BBMP
Loading ...

Dks

Greater Bengaluru News9: ವಿದ್ಯುತ್ ಸಂಪರ್ಕಕ್ಕಾಗಿ 2,400 ಚ.ಅಡಿವರೆಗಿನ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಎಲ್ಲ ವಾಸದ ಮನೆಗಳಿಗೆ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಮುಂಚೆ 31.5.2005ರೊಳಗೆ ಕಟ್ಟಿದ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು‌. ಆದರೆ, ಹಲವರು ಈ ವಿನಾಯಿತಿಯಿಂದ ಯಾವುದೇ ಅನುಕೂಲವಾಗುವುದಿಲ್ಲ ಎಂದು ಮನವಿ ಸಲ್ಲಿಸಿದ್ದರು. ಹಾಗಾಗಿ 31.05.2005 ಕಟ್ ಆಫ್ ದಿನಾಂಕವನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಯಾವುದೇ ಹಳೆ ವಾಸದ ಮನೆಗಳ ನಿರ್ಮಾಣ ಪೂರ್ಣವಾಗಿ, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು, ಈಗಾಗಲೇ ಸ್ವಾಧೀನಾನುಭವ ಪತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ 15 ದಿನ ಸಮಯಾವಕಾಶ ನೀಡುತ್ತೇವೆ.‌ 15 ದಿನದಲ್ಲಿ ಅರ್ಜಿಯೊಂದಿಗೆ ಜಿಪಿಎಸ್ ಆಧಾರಿತ ಫೋಟೋ ಅಪ್ ಲೋಡ್ ಮಾಡಬೇಕು. ಅಂಥ ಅರ್ಜಿಯನ್ನು ಪರಿಗಣಿಸಿ ಒಸಿಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.‌


ರೇಷ್ಮೆ ಹುಳು ಮನೆ, ಕೊಟ್ಟಿಗೆಗಳು, ಹೈನುಗಾರಿಕೆ ಶೆಡ್ ಗಳಿಗೆ ನಾವು ಒಸಿ ಪಡೆಯುವುದರಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.‌

ಪ್ರಜಾ ಸೇವೆ ಸಚಿವಾಲಯ ರಚನೆ:ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಲು, ಅವರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜನಸ್ಪಂದನೆ ಮಾಡಲು ಪ್ರಜಾ ಸೇವೆ ಸಚಿವಾಲಯ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು.‌

ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿಗಳ ಜನಸ್ಪಂದನ ಮತ್ತು ಜನಹಿತಕ್ಕಾಗಿ ಪ್ರಜಾ ಸೇವೆ ಆಡಳಿತ ಇಲಾಖೆಯನ್ನು ಸ್ಥಾಪಿಸಲಾಗುವುದು.‌ ಸಾರ್ವಜನಿಕರ ಅಹವಾಲು, ಸಮಸ್ಯೆಗಳ ಸ್ಪಂದನೆ, ಸಾರ್ವಜನಿಕರಿಗೆ ನ್ಯಾಯ ಕೊಡಲು, ಅಧಿಕಾರಿಗಳು ಹಾಗೂ ನಮ್ಮಿಂದ ಆಗುವ ತಪ್ಪುಗಳನ್ನು ತಿದ್ದಲು ಅನುವಾಗಲು ಹೊಸ ಸಚಿವಾಲಯ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಅದರ ಹೊಣೆಗಾರಿಕೆಯನ್ನು ಓರ್ವ ಸಚಿವರಿಗೆ ವಹಿಸಲಾಗುವುದು. ಸಚಿವಾಲಯಕ್ಕೆ ಐಎಎಸ್ ಅಧಿಕಾರಿಯನ್ನು ನಿಯೋಜನೆ ಮಾಡುತ್ತೇವೆ. ಎಲ್ಲ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ವಾರ ಕಡ್ಡಾಯವಾಗಿ 224 ಕ್ಷೇತ್ರಗಳಿಗೆ ಹೋಗಿ ಆ ತಾಲೂಕುಗಳಲ್ಲಿ ಜನಸ್ಪಂದನಾ ಸಭೆ ನಡೆಸಬೇಕು. ಅಲ್ಲಿ ಬರುವ ಅಹವಾಲುಗಳನ್ನು, ಕುಂದು ಕೊರತೆಗಳನ್ನು ಈ ಸಚಿವಾಲಯದ ಗಮನಕ್ಕೆ ತರಬೇಕು. ಜನರಹಿತ ಬಹಳ ಮುಖ್ಯ.‌ ನಾವು ಯಾರೂ ಸರ್ವಜ್ಞರಲ್ಲ. ಜನರಿಗೆ ಹಲವು ಸಮಸ್ಯೆ ಎದುರಾಗುತ್ತವೆ. ಮಾಧ್ಯಮಗಳಲ್ಲೂ ಸಾರ್ವಜನಿಕರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾರೆ. ಅದನ್ನೆಲ್ಲವನ್ನೂ ಸಮನ್ವಯತೆ ಮಾಡಿ ಸ್ಪಂದಿಸಲು ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ದೆಹಲಿಯ ನಿವಾಸಿ ಆಯುಕ್ತರ ಕಚೇರಿ ಪುನಾರಚನೆ:ನಿವಾಸಿ ಆಯುಕ್ತರ ಕಚೇರಿ ಕಾರ್ಯವೈಖರಿ ನಮಗೆ ಸಮಾಧಾನ ತಂದಿಲ್ಲ. ಹಾಗಾಗಿ ಅದನ್ನು ಪುನಾರಚನೆ ಮಾಡಲಾಗುವುದು‌. ಯಾವ ರಾಜ್ಯಗಳು ಎಷ್ಟು ಅನುದಾನಗಳ ಪ್ರಸ್ತಾವನೆಗಳನ್ನು ಕೊಂಡೊಯ್ಯುತ್ತಾರೆ ಎಂಬ ಬಗ್ಗೆ ಸಮನ್ವಯತೆ ಸಾಧಿಸಲು ಪ್ರತ್ಯೇಕ ಅಧಿಕಾರಿ ತಂಡವನ್ನು ರಚನೆ ಮಾಡಲಾಗುವುದು. ಸಂಪೂರ್ಣ ತಂಡವನ್ನು ಪುನಾರಚನೆ ಮಾಡಲಾಗುವುದು. ಇದರ ಹಿರಿಯ ಐಎಎಸ್ ಅಧಿಕಾರಿಗಳು, ಐಆರ್​ಎಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳನ್ನು ತಂಡದಲ್ಲಿ ನಿಯೋಜಿಸಲಾಗುವುದು. ಇದರ ಜೊತೆಗೆ ದೆಹಲಿಯಲ್ಲಿನ ಕಾನೂನು ಸೆಲ್ ಅನ್ನು ಬಲಗೊಳಿಸಲಾಗುವುದು.

ಸಚಿವ ಸಂಪುಟ ಇತರ ನಿರ್ಣಯಗಳು:

ರಾಜ್ಯಪಾಲರಿಂದ ವಿಧಾನಪರಿಷತ್ತಿಗೆ ಐದು ಸದಸ್ಯರ ನಾಮನಿರ್ದೇಶನ ಮಾಡುವ ಅಧಿಕಾರ ಸಿಎಂಗೆ

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು 100 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ವಿವಿಧ 6 ಸಿವಿಲ್ ಕಾಮಗಾರಿಗಳನ್ನು 18.03 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಧೀನದ ಆಸ್ಪತ್ರೆಗಳ ವಿವಿಧ ವಿಭಾಗಗಳಿಗೆ ಅವಶ್ಯ ಇರುವ ವೈದ್ಯಕೀಯ ಉಪಕರಣಗಳನ್ನು 60 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸಂಡೂರು ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಬಸ್ ನಿಲ್ದಾಣ ಮತ್ತು ಮೂಲಸೌಕರ್ಯ ನಿರ್ಮಾಣ ಕಾಮಗಾರಿಯನ್ನು 30 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಹೊಸದಿಲ್ಲಿಯಲ್ಲಿ ಕರ್ನಾಟಕ ಭವನ-4 ಅನ್ನು 80.75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.

ಲೋಕೋಪಯೋಗಿ ಇಲಾಖೆ ವತಿಯಿಂದ ಕಟ್ಟಡ ನಿರ್ಮಿಸಲಾಗುವುದು. ಐಆರ್ ಎಸ್, ಐಎಎಸ್, ಐಎಫ್ ಎಸ್ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಲಾಗುವುದು. 50 ಎಸ್​ಸಿ, ಎಸ್​ಟಿ ಹಾಗೂ 50% ಒಬಿಸಿ, ಇತರರಿಗೆ ಅವಕಾಶ ನೀಡಲಾಗುವುದು.‌

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ೧೩ ಗ್ರಾಮಗಳಲ್ಲಿ ಒಟ್ಟು 1777.02 ಎಕರೆ ಜಮೀನುಗಳ ಪೈಕಿ ಸ್ವಯಂ ಪ್ರೇರಿತವಾಗಿ ಮಂಡಳಿಗೆ ಜಮೀನು ನೀಡಲು ನಿಗದಿ ಪಡಿಸಿದ ಅವಧಿಯನ್ನು 31.10.2026ರವರೆಗೆ ವಿಸ್ತರಿಸಲು ನಿರ್ಧಾರ

ರಾಜ್ಯ ರಸ್ತೆ ಸಾರಿ ನಿಗಮಕ್ಕೆ 400 ಬಸ್ಸುಗಳು ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ 220 ಬಸ್ಸುಗಳನ್ನು ಒಳಗೊಂಡಂತೆ ಒಟ್ಟು 620 ಹೊಸ ಬಿಎಸ್-6 ಪೂರ್ಣ ನಿರ್ಮಿತ ಮೊಫಿಸ್ಸಿಲ್ ಬಸ್​ಗಳನ್ನು ಒಟ್ಟು 235.60 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದ ಪಿಎಂ ಇ-ಬಸ್ ಸೇವಾ ಯೋಜನೆ ಅಡಿಯಲ್ಲಿ ರಾಜ್ಯದ ಮೂರು ಸಾರಿಗೆ ನಿಗಮಗಳಿಗೆ 10 ನಗರಗಳ 11 ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ ಘಟಕಗಳನ್ನು 112.72 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.ಸಚಿವ ಸಂಪುಟ ಉಪ ಸಮಿತಿಗಳನ್ನು ಪುನರ್ ರಚಿಸಲು ನಿರ್ಧಾರ.

Leave a Reply

Your email address will not be published. Required fields are marked *