆ ಇದೀಗ ಪ್ರಿಯಾಂಕ್ ಖರ್ಗೆ, ಇದೇ ವಿಚಾರವಾಗಿ ಆರ್​​ಎಸ್​​ಎಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ. ಇಷ್ಟು ದೊಡ್ಡ ಸಂಘಟನೆ ಯಾವ ಕಾನೂನಿನ ಆಧಾರದಲ್ಲಿ ನಿರ್ವಹಿಸುತ್ತಿದೆ. ಏಕೆ ನೋಂದಾಯಿತ ಕಾನೂನು ಬದ್ಧ ಸಂಸ್ಥೆಯಾಗಿ ಕಾರ್ಯ ನಿರ್ವಹಿಸ್ತಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಕಳೆದ ವರ್ಷವೂ ಸಹ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಮೋಹನ್ ಭಾಗವತ್ ಅವರಿಗೆ ಆರ್​​​ಎಸ್​​ಎಸ್​​​ ಬಗ್ಗೆ ಕೆಲವೊಂದಿಷ್ಟು ವಿವರಣೆ ಕೇಳಿದ್ದರು. ಇದೀಗ ಪತ್ರದ ಮೂಲಕ ಮತ್ತೆ ಸಂಘದ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ. ಸಂಘದ ಕಾರ್ಯಚಟುವಟಿಕೆಗಳು, ಸಂಘಕ್ಕೆ ಬರುವ ಆದಾಯದ ಮೂಲ, ಆಸ್ತಿಪಾಸ್ತಿ ಬಗ್ಗೆ ಬಹಿರಂಗಪಡಿಸುವಂತೆ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಿಯಾಂಕ್ ಖರ್ಗೆ ಪತ್ರದಲ್ಲೇನಿದೆ?
ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯದ ಕುರಿತು ನಿರಂತರವಾಗಿ ಮಾತನಾಡುವ ಸಂಘಟನೆಯೊಂದು ಪಾರದರ್ಶಕತೆ, ಕಾನೂನಿನ ಅನುಸರಣೆ ಮತ್ತು ಭಾರತದ ಸಂವಿಧಾನದ ಬಗೆಗಿನ ಗೌರವವನ್ನೂ ಅಷ್ಟೇ ದೃಢವಾಗಿ ಪ್ರದರ್ಶಿಸಬೇಕು. ಸಾಮಾನ್ಯ ಭಾರತೀಯರು ನಿಯಮಗಳನ್ನು ಪಾಲಿಸಬೇಕು. ತಾನು ಮಾತ್ರ ಅದೇ ನಿಯಮಗಳಿಂದ ವಿನಾಯಿತಿ ಪಡೆದುಕೊಳ್ಳುವ ನೈತಿಕ ಹಕ್ಕು ಆರ್‌ಎಸ್‌ಎಸ್‌ಗೆ ಇಲ್ಲ. ಕಾರ್ಮಿಕರು, ಸಣ್ಣ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಎನ್‌ಜಿಒಗಳು, ಟ್ರಸ್ಟ್‌ಗಳು, ಕಂಪನಿಗಳು ಮತ್ತು ನಾಗರಿಕರು ನೋಂದಣಿ, ಬಹಿರಂಗಪಡಿಸುವಿಕೆ, ಲೆಕ್ಕಪರಿಶೋಧನೆ ಮತ್ತು ತೆರಿಗೆ ಪಾವತಿಗೆ ಬದ್ಧರಾಗಿದ್ದಾರೆ. ಆದ್ದರಿಂದ ಆರ್‌ಎಸ್‌ಎಸ್ ಕೂಡ ದೇಶದ ಕಾನೂನಿಗೆ ಮಾದರಿಯಾಗಿ ಬದ್ಧವಾಗಿರಬೇಕು ಎಂದಿದ್ದಾರೆ.

ಆರ್‌ಎಸ್‌ಎಸ್ ತನ್ನ ಶತಮಾನೋತ್ಸವದ ಈ ಸಂದರ್ಭವನ್ನು ಕೇವಲ ಆಚರಣೆಗಾಗಿ ಮಾತ್ರವಲ್ಲ. ಸಾಂವಿಧಾನಿಕ ಆತ್ಮಾವಲೋಕನಕ್ಕಾಗಿಯೂ ಬಳಸಿಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. ಭಾರತದ ಈ ನೂರನೇ ವರ್ಷದಲ್ಲಿ ದೇಶಕ್ಕೆ ಆರ್‌ಎಸ್‌ಎಸ್ ನೀಡಬಹುದಾದ ಅತ್ಯುತ್ತಮ ಗೌರವವೆಂದರೆ, ತನ್ನನ್ನು ತಾನು ನೋಂದಾಯಿಸಿಕೊಳ್ಳುವುದು , ತನ್ನ ಚಟುವಟಿಕೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಬಹಿರಂಗಪಡಿಸುವುದು ಅನ್ವಯವಾಗುವ ಎಲ್ಲ ತೆರಿಗೆಗಳನ್ನು ಪಾವತಿಸುವುದು ಮತ್ತು ಭಾರತೀಯ ಕಾನೂನಿನ ಚೌಕಟ್ಟಿನೊಳಗೆ ಪಾರದರ್ಶಕ ಹಾಗೂ ಜವಾಬ್ದಾರಿಯುತ ಸಂಘಟನೆಯಾಗಿ ಕಾರ್ಯನಿರ್ವಹಿಸುವುದು. ನಿಮ್ಮ ಅಧಿಕೃತ ಪ್ರತಿನಿಧಿಗಳನ್ನು ಕಳುಹಿಸಿ ಮೇಲಿನ ವಿಷಯಗಳ ಕುರಿತು ಚರ್ಚೆ ನಡೆಸಲು ನಾವು ಔಪಚಾರಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದ ಕೊನೆಯಲ್ಲಿ ಖರ್ಗೆ ಮನವಿ
ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಆರ್​​ಎಸ್​ಎಸ್​​ ನ ಕೆಲ ವಿವರಗಳನ್ನು ತಿಳಿಸುವಂತೆ ಆಗ್ರಹಿಸಿದ್ದಾರೆ. ಕೊನೆಗೆ ಕೆಲವೊಂದಿಷ್ಟು ಮನವಿಯನ್ನು ಸಹ ಮಾಡಿಕೊಂಡಿದ್ದಾರೆ. ಅವುಗಳೆಂದರೆ, ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು, ಚಟುವಟಿಕೆಗಳು ಮತ್ತು ಹಣಕಾಸಿನ ಮಾಹಿತಿಯನ್ನು ಬಹಿರಂಗಪಡಿಸಬೇಕು, ಅನ್ವಯವಾಗುವ ಎಲ್ಲಾ ತೆರಿಗೆಗಳನ್ನು ಪಾವತಿಸಬೇಕು, ಭಾರತೀಯ ಕಾನೂನುಗಳ ಚೌಕಟ್ಟಿನೊಳಗೆ ಪಾರದರ್ಶಕ ಮತ್ತು ಉತ್ತರದಾಯಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಪತ್ರದಲ್ಲಿ ಉಲ್ಲೇಖಿಸಿದ 8 ಅಂಶಗಳು
* RSSನ ಕಾನೂನಾತ್ಮಕ ಸ್ಥಾನಮಾನ ಮತ್ತು ಸಂಘಟನೆಯ ರಚನೆ ವಿವರ
* ಪದಾಧಿಕಾರಿಗಳು ಮತ್ತು ಅಧಿಕೃತ ಪ್ರತಿನಿಧಿಗಳ ವಿವರಗಳು
* ದೇಣಿಗೆ, ಕೊಡುಗೆ ಮತ್ತು ಆದಾಯದ ಮೂಲಗಳು
* ವೆಚ್ಚ ಮತ್ತು ಆಸ್ತಿಪಾಸ್ತಿಗಳ ವಿವರಗಳು
* ಕಾನೂನಿನ ಪ್ರಕಾರ ಅನ್ವಯವಾಗುವ ತೆರಿಗೆಗಳನ್ನು ಸಕ್ರಮವಾಗಿ ಪಾವತಿಸಲಾಗುತ್ತಿದೆಯೇ ಎಂಬ ವಿಷಯ.
* ಔಪಚಾರಿಕ ನೋಂದಣಿಯಿಲ್ಲದೆ ತನ್ನ ಚಟುವಟಿಕೆಗಳನ್ನು ನಡೆಸಲು ಯಾವ ಕಾನೂನಾತ್ಮಕ ಆಧಾರವನ್ನು ಅವಲಂಬಿಸಲಾಗಿದೆ ಎಂಬ ವಿಷಯ.
* ಯಾವುದೇ ಸಾರ್ವಜನಿಕ ಜವಾಬ್ದಾರಿಯಿಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಹಕ್ಕನ್ನು ಯಾವ ಸಾಂವಿಧಾನಿಕ ಮತ್ತು * ಶಾಸನಾತ್ಮಕ ಚೌಕಟ್ಟಿನ ಅಡಿಯಲ್ಲಿ ಪಡೆದುಕೊಳ್ಳಲಾಗಿದೆ ಎಂಬ ವಿಷಯ.
* ರೂಟ್ ಮಾರ್ಚ್, ಸಾರ್ವಜನಿಕರ ಸೇರ್ಪಡೆ ಸಂದರ್ಭದಲ್ಲಿ ಪಡೆಯಲಾಗಿರುವ ಅನುಮತಿಗಳು.

Leave a Reply

Your email address will not be published. Required fields are marked *