BBMP
Loading ...

GBA

Greater Bengaluru News9 : ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ರಸ್ತೆಬದಿಯ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಗಳಿಂದ ನಿಂತಿರುವ ವಾರಸುದಾರರಿಲ್ಲದ ಹಳೇ ವಾಹನಗಳ ತೆರವಿಗೆ ಬೃಹತ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.

ನಗರದಾದ್ಯಂತ ವಿಶೇಷ ಸ್ವಚ್ಛತಾ ಆಂದೋಲನವನ್ನು ಕೈಗೊಳ್ಳಲು ಜಿಬಿಎ ಸಿದ್ಧತೆ ನಡೆಸಿದ್ದು, ಇನ್ನೊಂದು ವಾರದೊಳಗೆ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಜಿಬಿಎ ಹಿರಿಯ ಅಧಿಕಾರಿಗಳು ಹಾಗೂ ನಗರದ ಐದು ಕಾರ್ಪೊರೇಷನ್‌ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಯೋಜನೆ ರೂಪಿಸಿದ್ದಾರೆ.

ರಸ್ತೆ ಬದಿ ತ್ಯಾಜ್ಯ, ಬೆಳೆದಿರುವ ಕಳೆ ಗಿಡಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ನಿರ್ಮಾಣ ಸಾಮಗ್ರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡ ಬಳಿಕವೂ ಸ್ಥಳದಲ್ಲೇ ಉಳಿದಿರುವ ಕಬ್ಬಿಣದ ಸಾಮಗ್ರಿಗಳು ಹಾಗೂ ಉಪಕರಣಗಳನ್ನು ತೆರವುಗೊಳಿಸುವಂತೆ ಬಿಎಂಆರ್‌ಸಿಎಲ್, ಕೆ-ರೈಡ್ ಮತ್ತು ರೈಲ್ವೆ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ.

ನಗರದಲ್ಲಿ ಒಟ್ಟು 1,518 ವಾರಸುದಾರರಿಲ್ಲದ ವಾಹನಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಅವುಗಳನ್ನು ಜಪ್ತಿ ಮಾಡುವ ಕಾರ್ಯ ನಡೆಯಲಿದೆ. ಸೆಂಟ್ರಲ್ ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 403, ಪೂರ್ವ ವಲಯದಲ್ಲಿ 92, ಉತ್ತರ ವಲಯದಲ್ಲಿ 209, ದಕ್ಷಿಣ ವಲಯದಲ್ಲಿ 383 ಹಾಗೂ ಪಶ್ಚಿಮ ವಲಯದಲ್ಲಿ 399 ವಾಹನಗಳು ಪತ್ತೆಯಾಗಿವೆ.

“ಬೆಂಗಳೂರನ್ನು ಸಂಪೂರ್ಣ ಸ್ವಚ್ಛ ನಗರವನ್ನಾಗಿ ಮಾಡುವುದು ನಮ್ಮ ಉದ್ದೇಶ. ಕಟ್ಟಡ ತ್ಯಾಜ್ಯ ಬಿದ್ದ ಸ್ಥಳಗಳಲ್ಲಿ ಕಸದ ರಾಶಿ ಹೆಚ್ಚಾಗುತ್ತದೆ. ಈ ಸಮಸ್ಯೆ ಹೊರ ವಲಯಗಳಲ್ಲಿ ಹೆಚ್ಚು ಕಂಡುಬರುತ್ತಿದೆ” ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *