BBMP
Loading ...

KJ George

ಬೆಂಗಳೂರು: ಹೊಸ ವಿದ್ಯುತ್‌ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್‌ ಮೀಟರ್‌ ಅಳವಡಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಇದೀಗ ರಿಮ್ಯಾಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಂ (ಆರ್‌ಡಿಎಸ್‌ಎಸ್) ಮೂಲಕ ಎಲ್ಲ ಮನೆಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಸುವ ಚಿಂತನೆ ನಡೆಸಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಇಡಲೂ ಸಿದ್ಧತೆ ನಡೆಸುತ್ತಿದೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್‌, ”ಆರ್‌ಡಿಎಸ್‌ಎಸ್ ಯೋಜನೆಯನ್ನು ಕೇಂದ್ರ ಸರ್ಕಾರ ಇನ್ನೂ ಎರಡು ವರ್ಷ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಂತ-ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಆದರೆ, ಯೋಜನೆ ಬಗ್ಗೆ ಸಂಪುಟ ನಿರ್ಧಾರ ಕೈಗೊಳ್ಳಲಿದೆ. ಇದು ಜಾರಿಯಾದರೆ, ಎಲ್ಲ ಗ್ರಾಹಕರಿಗೂ ಸ್ಮಾರ್ಟ್ ಮೀಟರ್ ಬರಲಿದೆ” ಎಂದು ಹೇಳಿದರು.

ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆಯೇ ಎಂಬ ಪ್ರಶ್ನೆಗೆ, ”ಈ ಸಂಬಂಧದ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿದೆ. ಸಂಪುಟಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ” ಎಂದರು.

ಶೇ.2ರಷ್ಟು ಸೆಸ್: ”ಸರ್ಕಾರದ ಅಂಗ ಸಂಸ್ಥೆಗಳು ಸುಮಾರು 15 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ಆರ್‌ಡಿಎಸ್‌ಎಸ್ ಇದುವರೆಗೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಈಗ ಕೇಂದ್ರ ಇಂಧನ ಸಚಿವರ ನಿರ್ದೇಶನದ ಮೇರೆಗೆ ಆರಂಭದಲ್ಲಿ ಸರ್ಕಾರಿ ಕಚೇರಿಗಳು, ನಂತರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ಮಾರ್ಟ್ ಮೀಟರ್ ಜಾರಿಗೆ ಉದ್ದೇಶಿಸಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಶೇ.2ರಷ್ಟು ಸೆಸ್ ವಿಧಿಸಿ, ಆ ಮೂಲಕ ಬಾಕಿ ಸಂಗ್ರಹಿಸುವ ಚಿಂತಿಸಲಾಗಿದೆ” ಎಂದು ಹೇಳಿದರು.

ಪಶ್ಚಿಮಘಟ್ಟದಲ್ಲಿ ಬರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ, ”ಈಗ ಶರಾವತಿ ವಿದ್ಯುದಾಗರದಿಂದ ಸಾವಿರ ಮೆ.ವಾ. ವಿದ್ಯುತ್ ಉತ್ಪಾದನೆ ಆಗುತ್ತಿದೆ. ಪಂಪ್ಡ್ ಸ್ಟೋರೇಜ್ ಅನುಷ್ಠಾನಗೊಂಡರೆ ಉತ್ಪಾದನೆ ಸಾಮರ್ಥ್ಯ ಮೂರುಪಟ್ಟು ಅಂದರೆ ಮೂರು ಸಾವಿರ ಮೆ.ವಾ. ಆಗಲಿದೆ. ಆದರೆ, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುವುದು ಸರಿ ಅಲ್ಲ” ಎಂದರು.

ಪ್ರಸರಣ ಮಾರ್ಗ ಸಾಮರ್ಥ್ಯ 50 ಮೆ.ವ್ಯಾಟ್‌ಗೆ ಹೆಚ್ಚಿಸಲು ಯೋಜನೆ: ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ”ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗದ ಸಾಮರ್ಥ್ಯವನ್ನು 35 ಸಾವಿರ ಮೆ.ವಾ.ಗೆ ಹೆಚ್ಚಿಸುವ ಗುರಿ ಇತ್ತು. ಈಗ ಅದನ್ನು 50 ಸಾವಿರ ಮೆ.ವಾ. ಸಾಮರ್ಥ್ಯಕ್ಕೆ ತಲುಪಿಸುವ ಗುರಿಯೊಂದಿಗೆ ಯೋಜನೆ ರೂಪಿಸುತ್ತಿದ್ದೇವೆ. ಈ ಸಂಬಂಧ ಏಪ್ರಿಲ್‌ನಲ್ಲೇ ಅಧ್ಯಯನ ನಡೆದಿದ್ದು, ರಾಜ್ಯದ ಉತ್ತರ, ದಕ್ಷಿಣ ಮತ್ತು ಕೇಂದ್ರೀಯ ಭಾಗದಲ್ಲಿ ಮೂರು 765 ಕೆ.ವಿ. ಸಾಮರ್ಥ್ಯದ ಉಪಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್ ಉಪಸ್ಥಿತರಿದ್ದರು.

ದಂಡದ ಮೊತ್ತ ಕಡಿಮೆ ಮಾಡಲು 3 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಚೆಸ್ಕಾಂ ಎಇಇ!

Leave a Reply

Your email address will not be published. Required fields are marked *