ಬೆಂಗಳೂರು: ರಾಜ್ಯಾದ್ಯಂತ ಮಳೆ ತೀವ್ರಗೊಳ್ಳುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಯ ವಾತಾವರಣ ಇದೆ. ಕೆಲವೊಮ್ಮೆ ಬಿರುಸಾದ ಗಾಳಿ ಮಳೆ ಅಪಾಯಕಾರಿಯಾಗಿ ಮಾರ್ಪಡುತ್ತಿದೆ. ಮಳೆ ಹಾಗೂ ಗಾಳಿಗೆ ಟೊಳ್ಳು ಮರಗಳ ಕೊಂಬೆಗಳು ಬಿದ್ದು ಅಪಾಯ ಉಂಟಾಗುತ್ತಿದೆ. ಇದಕ್ಕೆ ಅಕ್ಷಯ್ ಎಂಬ ಯುವಕನ ಸಾವೇ ಉದಾಹರಣೆ. ಈ ನಿಟ್ಟಿನಲ್ಲಿ ಇಂತಹ ಅನಾಹುತ ನಡೆಯದಂತೆ ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕಾಗಿದೆ.
ಬೆಂಗಳೂರಿನಲ್ಲಿ ಮಳೆ ವಾತಾವರಣ ಇದ್ದು, ಈ ನಡುವೆ ಮರದ ಕೊಂಬೆ ಬಿದ್ದು ಅಕ್ಷಯ್ ಎಂಬ ಯುವಕ ಮೃತಪಟ್ಟಿದ್ದ. ಜೂನ್ 15 ರಂದು ಬೈಕ್ ನಲ್ಲಿ ತೆರಳುತ್ತಿದ್ದ ಅಕ್ಷಯ್ ಮೇಲೆ ಶ್ರೀನಿವಾಸ್ ನಗರದ ಬ್ರಹ್ಮಮಂದಿರದ ಬಳಿ ಮರದ ಕೊಂಬೆ ಮುರಿದು ಬಿದ್ದಿತ್ತು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಕ್ಷಯ್ ತಲೆಗೆ ಹತ್ತಕ್ಕೂ ಅಧಿಕ ಗಾಯಗಳಾಗಿದ್ದವು. ಶಸ್ತ್ರ ಚಿಕಿತ್ಸೆ ನಡೆಸಿದ್ದರೂ ಮಿದುಳು ನಿಷ್ಟ್ರಿಯಗೊಂಡಿತ್ತು. ಗುರುವಾರ 1.15 ಕ್ಕೆ ಅಕ್ಷಯ್ ಕೊನೆ ಉಸಿರೆಳೆದಿದ್ದರು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಅನಾಹುತ ಮೊದಲೇನಲ್ಲ
ಮಳೆಗಾಲದ ಸಂದರ್ಭದಲ್ಲಿ ಮರದ ಕೊಂಬೆಗಳು ಬಿದ್ದು ಅನಾಹುತ ಸಂಭವಿಸಿದ ಹಲವು ಉದಾಹರಣೆಗಳು ಇವೆ. ಇವು ಆಕಸ್ಮಿಕವಾದರೂ ಮುಂಜಾಗ್ರತಾ ಕ್ರಮಗಳ ಮೂಲಕ ಇದನ್ನು ತಡೆಗಟ್ಟಲು ಸಾಧ್ಯವಿದೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ಬಿಬಿಎಂಪಿ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ. ಆದರೆ ಈ ನಿರ್ಲಕ್ಷ್ಯ ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ.
ಸಿಎಂ ಮನೆಯ ಮುಂದೆ ಮುರಿದು ಬಿದ್ದ ಕೊಂಬೆ
ಸಿಎಂ ಸಿದ್ದರಾಮಯ್ಯನವರ ಸರ್ಕಾರಿ ನಿವಾಸದ ಮುಂಭಾಗದ ರಸ್ತೆಯಲ್ಲಿ ದಿನಗಳ ಹಿಂದೆ ಮರ ಧರೆಗುರುಳಿ, ಟೆಂಪೋ ಟ್ರಾವೆಲರ್ ಹಾಗೂ ಕಾರಿಗೆ ಹಾನಿಯಾಗಿದೆ. ಶಿವಾನಂದ ಸರ್ಕಲ್ ಬಳಿ ಈ ಘಟನೆ ನಡೆದಿತ್ತು. ಪೊಲೀಸರು ರಸ್ತೆ ಬಂದ್ ಮಾಡಿದ್ದು, ತೆರವು ಕಾರ್ಯಾಚರಣೆ ನಡೆಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಲಿಲ್ಲ.
ಈಶ್ವರ್ ಖಂಡ್ರೆ ಕ್ರಮ
ಮರದ ಕೊಂಬೆ ದ್ವಿಚಕ್ರ ವಾಹನ ಸವಾರ ಅಕ್ಷಯ್ ಮೇಲೆ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಒಣಗಿದ ಮತ್ತು ಅಪಾಯಕಾರಿ ಮರಗಳ ಕೊಂಬೆ ತೆರವಿಗೆ ಆದೇಶ ನೀಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಕೊಂಬೆ ತೆರವು ಕಾರ್ಯಾಚರಣೆ ವೀಕ್ಷಿಸಿದ್ದಾರೆ. ಅಲ್ಲದೆ ಅಪಾಯಕಾರಿ ವೃಕ್ಷ, ಕೊಂಬೆ ತೆರವಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನ 75 ಜಂಕ್ಷನ್‌ಗಳಿಗೆ 100 ಕೋಟಿ ರೂ ವೆಚ್ಚದಲ್ಲಿ ಹೊಸ ರೂಪ: ಯಾವ್ಯಾವ ಜಂಕ್ಷನ್ ಇಲ್ಲಿದೆ ಸಂಪೂರ್ಣ ಮಾಹಿತಿ


