BBMP
Loading ...

Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡಿರುವ ಸಾರ್ವಜನಿಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನಿರ್ದಿಷ್ಟ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅತ್ಯಂತ ಕಡ್ಡಾಯವಾಗಿದ್ದ ‘ಸ್ವಾಧೀನಾನುಭವ ಪ್ರಮಾಣ ಪತ್ರ’ (Occupancy Certificate – OC) ಹೊಂದುವುದರಿಂದ ಒಂದು ಬಾರಿಗೆ ವಿನಾಯಿತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಮತ್ತು ಸುಲಭವಾಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ನಿಯಮಗಳ ಅನ್ವಯ ಈ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.

ಹೊಸ ಆದೇಶವು 2400 ಚದರ ಅಡಿ ನಿವೇಶನಗಳಲ್ಲಿ + ಹೇಚ್ಚುವರಿ 20% ಅಂದರೆ 2400+480 =2880 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ಈಗಾಗಲೇ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಮಾತ್ರ ಮತ್ತು ಸ್ಟಿಲ್ಟ್ + 4 ಮೇಲಿನ ಮಹಡಿಗಳು ಅಥವಾ ನೆಲ + 3 ಮೇಲಿನ ಮಹಡಿಗಳಿಗೆ ಅನ್ವಯಿಸುತ್ತದೆ ಹಾಗೂ ದಿನಾಂಕ 31-05-2026 ರ ಒಳಗಾಗಿ ಅರ್ಜಿ ನೊಂದಣಿ ಆಗಿರುವ ಅರ್ಜಿ / ಕಡತಗಳಿಗೆ ತಾತ್ಕಾಲಿಕ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗಿರುವ ಸ್ವಾದಿನಾನುಭವ ಪತ್ರಕ್ಕೆ ಒಂದು ಬಾರಿಯ ವಿನಾಯಿತಿಯನ್ನು ನೀಡಿರುತ್ತಾರೆ.

ಸರ್ಕಾರದ ಹೊಸ ನಿಯಮಗಳ ಪ್ರಕಾರ, ಈ ರಿಯಾಯಿತಿಯು 2400 ಚದರ ಅಡಿವರೆಗಿನ (+20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯಿಸಲಿದೆ. ಈ ವ್ಯಾಪ್ತಿಯಲ್ಲಿ ಬರುವ ಜಿ+3 (ನೆಲಮಹಡಿ + 3 ಅಂತಸ್ತು) ವಸತಿ ಕಟ್ಟಡಗಳು ಅಥವಾ ಪಾರ್ಕಿಂಗ್ ಜೊತೆಗೆ 4 ಮಹಡಿಗಳನ್ನು ಹೊಂದಿರುವ ಕಟ್ಟಡಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಈ ಹಿಂದೆ ಅಂದರೆ 2025ರ ಅಕ್ಟೋಬರ್‌ನಲ್ಲಿ ಹೊರಡಿಸಲಾಗಿದ್ದ ಆದೇಶದಲ್ಲಿ ಕೇವಲ 1200 ಚ.ಅಡಿವರೆಗಿನ ನಿವೇಶನಗಳ ನೆಲ+2 ಅಥವಾ +3 ಅಂತಸ್ತುಗಳ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಇತ್ತು. ಈಗ ಈ ಮಿತಿಯನ್ನು 2400 ಚದರ ಅಡಿಗೆ ಹೆಚ್ಚಿಸಿರುವುದರಿಂದ ಸಹಸ್ರಾರು ಜನರಿಗೆ ಅನುಕೂಲವಾಗಲಿದೆ.

ಆದಾಗ್ಯೂ, ಈ ಸೌಲಭ್ಯವನ್ನು ಪಡೆಯಲು ಸರ್ಕಾರ ಕೆಲವು ಕಡ್ಡಾಯ ಷರತ್ತುಗಳನ್ನು ವಿಧಿಸಿದೆ. ಈ ಯೋಜನೆಯಡಿ ವಿನಾಯಿತಿ ಪಡೆಯಲು ಕಟ್ಟಡದ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿರಬೇಕು ಮತ್ತು ವಿದ್ಯುತ್‌ ಸಂಪರ್ಕಕ್ಕಾಗಿ ದಿನಾಂಕ: 31-05-2026ರ ಒಳಗಾಗಿ ಅರ್ಜಿಯನ್ನು ಸಲ್ಲಿಸಿರಬೇಕಿರುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ನಿಯಮಾವಳಿಗಳ ಪ್ರಕಾರ ಕಟ್ಟಡ ಅರ್ಹವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳ (ಬೆಸ್ಕಾಂ) ಅಧಿಕಾರಿಗಳು ಸ್ಥಳ ತನಿಖೆ ನಡೆಸಲಿದ್ದಾರೆ. ಈ ವೇಳೆ ಇಲಾಖೆಯ ವತಿಯಿಂದ ಸದರಿ ಕಟ್ಟಡದ ಭಾವಚಿತ್ರವನ್ನು ತೆಗೆದು, ದಾಖಲಿಸಿಕೊಂಡ ನಂತರವಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಮಹತ್ವದ ಆದೇಶವನ್ನು (ಸಂಖ್ಯೆ: ನಅಇ 334 ಎಂಎನ್‌ಯು 2025 (ಭಾಗ)) ದಿನಾಂಕ: 05-06-2026 ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಲಕ್ಷ್ಮೀಸಾಗರ್ ಎನ್.ಕೆ. ಅವರು ಅಧಿಕೃತವಾಗಿ ಹೊರಡಿಸಿದ್ದಾರೆ. ದಿನಾಂಕ: 03-06-2026 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ310/2026 ರ ನಿರ್ಣಯದನ್ವಯ ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಈ ನಿಯಮವನ್ನು ಜಾರಿಗೆ ತರಲಾಗಿದೆ. ಸದ್ಯ ಈ ಆದೇಶದ ಪ್ರತಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳಿಗೆ ಮುಂದಿನ ಕ್ರಮಗಳಿಗಾಗಿ ರವಾನಿಸಲಾಗಿದೆ.

Leave a Reply

Your email address will not be published. Required fields are marked *