BBMP
Loading ...

RCB

Greater Bengaluru News9: 2026 ರ ಐಪಿಎಲ್ (IPL 2026) ಸಮೀಪಿಸುತ್ತಿರುವ ಬೆನ್ನಲ್ಲೇ ಆರ್​ಸಿಬಿ (RCB) ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು (5 ಪಂದ್ಯಗಳು) ಆಡಲು ಒಪ್ಪಿಗೆ ಸೂಚಿಸಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯವು ಕೂಡ ಬೆಂಗಳೂರಿನಲ್ಲೇ ನಡೆಯಲಿದೆ. ವಾಸ್ತವವಾಗಿ ಕಳೆದ ಆವೃತ್ತಿಯ ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯುವುದು ವಾಡಿಕೆ. ಅದರಂತೆ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಉದ್ಘಾಟನಾ ಪಂದ್ಯವನ್ನು ಆಡಬೇಕಿತ್ತು. ಆದರೆ ಈ ಬಾರಿ ಹಾಲಿ ಚಾಂಪಿಯನ್ ಆರ್​ಸಿಬಿ, ಕೆಕೆಆರ್ ತಂಡವನ್ನು ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿದೆ ಎಂದು ವರದಿಯಾಗಿದೆ.

ಚಿನ್ನಸ್ವಾಮಿಗೆ ಮತ್ತೆ ಮರಳಿದ ಕ್ರಿಕೆಟ್
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಳೆದ ವರ್ಷ ನಡದಿದ್ದ ದುರಂತದ ಬಳಿಕ ಬೆಂಗಳೂರಿನಲ್ಲಿ ಒಂದೇ ಒಂದು ಕ್ರಿಕೆಟ್ ಪಂದ್ಯವೂ ನಡೆದಿರಲಿಲ್ಲ. ಹಾಗೆಯೇ ರಾಜ್ಯ ಸರ್ಕಾರ ಮತ್ತು ಆರ್​ಸಿಬಿ ಫ್ರಾಂಚೈಸಿ ನಡುವಿನ ಜಟಾಪಟಿಗಳಿಂದ ಈ ಬಾರಿ ಆರ್​ಸಿಬಿ ತನ್ನ ತವರು ಪಂದ್ಯಗಳನ್ನು ಬೇರೆಡೆ ಆಡಲಿದೆ ಎಂದು ವರದಿಗಳಾಗಿದ್ದವು. ಇದಕ್ಕೆ ಪೂರಕವಾಗಿ ಆರ್​ಸಿಬಿ ಫ್ರಾಂಚೈಸಿ ಕೂಡ ಬೇರೆ ಸ್ಥಳಗಳ ಹುಡುಕಾಟದಲ್ಲಿತ್ತು. ಆದರೀಗ ಆರ್​ಸಿಬಿ ಫ್ರಾಂಚೈಸಿ ಎಲ್ಲಾ ಬೇಡಿಕೆಗಳು ಹಾಗೂ ರಾಜ್ಯ ಸರ್ಕಾರದ ಎಲ್ಲಾ ಆದೇಶಗಳನ್ನು ಕೆಎಸ್​ಸಿಎ ಸಂಪೂರ್ಣವಾಗಿ ಜಾರಿಗೆ ತರುವ ಕೆಲಸ ಮಾಡುತ್ತಿರುವುದರಿಂದ ಚಿನ್ನಸ್ವಾಮಿಗೆ ಮತ್ತೆ ಕ್ರಿಕೆಟ್ ಮರಳಿದೆ.

ಬೆಂಗಳೂರಿನಲ್ಲಿ 5 ಪಂದ್ಯಗಳು
2026 ರ ಐಪಿಎಲ್ ವೇಳಾಪಟ್ಟಿ ಪ್ರಸ್ತುತ ಪ್ರಕಟವಾಗಿಲ್ಲ. ಆದಾಗ್ಯೂ ಈ ಬಾರಿಯ ಐಪಿಎಲ್ ಮಾರ್ಚ್​ 28 ರಿಂದ ಆರಂಭವಾಗಲಿದೆ ಎಂದು ವರದಿಯಾಗಿದೆ. ಅದರಂತೆ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಕೆಕೆಆರ್​ ತಂಡಗಳು ಮುಖಾಮುಖಿಯಾಗಲಿವೆ ಎಂದು ವರದಿಯಾಗಿದೆ. ಇದರ ಜೊತೆಗೆ ಆರ್​ಸಿಬಿ ತವರು ಪಂದ್ಯಗಳ ಲೆಕ್ಕದಲ್ಲಿ ಐದು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಿದ್ದು, ಉಳಿದ ಎರಡು ಪಂದ್ಯಗಳನ್ನು ಛತ್ತೀಸ್​ಗಢದ ರಾಯ್​ಪುರದಲ್ಲಿ ಆಡಲಿದೆ ಎಂದು ಹೇಳಲಾಗುತ್ತಿದೆ. ಇದರರ್ಥ ಬೆಂಗಳೂರು ಹೊರತಾಗಿ ರಾಯ್​ಪುರ ಕೂಡ ಆರ್​ಸಿಬಿಯ ಎರಡನೇ ತವರು ಮೈದಾನವಾಗಲಿದೆ.

ಆರ್​ಸಿಬಿ ಸಿಎಒ ಹೇಳಿದ್ದಿದು
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಆರ್​ಸಿಬಿ ಸಿಇಒ ರಾಜೇಶ್ ಮೆನನ್, ‘ಚಿನ್ನಸ್ವಾಮಿ ಕ್ರೀಡಾಂಗಣವು ನಮಗೆ ತವರು ಮೈದಾನಕ್ಕಿಂತ ಹೆಚ್ಚಿನದು. ತಂಡವಾಗಿ ನಮ್ಮ ಗುರುತು ನಿಜವಾಗಿಯೂ ಜೀವಂತವಾಗುವ ಸ್ಥಳ ಇದು. ಬೆಂಗಳೂರಿಗೆ ನಮ್ಮ ಅಭಿಮಾನಿಗಳು ತರುವ ಶಕ್ತಿಯು ನಮ್ಮ ಆಟಗಾರರಿಗೆ ಯಾವಾಗಲೂ ಪ್ರೇರಕ ಶಕ್ತಿಯಾಗಿದೆ, ಆಟದ ಪ್ರತಿಯೊಂದು ಹಂತದಲ್ಲೂ ಅವರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಅಭಿಮಾನಿಗಳು ಬೇಷರತ್ತಾಗಿ ನಮ್ಮೊಂದಿಗೆ ನಿಂತಿದ್ದು, ಅವರು ತಮ್ಮ ತಂಡವು ಮನೆಯಲ್ಲಿ ಆಡುವುದನ್ನು ವೀಕ್ಷಿಸುವ ಅವಕಾಶಕ್ಕೆ ಅರ್ಹರು.

ರಾಜ್ಯ ಸರ್ಕಾರ, ಕೆಎಸ್​ಸಿಎ ಜೊತೆಗಿನ ಚರ್ಚೆಗಳು ಮತ್ತು ಅನುಮತಿಗಳ ಕುರಿತು ಅಗತ್ಯವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಆರ್‌ಸಿಬಿ ಬೆಂಗಳೂರಿನಲ್ಲಿ ಐದು ಪಂದ್ಯಗಳನ್ನು ಆಡಲಿದೆ ಎಂದು ದೃಢೀಕರಿಸಲು ನಮಗೆ ಸಂತೋಷವಾಗಿದೆ. ಇದನ್ನು ಸಾಧ್ಯವಾಗಿಸುವಲ್ಲಿ ಬೆಂಬಲ ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ, ಕೆಎಸ್‌ಸಿಎ ಮತ್ತು ಕರ್ನಾಟಕ ಪೊಲೀಸರಿಗೆ ನಾವು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದಿದ್ದಾರೆ.

Leave a Reply

Your email address will not be published. Required fields are marked *