ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಜಿಎಸ್ಟಿ ವಿಧಿಸುವ ವಿಚಾರ ರಾಜ್ಯದಲ್ಲಿ ಗೊಂದಲದ ಗೂಡಾಗಿದೆ. ಈ ವಿಚಾರವಾಗಿ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಸಣ್ಣ ವ್ಯಾಪಾರಿಗಳ ನಡುವಿನ ವಿವಾದ ತಾರಕಕ್ಕೇರಿದೆ. ಜಿಎಸ್ಟಿ ಪಾವತಿ ಕಡ್ಡಾಯವೆಂಬ ಇಲಾಖೆ ನೋಟಿಸ್ಗೆ ವಿರೋಧ ವ್ಯಕ್ತಪಡಿಸಿರುವ ಸಣ್ಣ ವ್ಯಾಪಾರಿಗಳು, ಜು.23ರಿಂದ 25ರವರೆಗೆ ವ್ಯಾಪಾರ ವಹಿವಾಟು ಬಂದ್ಗೆ ಕರೆ ನೀಡಿದ್ದಾರೆ.
ಹೀಗಾಗಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಣ್ಣಪುಟ್ಟ ವ್ಯಾಪಾರಿ ಮಳಿಗೆಗಳು ಭಾಗಶಃ ಬಂದ್ ಆಗುವ ಸಾಧ್ಯತೆ ಇದೆ. ಹೀಗಾದಲ್ಲಿ ಹಾಲು, ಬೇಕರಿ ಪದಾರ್ಥಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ನಗದು, ಯುಪಿಐ, ಪಿಒಎಸ್ ಮೆಷಿನ್, ಬ್ಯಾಂಕ್ ಖಾತೆ ಇತರ ಯಾವುದೇ ವಿಧಾನಗಳಿಂದ ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು 20 ಲಕ್ಷ ರೂ.ಗಳನ್ನು ಮೀರಿದರೆ ಅಂತಹ ವರ್ತಕರು ಜಿಎಸ್ಟಿ ನೋಂದಣಿ ಪಡೆಯುವುದು ಕಡ್ಡಾಯ ಎಂದು ಹೇಳಲಾಗುತ್ತಿದೆ. ಆದರೆ, ಜಿಎಸ್ಟಿ ಪಾವತಿಸಬೇಕೆಂಬ ಕಾರಣಕ್ಕೆ ಸಣ್ಣ ಮಾರಾಟಗಾರರು ಯುಪಿಐ ವಹಿವಾಟಿನ ಸ್ಕಾಯನರ್ ತೆಗೆದು ನಗದು ಪಾವತಿಗೆ ಆದ್ಯತೆ ನೀಡುತ್ತಿದ್ದಾರೆ. ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿ 52 ರೂ. ವಸ್ತು ಖರೀದಿಸಿದರೆ 50 ರೂ. ನಗದು ರೂಪದಲ್ಲಿ ಪಡೆದು, 2 ರೂ. ಮಾತ್ರ ಯುಪಿಐ ಮಾಡುವಂತೆ ವ್ಯಾಪಾರಿಗಳು ಒತ್ತಾಯಿಸುತ್ತಿದ್ದಾರೆ.
ಡಿಜಿಟಲ್ ರಶೀದಿಗಳು ಕಾನೂನುಬದ್ಧ ಜಿಎಸ್ಟಿ ಮಿತಿ ದಾಟಿದ 14,000 ವ್ಯಾಪಾರಿಗಳನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಗುರುತಿಸಿದ್ದಾರೆ. ಈ ವ್ಯಾಪಾರಿಗಳು ಜಿಎಸ್ಟಿ ಅಡಿ ನೋಂದಾಯಿಸಿಕೊಂಡಿಲ್ಲ. ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆ ವಿನಾಯಿತಿ ಪಡೆದ ಸರಕು, ಸೇವೆ ಸೇರಿರುತ್ತವೆ. ವರ್ತಕರು ಜಿಎಸ್ಟಿ ಅಡಿ ಸಾಮಾನ್ಯ ನೋಂದಣಿ ಪಡೆದಿದ್ದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ ಸರಕು, ಸೇವೆಗಳಿಗೆ ಅನ್ವಯವಾಗುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲಿನ ಹೂಡುವಳಿ ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿ ನಿವ್ವಳ ತೆರಿಗೆ ಪಾವತಿಸಬೇಕಾಗಿರುತ್ತದೆ. ಆದುದರಿಂದ ಮೌಲ್ಯವರ್ಧನೆಯ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತವು ಅಲ್ಪ ಪ್ರಮಾಣದಲ್ಲಿರುತ್ತದೆ. ನೋಂದಾಯಿತ ವರ್ತಕರು ಇನ್ನುಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ.1 ರಂತೆ ತೆರಿಗೆ ಪಾವತಿಸುವುದು ಕಷ್ಟಕರವಾಗಲಾರದು. ಈಗಾಗಲೇ ಶೇ. 90ರಷ್ಟು ವರ್ತಕರು ರಾಜೀ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವುದರಿಂದ ಉಳಿಕೆ ಶೇ.10ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ತರವಲ್ಲ. ಜಿಎಸ್ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ 5,500ಕ್ಕೂ ಹೆಚ್ಚು ಮಾರಾಟಗಾರರಿಗೆ ನೋಟಿಸ್ಗಳು ಬಂದಿವೆ. ಕೆಲವು ವ್ಯಾಪಾರಿಗಳು ಒಂದೇ ಪ್ಯಾನ್ ಕಾರ್ಡ್ಗೆ 2 ಕೋಟಿ ರೂ.ಗೂ ಹೆಚ್ಚಿನ ಯುಪಿಐ ವಹಿವಾಟು ಲಿಂಕ್ ಮಾಡಿರುವುದನ್ನು ತೋರಿಸಿದ್ದಾರೆ ಎಂದು ವರದಿಯಾಗಿದೆ. ತಮ್ಮನ್ನು ಅನ್ಯಾಯವಾಗಿ ಗುರಿಯಾಗಿಸಲಾಗಿದೆ ಮತ್ತು ಕಿರುಕುಳ, ಸರಕುಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ವ್ಯಾಪಾರಿಗಳು ಆತಂಕಗೊಂಡಿದ್ದಾರೆ.
UPI ವಿಚಾರದಲ್ಲಿ ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ವಾಣಿಜ್ಯ ಇಲಾಖೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ


