ಹಾಸನ: ಹಾಸನಾಂಬೆ ದರ್ಶನದ ಎಲ್ಲಾ ಪಾಸ್ಗಳನ್ನು ಹಾಗೂ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ ಸಂಚಾರವನ್ನು ಗುರುವಾರ ರದ್ದುಗೊಳಿಸಿ ದೇಗುಲದ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. ಸರತಿ ಸಾಲಿನಲ್ಲಿ ನಿಂತಿರುವ ಜನರನ್ನು ಹೊರತುಪಡಿಸಿ ಯಾವುದೇ ಪಾಸ್ ಬಳಸದಂತೆ ಹಾಸನಾಂಬೆ ದೇವಾಲಯ ಆಡಳಿತ ಅಧಿಕಾರಿ ಮಾರುತಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ಮತ್ತೆ ಹಾಸನಾಂಬೆ ದರ್ಶನೋತ್ಸವ ಟಿಕೆಟ್ ಮಾರಾಟ ಪುನರಾರಂಭ ಮಾಡುವುದಾಗಿ ಜಿಲ್ಲಾಡಳಿತ ನಿರ್ಧರಿಸಿದೆ.
ಹೌದು, ಇಲ್ಲಿನ ಆಡಳಿತ ವ್ಯವಸ್ಥೆ ವಿವಿಐಪಿ ಪಾಸ್ಗಳನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪಾಸ್ಗಳನ್ನು ರದ್ದುಗೊಳಿಸಿ ದೇವಸ್ಥಾನ ಮಂಡಳಿ ಪ್ರಾಯಶ್ಚಿತದ ಕ್ರಮ ಕೈಗೊಂಡಿತ್ತು. ಆದರೆ, ಈಗಾಗಲೇ ವಿದೇಶಗಳಿಂದಲೂ ಭಕ್ತರು ಟಿಕೆಟ್ ಬುಕ್ ಮಾಡಿದ್ದು, ಅವರು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಅಲ್ಲಿಂದ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದಾರೆ. ಇದನ್ನು ಮನಗಂಡು ಶೀಘ್ರ ದರ್ಶನ ಮುಂದುವರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಭಕ್ತರ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತೆ 1000ರೂ, 300ರೂ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ. ಟಿಕೆಟ್ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಭಕ್ತರ ಮನವಿ ಹಿನ್ನಲೆ ಟಿಕೆಟ್ ಮಾರಾಟಕ್ಕೆ ಮರು ಚಾಲನೆ ನೀಡಲಾಗಿದೆ. ಗೇಟ್ ನಂ.1ರಲ್ಲಿ 1000ರೂ, ದೇವಾಲಯದ ಹಿಂಭಾಗದಲ್ಲಿ 300ರೂ ಟಿಕೆಟ್ ಮಾರಾಟ ಪ್ರಾರಂಭವಾಗುತ್ತದೆ.
ವಿವಿಐಪಿ, ವಿಐಪಿ ಪಾಸುಗಳಿಗೆ ಮಾತ್ರ ನಿರ್ಬಂಧ ಹೇರಲಾಗಿದೆ. ಗಣ್ಯರ ಪಾಸುಗಳ ದರ್ಶನ ಹೆಚ್ಚಾದ ಹಿನ್ನಲೆ ಪಾಸುಗಳ ವ್ಯವಸ್ಥೆಯನ್ನು ರದ್ದು ಮಾಡಲಾಗಿತ್ತು. ಇದೀಗ ಭಕ್ತರು ಟಿಕೆಟ್ ಖರೀದಿಸಿ ದರ್ಶನ ಮಾಡುತ್ತಿದ್ದಾರೆ.
ಹಾಸನಾಂಬ ದರ್ಶನಕ್ಕಾಗಿ ಪ್ರತಿ ಬಾರಿ ವಿಐಪಿ, ವಿವಿಐಪಿ ಪಾಸ್ಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಹಣ ಪಾವತಿ ಮಾಡಬೇಕು, ನಂತರ ನೇರ ದರ್ಶನವನ್ನು ಮಾಡಬಹುದು. ಆದ್ರೆ ಈ ಬಾರಿ ಬೇಕಾಬಿಟ್ಟಿಯಾಗಿ ವಿವಿಐಪಿ ಪಾಸ್ ಹಂಚಿಕೆ ಮಾಡಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಲಕ್ಷಾಂತರ ಪಾಸ್ ಹಂಚಿಕೆಯಾಗಿದೆ ಎನ್ನಲಾಗಿದ್ದು, ಇದರಿಂದಲೇ ವಿವಿಐಪಿ ಪಾಸ್ ಪಡೆದು ನೇರ ದರ್ಶನದ ಆಸೆಯಲ್ಲಿ ಲಕ್ಷಾಂತರ ಭಕ್ತರು ಹಾಸನಾಂಬ ದರ್ಶನಕ್ಕೆ ಆಗಮಿಸುತ್ತಿದ್ದರು.
ಹಾಸನಾಂಬೆ ದೇವಾಲಯ ಆಡಳಿತ ಮಂಡಳಿಯ ಅವೈಜ್ಞಾನಿಕ ನಡೆಯಿಂದಾಗಿ ಹಾಸನಾಂಬೆ ಭಕ್ತರಿಗೆ ಸಂಕಷ್ಟ ಎದುರಾಗಿತ್ತು. ವಿವಿಐಪಿ ಪಾಸ್ ಪಡೆದು ಹಾಸನಾಂಬ ದರ್ಶನಕ್ಕೆ ಬಂದಿದ್ದಲ್ಲದೇ, ಪೊಲೀಸರ ಜೊತೆಯೂ ಜನ ವಾಗ್ವಾದ ಆರಂಭಿಸಿದ್ದಾರೆ. ಸದ್ಯ ರೊಚ್ಚಿಗೆದ್ದ ಜನರನ್ನು ನಿಯಂತ್ರಣ ಮಾಡಲಾಗದೆ ಪೊಲೀಸರು, ಸಿಬ್ಬಂದಿಗಳು ಪರದಾಡುವಂತಾಗಿತ್ತು.
ಹಾಸನಾಂಬ ದರುಶನಕ್ಕೆ ನೂಕುನುಗ್ಗಲು: ಆಡಳಿತ ಮಂಡಳಿಯಿಂದ ಎಲ್ಲಾ ಪಾಸ್ ರದ್ದು


