Greater Bengaluru News9 : ಸಿಲಿಕಾನ್ ಸಿಟಿಯಲ್ಲಿ ಕಾರು ಅಥವಾ ಬೈಕ್ ಇಟ್ಟುಕೊಂಡಿರುವ ಪ್ರತಿಯೊಬ್ಬರಿಗೂ, ಸರ್ಕಾರ ಬಿಗ್ ಶಾಕ್ ಕೊಡಲು ಸಜ್ಜಾಗಿದೆ. ಇನ್ಮುಂದೆ ಬೆಂಗಳೂರಲ್ಲಿ ರಸ್ತೆ ಬದಿಯಲ್ಲಿ ಉಚಿತವಾಗಿ ಪಾರ್ಕ್ ಮಾಡುವುದು ಸಂಪೂರ್ಣವಾಗಿ ಬಂದ್ ಆಗಲಿದೆ. ಜಿಬಿಎ ಈಗ ಹೊಸ ಪಾರ್ಕಿಂಗ್ ರೂಲ್ಸ್-2026 ಜಾರಿಗೆ ಮಾಡಲು ಸಜ್ಜಾಗಿದೆ.
ಮನೆ ಮುಂಭಾಗದ ರಸ್ತೆ ಅಕ್ಕಪಕ್ಕದಲ್ಲಿ, ವಾಹನ ನಿಲ್ಲಿಸುವುದನ್ನು ಬಂದ್ ಮಾಡಲು ಜಿಬಿಎ ಮುಂದಾಗಿದ್ದು, ಡ್ರಾಫ್ಟ್ ಸಿದ್ದಪಡಿಸಿದೆ. ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ, ವಾಹನ ಪಾರ್ಕ್ ಮಾಡಬೇಕೆಂದರೆ ಸರ್ಕಾರಕ್ಕೆ ವರ್ಷಕ್ಕೆ 15 ಸಾವಿರದಿಂದ 25 ಸಾವಿರ ರೂಪಾಯಿ ಪಾವತಿಸಿ ಪರ್ಮಿಟ್ ಪಡೆಯಬೇಕಾಗುತ್ತದೆ. ಕರ್ನಾಟಕ ಸರ್ಕಾರವು ಗ್ರೇಟರ್ ಬೆಂಗಳೂರು ಏರಿಯಾ ನಿಯಮಗಳು 2026 ಕರಡು ಪ್ರತಿಯನ್ನು ಅಧಿಕೃತವಾಗಿ ಗೆಜೆಟ್ನಲ್ಲಿ ಪ್ರಕಟಿಸಿದೆ.
ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ
ಈ ಹೊಸ ನಿಯಮ ಅನುಮೋದನೆಗೊಂಡಿದ್ದೇ ಆದಲ್ಲಿ, ಬೆಂಗಳೂರಿನಲ್ಲಿ ಸೈಕಲ್ ಮತ್ತು ಆಟೋ ಸ್ಟ್ಯಾಂಡ್ ಹೊರತುಪಡಿಸಿ, ಯಾವುದೂ ಉಚಿತ ಪಾರ್ಕಿಂಗ್ ವ್ಯವಸ್ಥೆಯಡಿಯಲ್ಲಿ ಬರುವುದಿಲ್ಲ. ಜಿಬಿಎ ಜಾರಿಗೆ ತರಲು ಮುಂದಾಗಿರುವ ಹೊಸ ಪಾರ್ಕಿಂಗ್ ರೂಲ್ಸ್’ನಲ್ಲಿ ಏನೇನಿದೆ? ಯಾವ ವಾಹನಕ್ಕೆ ಎಷ್ಟು ಶುಲ್ಕ? ಈ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 2026ರ ಆಗಸ್ಟ್ 12 ರಂದು ಸರ್ಕಾರ, ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಆಕ್ಟ್, 2024 ರ ಅಡಿಯಲ್ಲಿ ಈ ಕರಡು ನಿಯಮಗಳನ್ನು ಪ್ರಕಟಿಸಿದೆ.
ಸಾರ್ವಜನಿಕರು ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಕಳುಹಿಸಬೇಕಾದ ವಿಳಾಸ: ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ, ಬೆಂಗಳೂರು.
ಬೆಂಗಳೂರಿಗರೇ ಇನ್ಮುಂದೆ ಪಾರ್ಕಿಂಗ್ ಉಚಿತವಿಲ್ಲ, ರಸ್ತೆಗಳ ಆಧಾರದಲ್ಲಿ ಪಾರ್ಕಿಂಗ್ ಶುಲ್ಕ ಜಿಬಿಎ ತರಲು ಮುಂದಾಗಿರುವ ಈ ಹೊಸ ಕರಡು ಪ್ರತಿಯ ರೂಲ್ 13ರ ಪ್ರಕಾರ, ರಾಜಧಾನಿಯಲ್ಲಿ, ಸೈಕಲ್ ಮತ್ತು ಆಟೋ ಸ್ಟ್ಯಾಂಡ್’ಗಳಲ್ಲಿ ನಿಲ್ಲಿಸುವ ಆಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಪಾರ್ಕಿಂಗ್ ಉಚಿತವಾಗಿರುವುದಿಲ್ಲ. ರಸ್ತೆಗಳ ವಾಣಿಜ್ಯ ಸಾಂದ್ರತೆಗೆ ಅನುಗುಣವಾಗಿ ರಸ್ತೆಗಳನ್ನು A, B ಮತ್ತು C ಎಂದು ವಿಂಗಡಿಸಲಾಗಿದೆ. ಇಷ್ಟೇ ಅಲ್ಲದೇ, ನಗರದ ಪ್ರಮುಖ ರಸ್ತೆ ಬದಿಯಲ್ಲಿ ಎರಡು ಗಂಟೆಗಿಂತ ಹೆಚ್ಚು ಸಮಯ ವಾಹನವನ್ನು ನಿಲ್ಲಿಸಿದರೆ ಪಾರ್ಕಿಂಗ್ ದರ ತೀವ್ರವಾಗಿ ಹೆಚ್ಚಾಗಲಿದೆ. ಅದರಲ್ಲೂ, ಪೀಕ್ ಅವರ್’ಗಳಲ್ಲಿ ದರವನ್ನು 1.5 ಪಟ್ಟು ಹೆಚ್ಚಿಸಲು ಅವಕಾಶವನ್ನು ಡ್ರಾಫ್ಟ್’ನಲ್ಲಿ ನೀಡಲಾಗಿದೆ.

ಕಟ್ಟಡ ಬೈಲಾ ಪ್ರಕಾರ, ಮನೆಯೊಳಗಿನ ಕಂಪೌಂಡ್’ನಲ್ಲಿ ವೆಹಿಕಲ್ ಪಾರ್ಕ್ ಮಾಡಬೇಕು
ರೂಲ್ 12ರ ಪ್ರಕಾರ, ಸ್ವಂತ ಕಂಪೌಂಡ್ ಅಥವಾ ಗ್ಯಾರೇಜ್ ಒಳಗಡೆ ಕಾರು ಪಾರ್ಕ್ ಮಾಡಬೇಕು ಎನ್ನುವುದು ಕಟ್ಟಡಗಳ ಬೈಲಾ ನಿಯಮ. ಒಂದು ವೇಳೆ ಮನೆಯೊಳಗೆ ಜಾಗವಿಲ್ಲದೆ, ಮನೆ ಮುಂಭಾಗದ ರಸ್ತೆಯಲ್ಲಿ ಪಾರ್ಕ್ ಮಾಡಬೇಕೆಂದರೆ, ನಾಗರೀಕರು ರೆಸಿಡೆನ್ಶಿಯಲ್ ಪಾರ್ಕಿಂಗ್ ಪರ್ಮಿಟ್ ಪಡೆಯುವುದು ಕಡ್ಡಾಯ. ಈ ಪರ್ಮಿಟ್ ದರ ಎಷ್ಟಿದೆ ಅಂದರೆ, ಸಣ್ಣ ಕಾರುಗಳಿಗೆ ವರ್ಷಕ್ಕೆ 15 ಸಾವಿರ ಕಟ್ಟಬೇಕು.
ಉದಾಹರಣೆಗೆ, ಸೆಡಾನ್ ಕಾರುಗಳಿಗೆ ವರ್ಷಕ್ಕೆ 20 ಸಾವಿರ, ಎಸ್ಯುವಿಯಂತಹ ದೊಡ್ಡ ಕಾರುಗಳಿಗೆ ವರ್ಷಕ್ಕೆ ಬರೋಬ್ಬರಿ 25 ಸಾವಿರ ಕಟ್ಟಬೇಕು. ಇದರ ಜೊತೆಗೆ ಆಡಳಿತಾತ್ಮಕ ಶುಲ್ಕ (Administrative fees) ಪ್ರತ್ಯೇಕವಾಗಿರುತ್ತೆ. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಮನೆ ಮುಂಭಾಗದ ರಸ್ತೆ ಕನಿಷ್ಠ ಅಗಲ ಹೊಂದಿದ್ದರೆ ಮಾತ್ರ ಪರ್ಮಿಟ್ ಸಿಗುತ್ತದೆ. ಕಾರು ಪಾರ್ಕ್ ಮಾಡಿದ ಮೇಲೆಯೂ ರಸ್ತೆಯಲ್ಲಿ 4 ರಿಂದ 6 ಮೀಟರ್ ಜಾಗ ಸಂಚಾರಕ್ಕೆ ಖಾಲಿ ಇರಬೇಕು ಮತ್ತು ಎರಡೂ ಬದಿ 1.8 ಮೀಟರ್ ಫುಟ್’ಪಾತ್ ಇರಲೇಬೇಕು. ಇದನ್ನು ಜಿಬಿಎ ಮಾರ್ಷಲ್’ಗಳು ಪರಿಶೀಲಿಸಿದ ನಂತರ, ಪರ್ಮಿಟ್ ಸಿಗಲಿದೆ.
ಡ್ರಾಫ್ಟ್’ನಲ್ಲಿರುವ ಪ್ರಮುಖ ನಿಯಮಗಳು ಹೀಗಿದೆ:
*ಮೆಟ್ರೋ ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತ ವಾಹನ ನಿಲ್ಲಿಸುವವರಿಗೂ ದೊಡ್ಡ ಬಿಸಿ ತಟ್ಟಲಿದೆ. ಮೆಟ್ರೋ ಮತ್ತು ಸಬ್ ಅರ್ಬನ್ ರೈಲು ನಿಲ್ದಾಣಗಳ 150 ಮೀಟರ್ ವ್ಯಾಪ್ತಿಯನ್ನು ನೋ-ಪಾರ್ಕಿಂಗ್ ZONE ಎಂದು ಘೋಷಿಸುವ ವಿಚಾರವೂ ಡ್ರಾಫ್ಟ್’ನಲ್ಲಿದೆ. ಈ ವ್ಯಾಪ್ತಿಯನ್ನು ಮುಂದಿನ ದಿನಗಳಲ್ಲಿ 500 ಮೀಟರ್ಗೆ ವಿಸ್ತರಿಸುವ ಚಿಂತನೆ ನಡೆಯುತ್ತಿದೆ.
*ಜಂಕ್ಷನ್’ಗಳ ಬಳಿ, ಸಿಗ್ನಲ್ ಇರುವ ಪ್ರಮುಖ ರಸ್ತೆಗಳಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಬ್ಯಾನ್.
*ಬಸ್ ಸ್ಟಾಪ್’ಗಳ ಸುತ್ತ 25 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಹನ ನಿಲ್ಲಿಸುವಂತಿಲ್ಲ.
*ಫುಟ್ಪಾತ್ ಅಥವಾ ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸುವುದು ಸಂಪೂರ್ಣ ನಿಷೇಧ. ಈ ರೂಲ್ಸ್ ಅನ್ನು ಮೀರಿದರೆ, ರಸ್ತೆಯಲ್ಲಿ ಅಕ್ರಮವಾಗಿ ವಾಹನ ನಿಲ್ಲಿಸಿದರೆ ಕಾರಿಗೆ 500, ಬೈಕ್ಗೆ 300 ರೂಪಾಯಿ ದಂಡ.
* ಫುಟ್ಪಾತ್ ಮೇಲೆ ಗಾಡಿ ನಿಲ್ಲಿಸಿದರೆ ಕಾರಿಗೆ 1 ಸಾವಿರ, ಬೈಕ್’ಗೆ 600 ರೂಪಾಯಿ ದಂಡ.
* ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಕಚೇರಿಗಳು ತಮ್ಮ ಕಟ್ಟಡದ ಪ್ಲಾನ್’ನಲ್ಲಿ ಬೇಸ್ಮೆಂಟ್ ಪಾರ್ಕಿಂಗ್ ಎಂದು ತೋರಿಸಿ, ಅದನ್ನು ಅಂಗಡಿ/ಗೋದಾಮು ಆಗಿ ಪರಿವರ್ತಿಸಿದ್ದರೆ, ಮತ್ತು, ಗ್ರಾಹಕರು, ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಬೇಕಾದ ಪರಿಸ್ಥಿತಿ ಇದ್ದಲ್ಲಿ, ಕಟ್ಟಡದ ಮಾಲೀಕರಿಗೆ ವಾರಕ್ಕೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಇದನ್ನು, ತಿಂಗಳ ಒಳಗಾಗಿ ಸರಿಪಡಿಸಿ ಕೊಳ್ಳದೇ ಇದ್ದಲ್ಲಿ, ಕಟ್ಟಡದ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಮತ್ತು ಟ್ರೇಡ್ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗುತ್ತದೆ.
* ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ದರೆ, ಪ್ರೈವೇಟ್ ಪಾರ್ಕಿಂಗ್ ಆಪರೇಟರ್’ಗಳಿಗೆ ವಾಹನಗಳನ್ನು ಕ್ಲ್ಯಾಂಪ್ ಮಾಡಲು ಹಾಗೂ ಟೋಯಿಂಗ್ ಮಾಡಲು ಅಧಿಕಾರ ನೀಡಲಾಗುತ್ತದೆ. ಟೋಯಿಂಗ್ ಮಾಡುವ ಮುನ್ನ ವೀಡಿಯೋ ರೆಕಾರ್ಡ್ ಮಾಡುವುದು ಕಡ್ಡಾಯ.
ಖಾಲಿ ನಿವೇಶನ ಹೊಂದಿರುವವರಿಗೆ ಜಾಕ್’ಪಾಟ್
ಇಷ್ಟೆಲ್ಲಾ ಕಠಿಣ ನಿಯಮಗಳ ಮಧ್ಯೆ, ನಗರದಲ್ಲಿ ಖಾಲಿ ನಿವೇಶನ ಇಟ್ಟುಕೊಂಡಿರುವ ಮಾಲೀಕರಿಗೆ ಸರ್ಕಾರ ಭರ್ಜರಿ ಆಫರ್ ನೀಡಿದೆ. ಖಾಲಿ ಜಾಗವನ್ನು ನೀವು ಪಾರ್ಕಿಂಗ್’ಗಾಗಿ ಬಳಸಿದರೆ ರೂಲ್ 10ರ ಪ್ರಕಾರ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಮಲ್ಟಿ ಲೆವೆಲ್ ಅಥವಾ ಮೆಕಾನೈಸ್ಡ್ ಪಾರ್ಕಿಂಗ್ ಸಿಸ್ಟಂನಲ್ಲಿ, 30 ರಿಂದ 200 ಕಾರು ನಿಲ್ಲಿಸುವ ಸಾಮರ್ಥ್ಯವಿದ್ದರೆ 100% ಆಸ್ತಿ ತೆರಿಗೆ ಮತ್ತು ಸರ್ವಿಸ್ ಚಾರ್ಜ್ ವಿನಾಯಿತಿ ಇರುತ್ತೆ.
ಸಾಮಾನ್ಯ ಸರ್ಫೇಸ್ ಪಾರ್ಕಿಂಗ್ ಅಡಿಯಲ್ಲಿ, ಕನಿಷ್ಠ 15 ಕಾರು ನಿಲ್ಲಿಸುವ ಜಾಗವಿದ್ದರೆ 50% ಆಸ್ತಿ ತೆರಿಗೆ ವಿನಾಯಿತಿ ಸಿಗಲಿದೆ. ಖಾಲಿ ಸೈಟ್ ನೀವೇ ನೇರವಾಗಿ ಪಾರ್ಕಿಂಗ್ ಸ್ಥಳವಾಗಿ ನಡೆಸಬಹುದು ಅಥವಾ ಪಾಲಿಕೆಗೆ ಕನಿಷ್ಠ 3 ರಿಂದ 15 ವರ್ಷಗಳ ಲೀಸ್ ಆಧಾರದ ಮೇಲೆ ನೀಡಿ ಉತ್ತಮ ಬಾಡಿಗೆ ಆದಾಯವನ್ನು ಗಳಿಸಬಹುದು ಎಂದು ಡ್ರಾಫ್ಟ್’ನಲ್ಲಿ ಉಲ್ಲೇಖಿಸಲಾಗಿದೆ.


