BBMP
Loading ...

BBMP High Court

ಬೆಂಗಳೂರು: ಮಾರ್ಗಸೂಚಿ ದರ ಆಧರಿಸಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ (ಸಿ.ಸಿ), ಸ್ವಾಧೀನಾನುಭವ ಪ್ರಮಾಣ ಪತ್ರ(ಒ.ಸಿ), ನಿರ್ಮಾಣ ಹಂತದಲ್ಲಿ ಬಳಸುವ ಸಾರ್ವಜನಿಕ ರಸ್ತೆ ಬಳಕೆಗೆ ನೆಲ ಬಾಡಿಗೆ ಶುಲ್ಕ ಸೇರಿದಂತೆ ಇತರೆ ಶುಲ್ಕ ಸಂಗ್ರಹಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ಅವಕಾಶ ಕಲ್ಪಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬಿಬಿಎಂಪಿ ಆಯುಕ್ತ ಮತ್ತು ಮಹದೇವಪುರ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ. ‘ಶುಲ್ಕ ಸಂಗ್ರಹಿಸಲು ಬಿಬಿಎಂಪಿಗೆ ಅಧಿಕಾರವಿಲ್ಲ’ ಎಂದು ನಿರ್ಣಯಿಸಿ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳಷ್ಟೇ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

‘ಒಂದೊಮ್ಮೆ ಬಿಬಿಎಂಪಿ ಈ ಮೇಲ್ಮನವಿಯಲ್ಲಿ ವಿಫಲವಾದರೆ, ನಾನಾ ಶುಲ್ಕಗಳ ರೂಪದಲ್ಲಿ ಈಗಾಗಲೇ ಸಂಗ್ರಹಿಸಲಾದ ಮೊತ್ತವನ್ನು ಮರು ಪಾವತಿಸಬೇಕಾಗುತ್ತದೆ’ ಎಂದೂ ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ರಿಟ್‌ ಅರ್ಜಿಗಳು: ಕರ್ನಾಟಕ ಪಟ್ಟಣ ಮತ್ತು ನಗರ ಯೋಜನೆ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಮೆಸರ್ಸ್‌ ಸಪ್ತಗಿರಿ ಶೆಲ್ಟರ್ಸ್‌, ಕೆಲವು ಖಾಸಗಿ ಆಸ್ತಿ ಮಾಲೀಕರು ಮತ್ತು ಡೆವಲಪರ್‌ಗಳು ರಿಟ್‌ ಅರ್ಜಿ ಸಲ್ಲಿಸಿದ್ದರು.

ಇವುಗಳ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಬೆಂಗಳೂರಿನ ನಾಗರಿಕರು ಮತ್ತು ಬಿಲ್ಡರ್‌ಗಳಿಂದ ನೆಲ ಬಾಡಿಗೆ ಸೇರಿದಂತೆ ಹಲವು ಶುಲ್ಕಗಳನ್ನು ವಿಧಿಸಲು ಅವಕಾಶ ಮಾಡಿಕೊಟ್ಟಿದ್ದ, ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ (ಕೆಎಂಸಿ) ಮತ್ತು ಇತರೆ ಕೆಲವು ಕಾನೂನುಗಳ ತಿದ್ದುಪಡಿ ಕಾಯ್ದೆ–2021 ಹಾಗೂ 2023ಕ್ಕೆ ತರಲಾಗಿದ್ದ ತಿದ್ದುಪಡಿಗಳನ್ನು 2025ರ ಜೂನ್‌ 5ರಂದು ರದ್ದುಗೊಳಿಸಿ ಆದೇಶಿಸಿತ್ತು.

‘ಕರ್ನಾಟಕ ಯೋಜನಾ ಪ್ರಾಧಿಕಾರ ನಿಯಮಗಳು–1965ರ ನಿಯಮ 37-ಅ ಅಡಿಯಲ್ಲಿ ವಿಧಿಸಬಹುದಾದ ಶುಲ್ಕವನ್ನು ಕಟ್ಟಡ ಅಥವಾ ಭೂಮಿಯ ಅಭಿವೃದ್ಧಿಗಾಗಿ ಮಾರುಕಟ್ಟೆ ಅಥವಾ ಮಾರ್ಗಸೂಚಿ ದರಕ್ಕೆ ಸಂಯೋಜನೆ ಮಾಡುವುದು ಅಥವಾ ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಪ್ರಾಧಿಕಾರ ಕಾಯ್ದೆಯ ಅಡಿಯಲ್ಲಿ ಖಾಸಗಿ ಬೀದಿಯ ಫ್ಲ್ಯಾಟ್‌ ಅಥವಾ ವಿನ್ಯಾಸದ ಉಪವಿಭಾಗಕ್ಕೆ ಅನುಮೋದನೆ ನೀಡುವುದು ಕಾನೂನುಬಾಹಿರ’ ಎಂದು ಘೋಷಿಸಿತ್ತು.

ಕಾನೂನು ಬಾಹಿರ: ‘ನಾನಾ ಶುಲ್ಕಗಳನ್ನು ಮಾರ್ಗಸೂಚಿ ದರದ (ಗೈಡೆನ್ಸ್‌ ವ್ಯಾಲ್ಯೂ) ಜತೆ ಸಂಯೋಜಿಸಿ ನೆಲ ಬಾಡಿಗೆ ಸೇರಿದಂತೆ ವಿವಿಧ ಶುಲ್ಕಗಳನ್ನು ವಿಧಿಸುವುದು ಕಾನೂನು ಬಾಹಿರ’ ಎಂದು ಹೈಕೋರ್ಟ್‌ 2021ರಲ್ಲಿ ಸುಂದರಂ ಶೆಟ್ಟಿ ಪ್ರಕರಣದಲ್ಲಿ ಸಾರಿತ್ತು.

ಈ ತೀರ್ಪಿನಿಂದ ಹೊರಬರಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ, ಕೆಎಂಸಿ ಕಾಯ್ದೆಯ ಕೆಲವು ಕಲಂಗಳಿಗೆ 2021 ಹಾಗೂ 2023ರಲ್ಲಿ ತಿದ್ದುಪಡಿ ಮಾಡಿತ್ತು. ಈ ತಿದ್ದುಪಡಿಯಲ್ಲಿ ನೆಲದ ಬಾಡಿಗೆ, ಮಾರ್ಗಸೂಚಿ ದರ ಮತ್ತು ಪರಿಶೀಲನಾ ಶುಲ್ಕಗಳನ್ನು ಹೊಸದಾಗಿ ವ್ಯಾಖ್ಯಾನಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರ ಮನವಿಯನ್ನು ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬಿಬಿಎಂಪಿ ಈ ಮೇಲ್ಮನವಿ ಸಲ್ಲಿಸಿತ್ತು.

ತೆರಿಗೆ ವಂಚಕರಿಗೆ ಬಿಬಿಎಂಪಿ ನೋಟಿಸ್ : ಆಸ್ತಿಯ ಮಾರಾಟ, ವರ್ಗಾವಣೆ ತಡೆ ಹಿಡಿಯುವುದಕ್ಕೆ ಪಾಲಿಕೆ ನಿರ್ಧಾರ

Leave a Reply

Your email address will not be published. Required fields are marked *