Greater Bengaluru News9: ರಾಜ್ಯಾದ್ಯಂತ ಶಾಶ್ವತ ಅಥವಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ, ಅಥವಾ ಯಾವುದೇ ವಿದ್ಯುತ್ ಸಂಪರ್ಕವಿಲ್ಲದೆ ಈಗಾಗಲೇ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿರುವ ಮನೆ ಮಾಲೀಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಇಂತಹ ಪ್ರಕರಣಗಳಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಕಡ್ಡಾಯವಾಗಿದ್ದ ‘ಸ್ವಾಧೀನಾನ್ಭವ ಪ್ರಮಾಣಪತ್ರ’ (Occupancy Certificate/CC) ಪಡೆಯುವುದರಿಂದ ಒಂದು ಬಾರಿಗೆ ಅನ್ವಯವಾಗುವಂತೆ ವಿನಾಯಿತಿ ನೀಡಿ ಇಂಧನ ಇಲಾಖೆಯು ಜೂನ್ 22, 2026 ರಂದು ಅಧಿಕೃತ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ, ರಾಜ್ಯದ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 2400 ಚದರ ಅಡಿವರೆಗಿನ (+20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+3 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ. ಆದರೆ, ಈ ಸೌಲಭ್ಯವು ದಿನಾಂಕ 31.05.2026ರ ಒಳಗಾಗಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಇದೇ ವೇಳೆ ಗ್ರಾಮೀಣ ಭಾಗದ ಜನರಿಗೂ ಸರ್ಕಾರ ದೊಡ್ಡ ರಿಲೀಫ್ ನೀಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆ, ತೋಟದ ಮನೆ, ಕೃಷಿ ಉಪಕರಣಗಳನ್ನು ಇಡುವ ಮನೆ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸ್ವಾಧೀನಾನ್ಭವ ಪ್ರಮಾಣಪತ್ರ ಹೊಂದುವುದರಿಂದ ಸಂಪೂರ್ಣ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಆದೇಶಿಸಲಾಗಿದೆ. ಇದರಿಂದಾಗಿ ಹಳ್ಳಿಗಳ ರೈತಾಪಿ ವರ್ಗದವರು ಸುಲಭವಾಗಿ ವಿದ್ಯುತ್ ಸಂಪರ್ಕ ಪಡೆಯಲು ಹಾದಿ ಸುಗಮವಾಗಿದೆ.
ಸರ್ಕಾರದ ಈ ಆದೇಶವು ಜಾರಿಗೆ ಬಂದ ದಿನಾಂಕದಿಂದ (22.06.2026) ಕೇವಲ 15 ದಿನಗಳವರೆಗೆ ಮಾತ್ರ ಅರ್ಜಿ ಸಲ್ಲಿಸಲು ಕಾಲಾವಕಾಶ ಇರಲಿದ್ದು, ಅರ್ಹ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಇನ್ನು ವಿದ್ಯುತ್ ಸರಬರಾಜು ಕಂಪನಿಗಳು (ESCOMs) ಈ ಹೊಸ ಆದೇಶದ ಅನ್ವಯ ವಿದ್ಯುತ್ ಸಂಪರ್ಕ ನೀಡಲು ಅನುಸರಿಸಬೇಕಾದ ಸಾಮಾನ್ಯ ಮಾರ್ಗಸೂಚಿಗಳನ್ನು ಇಂಧನ ಇಲಾಖೆಯು ಪ್ರತ್ಯೇಕವಾಗಿ ಹೊರಡಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


