Greater Bengaluru News9 : ಜಿಬಿಎ ಸ್ವಚ್ಛ ಬೆಂಗಳೂರು ಅಭಿಯಾನದಡಿ ಬೆಸ್ಕಾಂ ಶನಿವಾರ ಹಾಗೂ ಭಾನುವಾರ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ಫುಟ್ಪಾತ್ನಲ್ಲಿದ್ದ ಒಟ್ಟು 2,483 ಡಿಟಿಸಿ ಯಾರ್ಡ್ (ಟ್ರಾನ್ಸ್ಫಾರ್ಮರ್) ಗಳನ್ನು ತೆರವು ಮಾಡಿದೆ.
ಒಟ್ಟು 724 ಆರ್ಎಂಯು ಯಾರ್ಡ್ಗಳು 565 ಸ್ಪನ್ ಪೋಲ್ಗಳು ಹಾಗೂ 60 ಫೀಡರ್ ಪಿಲ್ಲರ್ ವೈರಿಂಗ್ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿದೆ. ಬೆಂಗಳೂರು ಮಹಾ ನಗರ ವಲಯ (BMAZ) ವ್ಯಾಪ್ತಿಯಲ್ಲಿ ಒಂದು ತಿಂಗಳು ನಡೆಯುವ ಸ್ವಚ್ಛತಾ ಕಾರ್ಯಕ್ಕೆ ಚುರುಕು ನೀಡುವ ಉದ್ದೇಶದಿಂದ ಎರಡು ದಿನ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ್ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಸಿಬ್ಬಂದಿ ಈ ಕೆಲಸದಲ್ಲಿ ತೊಡಗಿಸಿಕೊಂಡು ನಗರದಲ್ಲಿ ವಿದ್ಯುತ್ ಮೂಲ ಸೌಕರ್ಯಗಳ ಸ್ವಚ್ಛತೆ ಮಾಡಿದ್ದಾರೆ.
ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿರುವ ನಿಷ್ಕ್ರೀಯ ವಿದ್ಯುತ್ ಉಪಕರಣಗಳ ತೆರವು, ಅಪಾಯಕಾರಿ ಸ್ಥಿತಿಯಲ್ಲಿರುವ ಡಬಲ್ ಪೋಲ್ ಸ್ಟ್ರಕ್ಚರ್ ಟಿಸಿಗಳನ್ನು ಸ್ಪನ್ ಪೋಲ್ಗೆ ಮಾರ್ಪಾಡುಗೊಳಿಸುವಿಕೆ, ಟಿಸಿ ಹಾಗೂ ಆರ್ಎಂಯುಗಳ ಸ್ವಚ್ಛತೆಗೆ ಬೆಸ್ಕಾಂ ಈ ಅಭಿಯಾನದಲ್ಲಿ ಆದ್ಯತೆ ನೀಡಿದೆ.
ಸ್ವಚ್ಚ ಬೆಂಗಳೂರು ಅಭಿಯಾನಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಪಾದಚಾರಿ ರಸ್ತೆಗಳಲ್ಲಿರುವ ನಿರುಪಯುಕ್ತ ವಿದ್ಯುತ್ ಮೂಲ ಸೌಕರ್ಯಗಳನ್ನು ತೆರವುಗೊಳಿಸಿ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಮೂಲ ಸೌಕರ್ಯಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತಿದೆ. ಸಾರ್ವಜನಿಕರಿಗೆ ಸುರಕ್ಷಿತ ಪಾದಚಾರಿ ಮಾರ್ಗ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಎರಡು ದಿನದ ವಿಶೇಷ ಅಭಿಯಾನ ಕೈಗೊಂಡು ದಾಖಲೆಯಲ್ಲಿ ಸ್ವಚ್ಛತೆ ಮಾಡಿರುವ ಬೆಸ್ಕಾಂ ಸಿಬ್ಬಂದಿಗೆ ಅಭಿನಂದನೆಗಳು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಅಭಿಯಾನದ ಕುರಿತು ಶನಿವಾರ ಮಾತನಾಡಿದ್ದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಬೆಂಗಳೂರು ನಗರವನ್ನು ಸ್ವಚ್ವವಾಗಿಡುವ ಕಾರ್ಯದಲ್ಲಿ ಜಿಬಿಎ ಜೊತೆ ಕೈಜೋಡಿಸುವಲ್ಲಿ ಬೆಸ್ಕಾಂ ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ಇಂಧನ ಮತ್ತು ಪ್ರವಾಸೋದ್ಯಮ ಸಚಿವರ ಸೂಚನೆ ಮೇರೆಗೆ ಅನುಪಯುಕ್ತ, ಪಾದಚಾರಿಗಳಿಗೆ ಅಡಚಣೆಯಾಗುತ್ತಿರುವ ವಿದ್ಯುತ್ ಸಲಕರಣೆಗಳನ್ನು ನಮ್ಮ ತಾಂತ್ರಿಕ ಪರಿಣಿತರ ತಂಡದ ಮಾರ್ಗದರ್ಶನ ಹಾಗೂ ಮುಂದಾಳತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುತ್ತಿದ್ದೇವೆ. ವಿದ್ಯುತ್ ಉಪಕರಣಗಳ ಸಮೀಪ ಹಾಕಲಾಗಿದ್ದ ಕಸ ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕ್ಲೀನ್ ಅಪ್ ಬೆಂಗಳೂರು ಅಭಿಯಾನಕ್ಕೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಿ ಇದನ್ನು ಆಂದೋಲನದ ರೀತಿ ರೂಪಿಸಲಾಗಿದೆ. ನೂರಾರು ಅಧಿಕಾರಿಗಳು, ಸಿಬ್ಬಂದಿ, ಸಾವಿರಾರು ಪವರ್ಮೆನ್ಗಳ ದೊಡ್ಡ ತಂಡದೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.


