Greater Bengaluru News9 : ಬೆಂಗಳೂರು ನಗರದಲ್ಲಿರುವ 1.03 ಕೋಟಿ ಮತದಾರರ ಪೈಕಿ ಸುಮಾರು 47 ಲಕ್ಷ (ಶೇ 46ರಷ್ಟು) ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಇದು ಜಿಬಿಎ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಸುಪ್ರೀಂಕೋರ್ಟ್ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ನಗರದ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ. ಆದರೆ, ನಗರದ ಅರ್ಧಕ್ಕೂ ಹೆಚ್ಚು ಮತದಾರರು SIR ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೊರಗುಳಿದವರ ಪಟ್ಟಿಯಲ್ಲಿ ಸೇರಿರುವುದರಿಂದ ಐದು ನಗರ ಪಾಲಿಕೆಗಳ ಅಸ್ತಿತ್ವಕ್ಕೆ ಕುಂದು ತರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆಗೆ ತಿದ್ದುಪಡಿ ತರಲು ಕಾನೂನು ಪ್ರಕ್ರಿಯೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
ಮೂಲಗಳ ಪ್ರಕಾರ, ಐದು ನಗರ ಪಾಲಿಕೆಗಳ ಪೈಕಿ ಎರಡು-ಮೂರು ಪಾಲಿಕೆಗಳನ್ನಷ್ಟೇ ರಚಿಸಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಸರ್ಕಾರ ಇದೇ ಅಧಿವೇಶನ ಅಥವಾ ಚಳಿಗಾಲದ ಅಧಿವೇಶನದಲ್ಲಿ ಜಿಬಿಎಗೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲು ಉದ್ದೇಶಿಸಿದೆ. ಆನಂತರ ಸುಪ್ರೀಂಕೋರ್ಟ್‌ಗೂ ಪಾಲಿಕೆಗಳ ಪುನರ್‌ರಚನೆ ವಿಷಯವನ್ನೇ ಮುಂದಿಟ್ಟುಕೊಂಡು ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆ ಮುಂದೂಡಿಕೆಗೆ ಮತ್ತೆ ಕಾಲಾವಕಾಶ ಕೋರಲು ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ, ಜಿಬಿಎ ಚುನಾವಣೆ ಹಾದಿ ಮತ್ತೆ ಅನಿಶ್ಚಿತತೆಯತ್ತ ಸಾಗಿದೆ.
ಜಿಬಿಜಿಎಗೆ ತಿದ್ದುಪಡಿ ತಂದು ಹೊಸದಾಗಿ ನಗರ ಪಾಲಿಕೆಗಳನ್ನು ರಚಿಸಲು, ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ನಂತರ ಮೀಸಲಾತಿ ನಿಗದಿ ಮಾಡಬೇಕು. ಎಲ್ಲಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಆರು ತಿಂಗಳಾದರೂ ಬೇಕಾಗುತ್ತದೆ. ಹೀಗಾಗಿ, ನಗರ ಪಾಲಿಕೆಗಳಿಗೆ ಡಿಸೆಂಬರ್‌ಗೆ ಚುನಾವಣೆ ನಡೆಯುವುದು ಬಹುತೇಕ ಅನುಮಾನವಾಗಿದೆ.
ರಾಜಧಾನಿಯಲ್ಲಿ ಅರ್ಧಕ್ಕೂ ಹೆಚ್ಚು ಮತದಾರರು ಔಟ್
ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಗರದಲ್ಲಿ 1.03 ಕೋಟಿ ಮತದಾರರಿದ್ದರು. ಆದರೆ, ಎಸ್‌ಐಆರ್ ಪ್ರಕ್ರಿಯೆಯಡಿ ಮತಪಟ್ಟಿಯಿಂದ ಹೊರಗುಳಿದವರ ಪಟ್ಟಿಯಲ್ಲಿ(ಎಎಸ್‌ಡಿಡಿಒ) ಅರ್ಧಕ್ಕೂ ಹೆಚ್ಚು ಮತದಾರರ ಹೆಸರಿರುವುದು ಐದು ನಗರಪಾಲಿಕೆಗಳ ಅಸ್ತಿತ್ವಕ್ಕೆ ಕುತ್ತು ತಂದಿದೆ.
ರಾಜ್ಯದ ಇತರೆಡೆಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಅರ್ಧದಷ್ಟು ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗುವ ಭೀತಿ ಎದುರಾಗಿದೆ. ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 1.03 ಕೋಟಿ ಮತದಾರರಿದ್ದು, 47.15 ಲಕ್ಷಕ್ಕೂ ಹೆಚ್ಚು ಎಎಸ್‌ಡಿಡಿಒ ಮತದಾರರು ಪತ್ತೆಯಾಗಿದ್ದಾರೆ. ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಜಿಬಿಎ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದಲ್ಲಿ ಶೇ.45.39ರಷ್ಟು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ನಾಲ್ಕು ದಿಕ್ಕುಗಳಿಗೆ ಪೂರಕವಾಗಿ ಹಾಗೂ ಕೇಂದ್ರ ಎಂದು ಪರಿಗಣಿಸಿ ಒಟ್ಟು ಐದು ನಗರ ಪಾಲಿಕೆಗಳಾಗಿರುವುದನ್ನು ರದ್ದು ಮಾಡಿ, ಅವುಗಳ ವ್ಯಾಪ್ತಿಯಲ್ಲೇ ಉತ್ತರ ಹಾಗೂ ದಕ್ಷಿಣ ನಗರ ಪಾಲಿಕೆ ಎಂದು ರಚಿಸಲಾಗುತ್ತದೆ. 28 ಕ್ಷೇತ್ರಗಳನ್ನು ಸಮನಾಗಿ ಹಂಚಿಕೆ ಮಾಡಿ, ತಲಾ 100 ವಾರ್ಡ್‌ಗಳನ್ನು ಎರಡು ನಗರ ಪಾಲಿಕೆಗಳಿಗೆ ನಿಗದಿ ಮಾಡಲಾಗುತ್ತದೆ.
ಒಂದು ವೇಳೆ, ಈಗಿನ ಜಿಬಿಎ ವ್ಯಾಪ್ತಿಯನ್ನು ನಗರ ಜಿಲ್ಲೆಯಾದ್ಯಂತ ವಿಸ್ತರಿಸಿದರೆ ಆಗ ಮೂರು ನಗರ ಪಾಲಿಕೆಗಳನ್ನು ರಚಿಸಬಹುದು. ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಪ್ರಕಾರ, ಗರಿಷ್ಠ ಏಳು ನಗರ ಪಾಲಿಕೆಗಳನ್ನು ರಚಿಸಬಹುದಾಗಿದೆ. ಯಾವ ಸಂದರ್ಭದಲ್ಲಾದರೂ ಸರ್ಕಾರ ಅದನ್ನು ಬದಲಾಯಿಸಬಹುದಾಗಿದೆ. ಒಂದು ಕೋಟಿ ಮತದಾರರಿರುವ ನಗರಕ್ಕೆ ಕೇವಲ ಒಂದು ಬಿಬಿಎಂಪಿಯಿಂದ ಉತ್ತಮ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬ ನೆಪದಲ್ಲಿಅದನ್ನು ರದ್ದು ಮಾಡಿದ್ದ ಸರ್ಕಾರ, ಜಿಬಿಎ ರಚಿಸಿ ಐದು ನಗರ ಪಾಲಿಕೆಗಳನ್ನು 2025ರ ಸೆಪ್ಟೆಂಬರ್ 2ರಂದು ಸ್ಥಾಪನೆ ಮಾಡಿತ್ತು. ಇದೀಗ ಒಂದು ವರ್ಷ ಕಳೆಯುವುದರೊಳಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಧಕ್ಕೂ ಹೆಚ್ಚು ಮತದಾರರು ಹೊರಗುಳಿಯುವುದರಿಂದ ಐದು ನಗರ ಪಾಲಿಕೆಗಳ ಅಸ್ತಿತ್ವಕ್ಕೆ ಕುಂದು ಬಂದಂತಾಗಿದೆ.
ಪಾಲಿಕೆ ಪುನರ್ರಚನೆ ಬಗ್ಗೆ ಸಚಿವರು ಪ್ರತಿಕ್ರಿಯೆ
ನಗರದ ಐದು ಪಾಲಿಕೆಗಳನ್ನು ಎರಡು ಅಥವಾ ಮೂರು ರಚಿಸುವ ಕುರಿತು ತೀರ್ಮಾನಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ 1.03 ಕೋಟಿ ಮತದಾರರಿದ್ದರು. ಹೀಗಾಗಿ, ಐದು ನಗರ ಪಾಲಿಕೆಗಳನ್ನು ರಚಿಸಲಾಗಿತ್ತು. ಇದೀಗ ನಗರದ ಮತದಾರರ ಸಂಖ್ಯೆ 55 ಲಕ್ಷಕ್ಕೆ ಇಳಿಯಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಗಳ ಪುನರ್ರಚನೆ ಮಾಡುವುದು ಸರ್ಕಾರದ ತೀರ್ಮಾನಕ್ಕೆ ಬಿಟ್ಟದ್ದು. ಎರಡು ಅಥವಾ ಮೂರು ಪಾಲಿಕೆ ರಚಿಸುವುದು ಕೂಡ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.
ನಗರದಲ್ಲಿದ್ದ ಒಟ್ಟು ಮತದಾರರ ವಿವರ
- ಬೆಂಗಳೂರು ದಕ್ಷಿಣ: 21.4 ಲಕ್ಷ
- ಬೆಂಗಳೂರು ಕೇಂದ್ರ: 18.9 ಲಕ್ಷ
- ಬೆಂಗಳೂರು ಉತ್ತರ: 23.3 ಲಕ್ಷ
- ಬೆಂಗಳೂರು ನಗರ: 402 ಲಕ್ಷ
- ಒಟ್ಟು: 1.03 ಕೋಟಿ
SIR ಬಳಿಕ ಪತ್ತೆಯಾದ ಎಎಸ್‌ಡಿಡಿಒ ಮತದಾರರು (ಶೇಕಡಾವಾರು)
- ಬೆಂಗಳೂರು ದಕ್ಷಿಣ: 49.6 (10.6)
- ಬೆಂಗಳೂರು ಕೇಂದ್ರ: 45.8 ( 8.6)
- ಬೆಂಗಳೂರು ಉತ್ತರ: 45.3 (10.5)
- ಬೆಂಗಳೂರು ನಗರ: 42.9 (17.2)


