BBMP
Loading ...

Greater Bengaluru News9 : ನಕಲಿ ದಾಖಲೆ ಸಲ್ಲಿಸಿ ಬರೋಬ್ಬರಿ 40 ವರ್ಷ ಸರಕಾರಿ ಉದ್ಯೋಗದ ಸೌಲಭ್ಯ ಅನುಭವಿಸಿದ ವ್ಯಕ್ತಿಯೊಬ್ಬರು ನಿವೃತ್ತಿ ಬಳಿಕ ಸಿಕ್ಕಿ ಬಿದ್ದಿದ್ದ ಪ್ರಕರಣದ ತನಿಖೆಯನ್ನು ರಾಜಾಜಿನಗರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿಯ ಎಂ.ರಾಚಯ್ಯ, ಬೆಸ್ಕಾಂ ನಿವೃತ್ತ ಉದ್ಯೋಗಿ ಹಾಸನ ಮೂಲದ ಬೊಮ್ಮೇಗೌಡ, ನಿವೃತ್ತ ಎಂಜಿನಿಯರ್‌ ಸುಭಾಷ್‌ ವಿರುದ್ಧದ ತನಿಖೆ ಸಲುವಾಗಿ ದಾಖಲೆಗಳ ಕ್ರೋಢೀಕರಣ ನಡೆಸುತ್ತಿದ್ದಾರೆ. ಜತೆಗೆ, 40 ವರ್ಷಗಳ ಕಾಲ ನಕಲಿ ಉದ್ಯೋಗ ಕಾಪಾಡಿಕೊಂಡಿದ್ದ ಬೊಮ್ಮೇಗೌಡನ ಕಿಲಾಡಿತನಕ್ಕೆ ತನಿಖಾಧಿಕಾರಿಗಳೇ ಬೇಸ್ತು ಬಿದ್ದಿದ್ದಾರೆ.

ಶಿವಮೊಗ್ಗದ ಕರ್ನಾಟಕ ವಿದ್ಯುತ್‌ ಮಂಡಳಿ ಕಚೇರಿಗೆ ಗ್ಯಾಂಗ್‌ಮನ್‌ ಹುದ್ದೆ ಸಂದರ್ಶನಕ್ಕೆ 1982ರಲ್ಲಿ ಮಳವಳ್ಳಿಯ ಎಂ.ರಾಚಯ್ಯ ತೆರಳಿದ್ದು, ಕಾರಣಾಂತರಗಳಿಂದ ನಿಗದಿ ಸಂದರ್ಶನ ರದ್ದಾಗಿತ್ತು. ಈ ಸಮಯದಲ್ಲಿ ಅವರು ತಮ್ಮ ಏಳನೇ ತರಗತಿ ಪ್ರಮಾಣಪತ್ರವನ್ನು ಬೀಳಿಸಿಕೊಂಡು ಹೋಗಿದ್ದರು. ಈ ಪ್ರಮಾಣ ಪತ್ರ ಬೊಮ್ಮೇಗೌಡನಿಗೆ ಸಿಕ್ಕಿತ್ತು
.

ಇದೇ ಪ್ರಮಾಣಪತ್ರವನ್ನು ಬಳಸಿಕೊಂಡ ಬೊಮ್ಮೇಗೌಡ ತಾನೇ ರಾಚಯ್ಯ ಎಂದು ಬಿಂಬಿಸಿಕೊಂಡು ಗ್ಯಾಂಗ್‌ಮನ್‌ ಹುದ್ದೆ ಗಿಟ್ಟಿಸಿಕೊಂಡಿದ್ದರು. ರಾಚಯ್ಯನಾಗಿ ಕೆಲಸ ಮಾಡಿಕೊಂಡು ಸರಕಾರಿ ಸಂಬಳ ಎಣಿಸಿದ್ದರು. 2003ರಲ್ಲಿ ತನ್ನ ಹೆಸರು ರಾಚಯ್ಯ ಅಲ್ಲ ಬೊಮ್ಮೇಗೌಡ ಎಂದು ನ್ಯಾಯಾಲಯದ ಅಫಿಡವಿಟ್‌ ತಂದು ಅಧಿಕೃತವಾಗಿ ಬೊಮ್ಮೇಗೌಡನಾಗಿದ್ದ.

37 ವರ್ಷಗಳ ಬಳಿಕ ಸತ್ಯ ಬಯಲು
2019ರಲ್ಲಿ ಅಸಲಿ ರಾಚಯ್ಯನಿಗೆ ತನ್ನ ಏಳನೇ ತರಗತಿ ಪ್ರಮಾಣಪತ್ರ ಬಳಸಿ ಬೊಮ್ಮೇಗೌಡ ಸರಕಾರಿ ಕೆಲಸ ಪಡೆದಿರುವುದು ಗೊತ್ತಾಗಿತ್ತು. ಹೀಗಾಗಿ, ನೇರವಾಗಿ ಬೊಮ್ಮೇಗೌಡನನ್ನು ಸಂಪರ್ಕಿಸಿ ಪೊಲೀಸರಿಗೆ ದೂರು ನೀಡುತ್ತೇನೆ. ಜೈಲಿಗೆ ಕಳಿಸುತ್ತೇನೆ. ಜತೆಗೆ, ನಿವೃತ್ತಿ ವೇತನ ಬರದಂತೆ ತಡೆಯುತ್ತೇನೆ ಎಂದು ಧಮ್ಕಿ ಹಾಕಿದ್ದ. ಇದರಿಂದ ಕಂಗಾಲಾದ ಬೊಮ್ಮೇಗೌಡ, ಪ್ರತಿ ವರ್ಷ ಎರಡರಿಂದ ಮೂರು ಲಕ್ಷ ರೂ. ನೀಡುವುದಾಗಿ ರಾಜಿ ಸಂಧಾನದಲ್ಲಿ ಒಪ್ಪಿಕೊಂಡು ಹಣ ಕೊಡುತ್ತಿದ್ದ.

ಬೆಸ್ಕಾಂನಲ್ಲಿ ಹಿರಿಯ ಶ್ರೇಣಿ ಮೆಕ್ಯಾನಿಕ್‌ ಆಗಿ ಬೊಮ್ಮೇಗೌಡ 2022ರ ಜನವರಿಯಲ್ಲಿ ಸೇವೆಯಿಂದ ನಿವೃತ್ತನಾಗಿದ್ದು, ನಿವೃತ್ತಿ ನಂತರ ಎಲ್ಲಾ ಭತ್ಯೆಗಳನ್ನು ಪಡೆದುಕೊಂಡಿದ್ದ. ಈ ಮೊತ್ತದಲ್ಲಿಯೇ 10 ಲಕ್ಷ ರೂ.ಗಳನ್ನು ರಾಚಯ್ಯನಿಗೆ ನೀಡಿದ್ದ. ಈ ಹಣಕಾಸು ವ್ಯವಹಾರಕ್ಕೆ ನಿವೃತ್ತ ಎಂಜಿನಿಯರ್‌ ಸುಭಾಷ್‌ ಮಧ್ಯಸ್ಥಿಕೆ ವಹಿಸಿದ್ದರು.

ದೂರು ನೀಡಿ ಸಿಕ್ಕಿಬಿದ್ದಿದ್ದರು
ಹತ್ತು ಲಕ್ಷ ರೂ. ಪಡೆದ ಬಳಿಕ ವರಸೆ ಬದಲಿಸಿದ ರಾಚಯ್ಯ, ನಿವೃತ್ತಿ ವೇತನದಲ್ಲೂ ತನಗೆ ಪ್ರತಿ ತಿಂಗಳು ಅರ್ಧಪಾಲು ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಬೊಮ್ಮೇಗೌಡ ಒಪ್ಪಿರಲಿಲ್ಲ. ಈ ನಿಟ್ಟಿನಲ್ಲಿ ಸ್ವತಃ ರಾಚಯ್ಯ, ಬೊಮ್ಮೇಗೌಡ ತನ್ನ ಹೆಸರಿನಲ್ಲಿ ಉದ್ಯೋಗ ಪಡೆದು ಸರಕಾರಕ್ಕೆ ವಂಚಿಸಿರುವ ಬಗ್ಗೆ ಬೆಸ್ಕಾಂ ವಿಚಕ್ಷಣಾ ದಳಕ್ಕೆ ದೂರು ನೀಡಿದ್ದರು.

ತನಿಖೆಯಲ್ಲಿ ಬೊಮ್ಮೇಗೌಡನ ವಂಚನೆ, ರಾಚಯ್ಯ ಹಾಗೂ ಸುಭಾಷ್‌ ಅವರ ಸಹಕಾರ ದೃಢಪಟ್ಟಿದ್ದರಿಂದ ಬೆಸ್ಕಾಂ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಕ್ರಿಮಿನಲ್‌ ಕೇಸ್‌ ದಾಖಲಿಸಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *