ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಕೃಷಿ ಭೂಮಿ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊನೆಗೂ ರೈತರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ. 1777 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಭೂಮಿ ಸ್ವಾಧೀನಕ್ಕೆ ರೈತರ ತೀವ್ರ ವಿರೋಧದ ಹಿನ್ನಲೆಯಲ್ಲಿ ಎರಡು-ಮೂರು ಸುತ್ತಿನ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಕೊನೆಗೂ ರೈತರ ಪರವಾದ ತೀರ್ಮಾನ ಕೈಗೊಂಡಿದೆ. ಭೂಮಿ ಸ್ವಾಧೀನವನ್ನು ಕೈಬಿಡುವ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಇಂದು ಪ್ರಕಟಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆಯನ್ನ ಕೈಬಿಟ್ಟಿದ್ದೇವೆ. ಆದರೆ ರೈತರು ಸ್ವಯಂ ಪ್ರೇರಿತರಾಗಿ ಭೂಮಿಯನ್ನು ಕೊಡಲು ಮುಂದೆ ಬಂದರೆ ಒಪ್ಪಂದದ ಮೇಲೆ ತೆಗೆದುಕೊಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಸರ್ಕಾರದ ತೀರ್ಮಾನ ಪ್ರಕಟಿಸಿದ್ದಾರೆ. ಈ ಮೊದಲು ರಾಜ್ಯ ಸರ್ಕಾರ ಡಿಫೆನ್ಸ್ ಕಾರಿಡಾರ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ ರೈತರ 1,777 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ಕೆಐಎಡಿಬಿಯಿಂದ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಕೆಐಎಡಿಬಿ ಕೈಬಿಡಲಿದೆ.
ರಾಜ್ಯ ಸರ್ಕಾರದ ಭೂಮಿ ಸ್ವಾಧೀನವನ್ನು ರೈತರು ಒಪ್ಪಿಕೊಂಡರೆ ಅದನ್ನು ಯಾರು ತಡೆಯೋಕೆ ಆಗುವುದಿಲ್ಲ. ನಮಗೆ ಕೈಗಾರಿಕಾ ವಲಯ ಬೆಳೆಯಬೇಕು. ರೈತರಿಗೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ರೈತರು ಜಮೀನು ನೀಡಲು ಮುಂದೆ ಬರುತ್ತಾರೋ ಅವರ ಭೂಮಿಯನ್ನ ಮಾತ್ರ ಪಡೆಯುತ್ತೇವೆ. ರೈತರು ವ್ಯವಸಾಯ ಮಾಡುತ್ತಿರುವ ಕಾರಣ ಈಗ ಭೂಸ್ವಾಧೀನ ಕೈಬಿಟ್ಟಿದ್ದೇವೆ. ರೈತರ ಜಮೀನು ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದೇ ತೀರ್ಮಾನ ಮುಂದೆ ಎಲ್ಲಾ ಕಡೆಗೂ ಅನ್ವಯವಾಗೋದಿಲ್ಲ ಎನ್ನುವುದನ್ನು ಕೂಡ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರೈತರು ಸ್ವಯಂಪ್ರೇರಣೆಯಿಂದ ಮುಂದೆ ಬಂದಲ್ಲಿ ಹೆಚ್ಚಿನ ಪರಿಹಾರ ಅಥವಾ ಅಭಿವೃದ್ಧಿ ಮಾಡಿದ ನಿವೇಶನ ಪಡೆಯಬಹುದು. ಒಂದು ವೇಳೆ ರೈತರು, ಭೂಮಿ ನೀಡಲು ಒಪ್ಪದೇ ಇದ್ದರೆ ಅಂಥ ಭೂಮಿಯನ್ನ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಮಾಡಿಕೊಳ್ಳಬೇಕೆ ಬೇಡವೇ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕೊನೆಯ ಹಂತದ ಸಭೆ ನಡೆದಿತ್ತು. ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಜೊತೆಗೆ ರೈತರ ಪರ ಹೋರಾಟ ನಡೆಸಿದ್ದ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ವರಲಕ್ಷ್ಮಿ, ನಟ ಪ್ರಕಾಶ್ ರಾಜ್, ರೈತ ಸಂಘದ ಬಡಗಲಾಪುರ ನಾಗೇಂದ್ರ ಸೇರಿ ದೇವನಹಳ್ಳಿ ಭಾಗದ ರೈತ ಮುಖಂಡರು ಭಾಗಿಯಾಗಿದ್ದರು.
ಭೂಮಿ ಸ್ವಾಧೀನ ಕೈ ಬಿಡುವ ಬಗ್ಗೆ ಈಗಾಗಲೇ ಕಾನೂನು ತಜ್ಞರ ಸಲಹೆಯನ್ನು ಸಿಎಂ ಸಿದ್ದರಾಮಯ್ಯ ಪಡೆದುಕೊಂಡಿದ್ದರು. ಕಳೆದ ಸಭೆಯಲ್ಲಿ ಭೂಮಿ ಸ್ವಾಧೀನ ಕೈಬಿಡಲು ಕೆಲವೊಂದು ಕಾನೂನು ತೊಡಕುಗಳಿವೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ, ಜುಲೈ 15 ರಂದು ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಕಾನೂನಿನ ತೊಡಕು ಇದ್ದರೆ ಅದನ್ನು ಬಗೆಹರಿಸಿಕೊಡಲು ನಾನು ಸಿದ್ಧ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದ್ದರು. ನಿವೃತ್ತ ಜಸ್ಟೀಸ್ ಗೋಪಾಲಗೌಡ ಕೂಡ ರೈತರ ಪರವಾಗಿ ಹೋರಾಟದ ಅಖಾಡಕ್ಕಿಳಿದಿದ್ದರು. ಅಂತಿಮವಾಗಿ ಈಗ ರಾಜ್ಯ ಸರ್ಕಾರ ರೈತರ ಹೋರಾಟಗಾರರ ಹೋರಾಟಕ್ಕೆ ಮಣಿದಿದೆ.
ಬೆಸ್ಕಾಂ ಇಂಜಿನಿಯರ್ ಯತೀಶ್ ಲಂಚ ಪ್ರಕರಣ: ತನಿಖೆಗೆ ತಡೆನೀಡಲು ಹೈಕೋರ್ಟ್ ನಿರಾಕರಣೆ


