BBMP
Loading ...

Mlc (1)

Greater Bengaluru News9 : ವಿಧಾನ ಪರಿಷತ್ (MLC) ನೂತನ ಸದಸ್ಯರಾದ ಚಿಕ್ಕಮಗಳೂರಿನ ಶ್ರೀಮತಿ ಗಾಯತ್ರಿ ಶಾಂತೆ ಗೌಡ ಅವರ ಅಧಿಕೃತ ಪದಗ್ರಹಣ ಸಮಾರಂಭವು ಬೆಂಗಳೂರಿನ ವಿಧಾನಸೌಧದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ. ಈ ವಿಶೇಷ ಸಮಾರಂಭದ ಮೂಲಕ ಅವರು ಅಧಿಕೃತವಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಈ ಕಾರ್ಯಕ್ರಮವು 2026ನೇ ಸಾಲಿನ ಆಗಸ್ಟ್ 3ನೇ ತಾರೀಕು, ಅಂದರೆ ಸೋಮವಾರದಂದು ಬೆಳಿಗ್ಗೆ 11:30 ಗಂಟೆಗೆ ನಿಗದಿಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಮತ್ತು ಐತಿಹಾಸಿಕ ಸ್ಥಳವಾದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಈ ಮಹತ್ವದ ಸಮಾರಂಭಕ್ಕೆ ವೇದಿಕೆಯಾಗಲಿದೆ.

ಚಿಕ್ಕಮಗಳೂರು ಮತ್ತು ರಾಜ್ಯ ಮಟ್ಟದ ಹಲವು ಗಣ್ಯರು, ಪಕ್ಷದ ಹಿರಿಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ನೂತನ ಸದಸ್ಯರ ಅಧಿಕೃತ ಪದಗ್ರಹಣವು ಕ್ಷೇತ್ರದ ಅಭಿವೃದ್ಧಿಗೆ ಹೊಸ ಶಕ್ತಿ ತುಂಬಲಿದೆ ಎಂಬ ವಿಶ್ವಾಸವನ್ನು ಸ್ಥಳೀಯ ಮುಖಂಡರು ವ್ಯಕ್ತಪಡಿಸಿದ್ದಾರೆ.

ಬೆಳೂರು ಕ್ಷೇತ್ರದ ಕಾಂಗ್ರೆಸ್ ನಾಯಕ ಸಂತೋಷ್ ಬಿ.ಎಂ. ಹಾಗೂ ಗಾಯತ್ರಿ ಶಾಂತೆ ಗೌಡ ಮತ್ತು ಅವರ ಕುಟುಂಬದವರ ಆಹ್ವಾನದ ಮೇರೆಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, “ಚಿಕ್ಕಮಗಳೂರಿಗಾಗಿ ಒಟ್ಟಿಗೆ – ಕರ್ನಾಟಕಕ್ಕಾಗಿ ಒಟ್ಟಿಗೆ” ಎಂಬ ಧ್ಯೇಯದೊಂದಿಗೆ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ.

ಶ್ರೀಮತಿ ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದಕ್ಕೆ ಬಿಬಿಎಂಪಿ ನ್ಯೂಸ್ 9 ಸಂಪಾದಕರು ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಹೋರಾಟ ಸಮಿತಿಯ ಚೇರ್ಮನ್ ವೈ.ಎಚ್. ಆನಂದ್ ಅವರು ಶುಭ ಕೋರಿದ್ದಾರೆ.

ಯಾರು ಈ ಗಾಯತ್ರಿ ಶಾಂತೆ ಗೌಡ?

ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಮುಚ್ಚಿದ ಲಕೋಟೆಯಲ್ಲಿದ್ದ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಇದರಿಂದಾಗಿ ಹಾಲಿ ಬಿಜೆಪಿ ಸದಸ್ಯ ಹಾಗೂ ಪರಿಷತ್ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ಅವರಿಗೆ ಹಿನ್ನಡೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದರ ಹಿನ್ನೆಲೆ?

2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು 6 ಮತಗಳಿಂದ ಗೆದ್ದಿದ್ದರು. ಆದರೆ, ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದನ್ನು ಆಕ್ಷೇಪಿಸಿ ಗಾಯತ್ರಿ ಅವರು ಹೈಕೋರ್ಟ್ ಮೆರೆ ಹೋಗಿದ್ದರು. ಈ ವೇಳೆ, ಹೈಕೋರ್ಟ್ ಆದೇಶದ ಅನ್ವಯ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಹೊರತುಪಡಿಸಿ ಮರು ಎಣಿಕೆಗೆ ಸೂಚಿಸಿತ್ತು.

ಇದನ್ನ ಪ್ರಶ್ನಿಸಿ ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಅಲ್ಲೂ ಕೂಡ ಪ್ರಾಣೇಶ್ ಅವರಿಗೆ ಹಿನ್ನಡೆ ಆಗಿದ್ದು, ಸುಪ್ರೀಂ ಕೋರ್ಟ್ ಮನವಿಯನ್ನ ವಜಾ ಮಾಡಿತ್ತು. ಜೊತೆಗೆ ಮರು ಎಣಿಕೆಗೆ ಸೂಚನೆ ನೀಡಿತ್ತು.

ಮುಂದುವರೆದು, ನ್ಯಾಯಾಲಯದ ಆದೇಶದ ಅನ್ವಯ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಹೊರತುಪಡಿಸಿ ನಡೆದ ಮರು ಎಣಿಕೆಯಲ್ಲಿ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಜಯಗಳಿಸಿರುವುದಾಗಿ ನ್ಯಾ. ಎಸ್. ಜಿ. ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಆದೇಶ ನೀಡಿತ್ತು. ಇದರೊಂದಿಗೆ, ಗಾಯತ್ರಿ ಶಾಂತೇಗೌಡ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಲು ಇನ್ನು ಒಂದೂವರೆ ವರ್ಷಗಳ ಅವಧಿ ಬಾಕಿ ಇದೆ.

ಏತನ್ಮಧ್ಯೆ, ನ್ಯಾಯಾಲಯವು ಗಾಯತ್ರಿ ಶಾಂತೇಗೌಡ ಅವರಿಗೆ ಪ್ರಮಾಣವಚನ ಬೋಧಿಸುವಂತೆ ವಿಧಾನ ಪರಿಷತ್ ಸಭಾಪತಿಗಳಿಗೆ ಸೂಚನೆ ನೀಡಿದೆ. ಈ ತೀರ್ಪಿನಿಂದಾಗಿ 75 ಸದಸ್ಯರ ಬಲದ ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *